ಬಂಟ್ವಾಳ, ಮೇ 25, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಾಡಳಿತ ಸೌಧದ ಒಳಭಾಗದಲ್ಲಿ ಯಾವುದೇ ರೀತಿಯ ಪ್ರತಿಭಟನೆ ನಡೆಸಲು ಹಾಗೂ ಬ್ಯಾನರ್/ ಧ್ವಜ ಅಳವಡಿಸಲು ಅವಕಾಶ ಇರುವುದಿಲ್ಲ ಎಂದು ಬಂಟ್ವಾಳ ತಾಲೂಕು ತಹಶೀಲ್ದಾರ್ ಮಂಜುನಾಥ್ ಅವರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಈ ಬಗ್ಗೆ ತಾಲೂಕು ಕಚೇರಿ ಆವರಣದಲ್ಲಿ ಅವರು ಪ್ಲೆಕ್ಸ್ ಅಳವಡಿಸಿ ಸಾರ್ವಜನಿಕರ ಗಮನಕ್ಕೆ ತಂದಿದ್ದಾರೆ. ಸಾರ್ವಜನಿಕರ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ. ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ಬಂಟ್ವಾಳ ತಾಲೂಕಿಗೊಳಪಟ್ಟ ಮೂರು ಕುಟುಂಬಗಳ ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿದಂತೆ ಪುತ್ತೂರು ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಪುತ್ತೂರು ಹಾಗೂ ಬಂಟ್ವಾಳ ಮಂಡಲದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರ ಸೇರುವಿಕೆಯಿಂದ ಬಂಟ್ವಾಳ ಮಿನಿ ವಿಧಾನಸೌಧದ ಮೆಟ್ಟಲ ಮೇಲೆ 3-4 ದಿನಗಳ ಕಾಲ ಪ್ರತಿಭಟನೆ ನಡೆಸಿ ನಿರಂತರ ಘೋಷಣೆಗಳನ್ನು ಕೂಗಿದ್ದರು. ಕಚೇರಿ ಕೆಲಸದ ಅವಧಿಯಲ್ಲಿ ನಿರಂತರ ಆಹೋರಾತ್ರಿ ಧರಣಿ ನಡೆಸಿದ ಕಚೇರಿಯ ಮೆಟ್ಟಿಲುಗಳನ್ನು ಬ್ಲಾಕ್ ಮಾಡಿದ್ದರಿಂದ ಕಚೇರಿ ಕೆಲಸ-ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗಿರುವ ಬಗ್ಗೆ ಸಾರ್ವಜನಿಕರು ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಇದೀಗ ಬಂಟ್ವಾಳ ತಾಲೂಕು ತಹಶೀಲ್ದಾರ್ ಮಂಜುನಾಥ್ ಅವರು ಆಡಳಿತ ಸೌಧದ ಆವರಣದೊಳಗೆ ಪ್ರತಿಭಟನೆ ನಡೆಸದಂತೆ ಬ್ಯಾನರ್, ಧ್ವಜ ಅಳವಡಿಸಲು ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ. ತಾಲೂಕು ಆವರಣದ ಹೊರಭಾಗದಲ್ಲಿ ನಿಯಮಾನುಸಾರ ಅನುಮತಿ ಪಡೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿರುತ್ತದೆ ಎಂದವರು ಆದೇಶದಲ್ಲಿ ಪ್ರತಿಭಟನಾ ಸ್ವಾತಂತ್ರ್ಯಕ್ಕೂ ಅವಕಾಶ ನೀಡಿದ್ದಾರೆ.












0 comments:
Post a Comment