ಮಂಗಳೂರು, ಮೇ 27, 2026 (ಕರಾವಳಿ ಟೈಮ್ಸ್) : ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮರಗಳ ರೆಂಬೆ-ಕೊಂಬೆಗಳು ಆವರಿಸಿಕೊಂಡಿದ್ದು, ಮಳೆಗಾಲದಲ್ಲಿ ಅಪಾಯದ ಕರೆಗಂಟೆ ಭಾರಿಸುತ್ತಿದೆ. ಈಗಾಗಲೇ ಮುಂಗಾರುಪೂರ್ವ ಮಳೆ-ಗಾಳಿಗೆ ಕೆಲವೆಡೆ ಮರಗಳ ರೆಂಬೆ-ಕೊಂಬೆಗಳು ರಸ್ತೆಗೆ, ವಿದ್ಯುತ್ ಕಂಬ-ತಂತಿಗಳಿಗೆ ಬಿದ್ದು ಅವಾಂತರ ಸೃಷ್ಟಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಪ್ರವೇಶ ಪಡೆಯಲಿದ್ದು, ಮಳೆಗಾಲದಲ್ಲಿ ನಿರಂತರವಾಗಿ ಮಳೆ, ಗಾಳಿ ಬರುವ ಸಂದರ್ಭ ಹೆದ್ದಾರಿ, ಒಳ ರಸ್ತೆಗಳನ್ನು ಆವರಿಸಿಕೊಂಡಿರುವ ಬೃಹತ್ ಮರದ ರೆಂಬೆ-ಕೊಂಬೆಗಳು ಮುರಿದು ಬೀಳುವ ಆತಂಕ ಉಂಟಾಗಿದೆ. ಪುತ್ತೂರು-ಮಂಗಳೂರು ಸಂಚಾರದ ಹೆದ್ದಾರಿಯ ಪುತ್ತೂರು, ಮಾಣಿ, ಫರಂಗಿಪೇಟೆ, ಅರ್ಕುಳ, ಅಡ್ಯಾರ್ ಮೊದಲಾದೆಡೆ ಹೆದ್ದಾರಿ ಬದಿಯಲ್ಲಿರುವ ಬೃಹತ್ ಮರಗಳ ರೆಂಬೆ ಕೊಂಬೆಗಳು ರಸ್ತೆಯನ್ನು ಆವರಿಸಿಕೊಂಡಿರುವುದು ಕಂಡು ಬರುತ್ತಿದೆ. ಇದು ಮಳೆಗಾಲದಲ್ಲಿ ಮುರಿದು ಬಿದ್ದರೆ ವಾಹನ ಸವಾರರ ಹಾಗೂ ಸಾರ್ವಜನಿಕರ ಪಾಲಿಗೆ ಅಪಾಯ ತಂದೊಡ್ಡುವ ಆತಂಕ ಎದುರಾಗಿದೆ.
ಹೆದ್ದಾರಿ ಮಾತ್ರವಲ್ಲದೆ ಇತರ ಒಳ ರಸ್ತೆಗಳಲ್ಲೂ ಇಂತಹ ಅಪಾಯಕಾರಿ ಸನ್ನಿವೇಶಗಳಿದ್ದು, ಗಾಳಿ ಮಳೆಗೆ ಮರ ಅಥವಾ ರೆಂಬೆ-ಕೊಂಬೆಗಳು ರಸ್ತೆಯಲ್ಲಿ ಸಂಚರಿಸುವ ವಾಹನಗಳು, ವಿದ್ಯುತ್ ತಂತಿ-ಕಂಬಗಳ ಮೇಲೆ ಬೀಳುವ ಸಾಧ್ಯತೆಗಳೂ ಇರುವುದರಿಂದ ಸಂಬಂಧಪಟ್ಟ ಇಲಾಖೆಗಳು ಸಮನ್ವಯತೆ ಸಾಧಿಸಿಕೊಂಡು ಅಪಾಯಕಾರಿ ಮರ, ರೆಂಬೆ-ಕೊಂಬೆಗಳ ತೆರವಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.


























0 comments:
Post a Comment