ಬಂಟ್ವಾಳ, ಮೇ 13, 2026 (ಕರಾವಳಿ ಟೈಮ್ಸ್) : ಭಾಷೆ ಬೆಳೆಯಲು ಸಾಹಿತ್ಯ ಬೇಕು. ಸಾಹಿತಿಗಳಿಗೆ ಭದ್ರತೆ ಬೇಕು. ಭಾಷೆ, ಸಾಹಿತ್ಯ, ಹಾಡು ಎಂದೆಲ್ಲಾ ಹೇಳಿ ಅದರ ಹಿಂದೆ ಹೋದರೆ ಅದು ಮನಸ್ಸಿಗೆ ಖುಷಿ ನೀಡುತ್ತದೆ. ಆದರೆ ಅದರಿಂದ ಬದುಕಿಗೇನಾದರೂ ಭದ್ರತೆ ಸಿಗುತ್ತದೆಯೇ ಎಂದು ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಹೀಂ ಬಿ ಸಿ ರೋಡು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಸಹಯೋಗದಲ್ಲಿ ಪಾಣೆಮಂಗಳೂರಿನ ಆಲಡ್ಕದ ಎಸ್ ಎಸ್ ಆಡಿಟೋರಿಯಂ ಇಲ್ಲಿನ ಮರ್ ಹೂಂ ಫಾರೂಕ್ ಗೂಡಿನಬಳಿ ದ್ವಾರ, ಮರ್ ಹೂಂ ಮಹಮ್ಮದ್ ಮಾರಿಪಳ್ಳ ಸಭಾಂಗಣ, ಮರ್ ಹೂಂ ಹಾಜಿ ಜಿ ಅಬ್ದುಲ್ ಖಾದರ್ ವೇದಿಕೆಯಲ್ಲಿ ಮೇ 12 ರಂದು ನಡೆದ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷತೆ ವಹಿಸಿ ಭಾಷಣ ಮಾಡಿದೆ ಅವರು, ಬಾಲ್ಯದಿಂದ ಈ ವಯಸ್ಸಿನ ತನಕ ಕವಿ, ಕವನ, ಹಾಡು ಎಂದೇಳಿ ಅದರ ಹಿಂದೆನೇ ಹೋದ ನನಗೆ ಸಾಹಿತ್ಯ ಮನಸ್ಸಿಗೆ ಖುಷಿ ನೀಡುತ್ತದೆ ಹೊರತು ಸಾಹಿತ್ಯ ಸಾಹಿತಿಯ ಹೊಟ್ಟೆ ತುಂಬಿಸುತ್ತಾ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದವರು ವಿಷಾದಿಸಿದರು.
ಸಾಹಿತಿ, ಕವಿ, ಕಲಾವಿದರಿಗೆ ಬದುಕಿಗೆ ಆಧಾರವಾಗಿ ಸರಕಾರ ಮಾಸಾಶನದಂತಹ ಬದುಕಿನ ಭದ್ರತೆ ಒದಗಿಸಬೇಕು. ಆಗ ಮಾತ್ರ ಎಲ್ಲಾ ಭಾಷೆ, ಸಾಹಿತ್ಯ, ಸಂಸ್ಕøತಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟ ರಹೀಂ ಬಿ ಸಿ ರೋಡು ಅವರು, ಬ್ಯಾರಿ ಭಾಷೆಯ ಮಕ್ಕಳು ಇಂದು ಉತ್ತಮ ಶಿಕ್ಷಣ ಪಡೆದು ಎತ್ತರಕ್ಕೆ ಏರಿದ್ದಾರೆ. ದೊಡ್ಡ ದೊಡ್ಡ ಕಂಪೆನಿಗಳ ಮಾಲಕರಾಗಿದ್ದಾರೆ. ಇದು ಸಂತೋಷದ ವಿಚಾರ. ಈ ಮದ್ಯೆ ಕೆಲವು ಮಕ್ಕಳು ಶಿಕ್ಷಣ ಅರ್ಧದಲ್ಲೇ ಮೊಟಕುಗೊಳಿಸಿ ಸಹವಾಸ ದೋಷದಿಂದ ಹಾದಿ ತಪ್ಪುತ್ತಿದ್ದಾರೆ. “ಅರ್ಧ ತಿಳುವಳಿಕೆ ಜನರನ್ನು ಕೊಲ್ಲುತ್ತದೆ” ಎಂಬ ಮಾತಿನಂತೆ ಅರ್ಧಂಬರ್ಧ ಕಲಿತು, ದಾರಿ ತಪ್ಪಿ, ಕಾನೂನು ಉಲ್ಲಂಘನೆ ಮಾಡಿ ಅವರ ಭವಿಷ್ಯಕ್ಕೆ ಅವರೇ ಕಲ್ಲು ಹಾಕುತ್ತಿದ್ದಾರೆ ಎಂದು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ರೀತಿಯಾಗದೆ ಬ್ಯಾರಿ ಸಮುದಾಯ ಗೌರವಯುತ ಸಮುದಾಯ. ಬ್ಯಾರಿಗಳು ಕೆಲಸಗಾರರು, ಶ್ರಮಜೀವಿಗಳು, ನಮ್ಮ ಹಿರಿಯರು ತಲೆ ಎತ್ತಿ ನಡೆದಿದ್ದರು. ಅವರಿಗೆ ಸಮಾಜದಲ್ಲಿ ತುಂಬಾ ಗೌರವವಿತ್ತು. ಆ ಗೌರವ ಉಳಿಸಿಕೊಳ್ಳುವುದು ಯುವಜನರ ಜವಾಬ್ದಾರಿ. ತಂದೆ-ತಾಯಂದಿರು ಮಕ್ಕಳಿಗೆ ಯಾವುದೇ ಮಾಧ್ಯಮದಲ್ಲಿ ಶಿಕ್ಷಣ ನೀಡಲಿ. ಮಕ್ಕಳಿಗೆ ಉತ್ತಮ ಶಿಕ್ಷಣ ಮಾತ್ರ ನೀಡಿದರೆ ಸಾಲದು. ಉತ್ತಮ ತರಬೇತಿ ಮತ್ತು ಜೀವನ ಮೌಲ್ಯವನ್ನು ಪಾಲಕರು ಕಲಿಸಬೇಕು ಎಂದು ಆಗ್ರಹಿಸಿದರು.
ಕಲಿತವರು, ಹಣವಂತರು, ಬಿಳಿ ಕಾಲರ್ ಕೆಲಸ ಮಾಡುವವರು ಮನೆಯಲ್ಲಿ ಮಕ್ಕಳೊಂದಿಗೆ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವ ಮೂಲಕ ಮಾತೃ ಭಾಷೆಯನ್ನು ತಿರಸ್ಕಾರ ಮಾಡಿ, ಸಾಹಿತಿಗಳು, ಕವಿಗಳು ಭಾಷೆ ಉಳಿಸಬೇಕು ಎನ್ನುವುದು ಅಸಾಧ್ಯವಾದ ಮಾತು. ಆದ್ದರಿಂದ ನೀವು ಎಷ್ಟೇ ಎತ್ತರಕ್ಕೆ ಬೆಳೆಯಿರಿ, ಯಾವ ದೇಶದಲ್ಲಾದರೂ ಇರಿ, ಯಾವ ಸಂಸ್ಥೆಯಲ್ಲಾದರೂ ಕೆಲಸ ಮಾಡಿ, ಎಷ್ಟೇ ದೊಡ್ಡ ಶ್ರೀಮಂತರಾಗಿರಿ, ಮಾತೃ ಭಾಷೆ ಮರೆಯದಿರಿ, ಮನೆಯಲ್ಲಿ ಮಾತೃಭಾಷೆಯಲ್ಲೇ ಮಾತನಾಡಿ ಎಂದು ರಹೀಂ ಬಿ ಸಿ ರೋಡು ಕರೆ ನೀಡಿದರು.
ಬ್ಯಾರಿ ನಮ್ಮ ಮಾತೃ ಭಾಷೆ, ಭಾಷೆಯನ್ನು ಉಳಿಸುವ ಜವಾಬ್ದಾರಿ ಸಾಹಿತಿಗಳದ್ದು, ಕವಿಗಳದ್ದು ಎಂಬ ಸಾಮಾನ್ಯ ಅಭಿಪ್ರಾಯವಿದೆ. ಆದರೆ ಭಾಷೆಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಬ್ಯಾರಿಯದ್ದು ಎಂಬುದು ನನ್ನ ಅಭಿಮತ ಎಂದ ರಹೀಂ ಬಿ ಸಿ ರೋಡು, ಡಾಕ್ಟರ್, ಇಂಜಿನಿಯರ್, ಶಿಕ್ಷಕ, ವಕೀಲ ಅಥವಾ ಯಾವುದೇ ಕ್ಷೇತ್ರದಲ್ಲಿ ಇಂದು ಕೆಲಸ ಮಾಡುತ್ತಿರುವ ಅವನಿಗೆ ಅಥವಾ ಅವಳಿಗೆ ಮಾತೃ ಭಾಷೆಯನ್ನು ಉಳಿಸುವ ಜವಾಬ್ದಾರಿ ಇದೆ ಎಂದರು.
ಕಲಿತವರು, ಹಣವಂತರು, ಬಿಳಿ ಕಾಲರ್ ಕೆಲಸ ಮಾಡುವವರು ಮನೆಯಲ್ಲಿ ಮಕ್ಕಳೊಂದಿಗೆ ಇಂಗ್ಲಿಷ್ ಮಾತನಾಡುವ ಮೂಲಕ ಮಾತೃ ಭಾಷೆಯನ್ನು ತಿರಸ್ಕಾರ ಮಾಡಿ, ಸಾಹಿತಿಗಳು, ಕವಿಗಳು ಭಾಷೆಯನ್ನು ಉಳಿಸಬೇಕು ಎನ್ನುವುದು ಅಸಾಧ್ಯದ ಮಾತು. ಆದುದರಿಂದ ನೀವು ಎಷ್ಟೇ ಎತ್ತರಕ್ಕೆ ಬೆಳೆಯಿರಿ, ಯಾವ ದೇಶದಲ್ಲಾದರೂ ಇರಿ, ಯಾವ ಸಂಸ್ಥೆಯಲ್ಲಾದರೂ ಕೆಲಸ ಮಾಡಿ, ಎಷ್ಟೇ ದೊಡ್ಡ ಶ್ರೀಮಂತರಾಗಿರಿ, ಅದರಲ್ಲೇನೂ ಸಮಸ್ಯೆ ಇಲ್ಲ, ಆದರೆ ಮಾತೃ ಭಾಷೆಯನ್ನು ಮರೆಯಬೇಡಿ, ಮನೆಯಲ್ಲಿ ಮಾತೃ ಭಾಷೆಯನ್ನೇ ಮಾತನಾಡಿರಿ ಎಂದ ರಹೀಂ ಅವರು, ಹೆಂಡತಿ, ಗಂಡ, ಗೆಳೆಯರು, ಮಕ್ಕಳೊಂದಿಗೆ ಮಾತೃ ಭಾಷೆಯಲ್ಲೇ ಮಾತನಾಡಿರಿ, ಮಾತೃ ಭಾಷೆಗಿರುವ ರುಚಿ ಇಂಗ್ಲೀಷ್ ಭಾಷೆಗಿಲ್ಲ ಎಂಬುದನ್ನು ನಾವು ಒಪ್ಪಲೇಬೇಕು. ಭಾಷೆಯನ್ನು ಉಳಿಸುವುದು ಪ್ರತಿಯೊಬ್ಬರ ಬ್ಯಾರಿಯ ಜವಾಬ್ದಾರಿಯಾಗಿದೆ. ಭಾಷೆಯನ್ನು ಬೆಳಸುವುದು ಸಾಹಿತಿ, ಕವಿಗಳ ಜವಾಬ್ದಾರಿ. ನನ್ನಂತಹ ಅದೆಷ್ಟೋ ಹಾಡುಗಾರರು, ಕಲಾವಿದರು, ಕವಿಗಳು, ಸಾಹಿತಿಗಳು, ಬರಹಗಾರರು ಬ್ಯಾರಿ ಭಾಷೆಯ ಸಾಹಿತ್ಯ ಕೃಷಿ ಮಾಡಿದ್ದರಿಂದ ಇಂದು ಈ ಭಾಷೆ ಇಷ್ಟು ಬೆಳೆದಿದೆ ಎಂಬುದನ್ನು ನಾವು ಮರೆಯಬಾರದು ಎಂದು ಕರೆ ನೀಡಿದರು.
ಇಂದು ದೊಡ್ಡ ಸಂಖ್ಯೆಯ ಯುವಕ ಯುವತಿಯರು ಬ್ಯಾರಿ ಭಾಷೆಯಲ್ಲಿ ಬರೆಯುತ್ತಿದ್ದಾರೆ. ಹಾಡುತ್ತಿದ್ದಾರೆ. ನಾಟಕ ನಿರ್ದೇಶಿಸಿ ಪ್ರದರ್ಶಿಸುತ್ತಿದ್ದಾರೆ. ಹೊಸ ತಲೆಮಾರು ಸಾಹಿತ್ಯವನ್ನು ಪ್ರೀತಿಸಬೇಕೆಂದರೆ ಅವರಿಗೆ ಸರಿಯಾದ ಅವಕಾಶಗಳನ್ನು ಕಲ್ಪಿಸಬೇಕು. ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರತಿ ತಾಲೂಕು ಮಟ್ಟಗಳಲ್ಲಿ ಹಮ್ಮಿಕೊಳ್ಳುತ್ತಿರುವ ಸಾಹಿತ್ಯ ಸಮ್ಮೇಳನಗಳು ಹೊಸ ತಲೆಮಾರಿಗೆ ಪ್ರೋತ್ಸಾಹ ನೀಡುತ್ತಿದೆ ಎಂಬ ಭರವಸೆ ನನಗಿದೆ ಎಂದು ಆಶಿಸಿದ ಅವರು, ಬರಹ, ಅಭಿನಯ, ತರಬೇತಿ ನೀಡಿ ಶಾಲೆ, ಕಾಲೇಜುಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಈ ಕ್ಷೇತ್ರಗಳಿಗೆ ಧುಮುಕಲು ಪ್ರೋತ್ಸಾಹ ನೀಡುವ ಕೆಲಸವನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇನ್ನೂ ಹೆಚ್ಚು ಹೆಚ್ಚು ಮಾಡಬೇಕು ಎಂದು ಮನವಿ ಮಾಡಿದರು.
ನಾವೆಲ್ಲ ಬ್ಯಾರಿ ಭಾಷೆಯಲ್ಲಿ ಮಾತಾಡೋಣ, ಬ್ಯಾರಿ ಭಾಷೆಯಲ್ಲಿ ಬರೆಯೋಣ, ಬ್ಯಾರಿ ಭಾಷೆಯಲ್ಲಿ ಹಾಡೋಣ, ಬ್ಯಾರಿ ಭಾಷೆಯ ಕಂಪನ್ನು ಎಲ್ಲರಿಗೂ ನೀಡೋಣ. ಮಾತೃ ಭಾಷೆಯನ್ನು ಪ್ರೀತಿಸೋಣ, ಅದರೊಂದಿಗೆ ತುಳು, ಕನ್ನಡ, ಉರ್ದು, ಕೊಂಕಣಿ ಭಾಷೆಗಳನ್ನು ಗೌರವಿಸೋಣ ಎಂದು ರಹೀಂ ಬಿ ಸಿ ರೊಡು ಸಂದೇಶ ನೀಡಿದರು.











0 comments:
Post a Comment