ಮಾಣಿ : ಲಾರಿಯ ಹಿಂಬದಿಗೆ ಸ್ಕೂಟರ್ ಡಿಕ್ಕಿ ಹೊಡೆದು ಸವಾರ ದಾರುಣ ಮೃತ್ಯು - Karavali Times ಮಾಣಿ : ಲಾರಿಯ ಹಿಂಬದಿಗೆ ಸ್ಕೂಟರ್ ಡಿಕ್ಕಿ ಹೊಡೆದು ಸವಾರ ದಾರುಣ ಮೃತ್ಯು - Karavali Times

728x90

26 May 2026

ಮಾಣಿ : ಲಾರಿಯ ಹಿಂಬದಿಗೆ ಸ್ಕೂಟರ್ ಡಿಕ್ಕಿ ಹೊಡೆದು ಸವಾರ ದಾರುಣ ಮೃತ್ಯು

ಬಂಟ್ವಾಳ, ಮೇ 26, 2026 (ಕರಾವಳಿ ಟೈಮ್ಸ್) : ರಸ್ತೆ ಬದಿ ಲಾರಿ ನಿಲ್ಲಿಸಿ ಚಾಲಕ ಟಯರ್ ಪರಿಶೀಲನೆ ನಡೆಸುತ್ತಿದ್ದ ವೇಳೆ ಹಿಂದಿನಿಂದ ಬಂದ ಸ್ಕೂಟರ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಬಳಿ ಮೇ 25 ರಂದು ಮಧ್ಯಾಹ್ನ ವೇಳೆ ಸಂಭವಿಸಿದೆ. 

ಮೃತ ಸ್ಕೂಟರ್ ಸವಾರನನ್ನು ಸುಳ್ಯ-ಗಾಂಧಿನಗರ ನಿವಾಸಿ ಎನ್ ಎಂ ಮುಹಮ್ಮದ್ ಖಲಂದರ್ ಷಾ ಎಂದು ಗುರುತಿಸಲಾಗಿದೆ. ಈ ಬಗ್ಗೆ ಲಾರಿ ಚಾಲಕ ಪುತ್ತೂರು-ಪರ್ಲಡ್ಕ ನಿವಾಸಿ ಶಾಹುಲ್ ಹಮೀದ್ (41) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಕೆಎ-21-ಬಿ-3478 ನೋಂದಣಿ ಸಂಖ್ಯೆಯ ಅಶೋಕ ಲೈ ಲ್ಯಾಂಡ್ ಎಕೋಮೆಟ್ ಲಾರಿಯ ಚಾಲಕ ಮತ್ತು ಮಾಲಿಕರಾಗಿದ್ದು, ಲಾರಿಯಲ್ಲಿ ಸರಕು ಸಾಮಾನುಗಳನ್ನು ಸಾಗಾಟ ಮಾಡುತ್ತಿದ್ದು, ಮೇ 24 ರಂದು ಲಾರಿಯಲ್ಲಿ ಬೆಂಗಳೂರಿನಿಂದ ಸರಕನ್ನು ಲೋಡ್ ಮಾಡಿಕೊಂಡು ಬಂದು ಮೇ 25 ರಂದು ಸರಕುಗಳನ್ನು ಮಂಗಳೂರಿನಲ್ಲಿ ಅನ್ ಲೋಡ್ ಮಾಡಿದ ಬಳಿಕ ಮನೆಗೆ ಹೋಗಲು ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಮಾಣಿ ಗ್ರಾಮದ ಗಜಾನನ ಸರ್ವಿಸ್ ಸ್ಟೇಷನ್ ಬಳಿ ಲಾರಿ ನಿಲ್ಲಿಸಿ ಲಾರಿಯಿಂದ ಇಳಿದು ಮುಂಬಾಗದ ಟಯರಿನ ಗಾಳಿಯನ್ನು ಪರಿಶೀಲಿಸುತ್ತಿರುವಾಗ ಮಧ್ಯಾಹ್ನ 2.40 ರ ವೇಳೆಗೆ ಲಾರಿಯ ಹಿಂಬಾಗಕ್ಕೆ ಸ್ಕೂಟರ್ ಅಫಘಾತವಾಗಿದೆ. 

ಮೃತ ಖಲಂದರ್ ಷಾ ಚಲಾಯಿಸಿಕೊಂಡು ಬಂದ ಕೆಎ-21-ಇಡಿ-8227 ನೋಂದಣಿ ಸಂಖ್ಯೆಯ ಸ್ಕೂಟರ್ ಲಾರಿಯ ಹಿಂಬಾಗಕ್ಕೆ ಅಪಘಾತಪಡಿಸಿದ್ದು, ಅಪಘಾತದ ತೀವ್ರತೆಗೆ ಸ್ಕೂಟರ್ ಸವಾರ ಖಲಂದರ್ ಷಾ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಲಾರಿ ಚಾಲಕ ಹಾಗೂ ಸಾರ್ವಜನಿಕರು ಸೇರಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. 

ಅಪಘಾತದಿಂದ ಲಾರಿಯ ಹಿಂಭಾಗ ಜಖಂಗೊಂಡಿದ್ದು, ಸ್ಕೂಟರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾಣಿ : ಲಾರಿಯ ಹಿಂಬದಿಗೆ ಸ್ಕೂಟರ್ ಡಿಕ್ಕಿ ಹೊಡೆದು ಸವಾರ ದಾರುಣ ಮೃತ್ಯು Rating: 5 Reviewed By: karavali Times
Scroll to Top