ಬಂಟ್ವಾಳ, ಮೇ 23, 2026 (ಕರಾವಳಿ ಟೈಮ್ಸ್) : ವಗ್ಗದಲ್ಲಿರುವ ಬಿ ಎಸ್ ಎನ್ ಎಲ್ ಟೆಲಿಫೋನ್ ಎಕ್ಸ್ ಚೇಂಜಿನ ಶಟರ್ ಬೀಗ ಒಡೆದು ಸರಣಿ ಕಳವು ನಡೆಸಿದ ಕಳ್ಳರು ಬ್ಯಾಟರಿ, ಕೇಬಲ್ ಹಾಗೂ ಪ್ಲೇಟ್ ಗಳನ್ನು ಕಳವು ಮಾಡಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬಿ ಸಿ ರೋಡಿನ ಬಿ ಎಸ್ ಎನ್ ಎಲ್ ಜ್ಯೂನಿಯರ್ ಟೆಲಿಕಾಂ ಆಫೀಸರ್ ಸುದರ್ಶನ್ ಕೆ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಬಿ ಎಸ್ ಎನ್ ಎಲ್ ಟವರ್ ಹಾಗೂ ಟೆಲಿಫೋನ್ ಎಕ್ಸ್ ಚೇಂಜ್ ಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ. ಮೇ 16 ರಂದು ಮಧ್ಯರಾತ್ರಿ ಸುಮಾರು 1.19 ರ ವೇಳೆಗೆ ಕಾವಳಪಡೂರು ಗ್ರಾಮದ ವಗ್ಗದಲ್ಲಿರುವ ಟವರ್ ಆಫ್ ಆಗಿರುವ ಬಗ್ಗೆ ಮೊಬೈಲ್ ಆಪ್ ಮೂಲಕ ಮಾಹಿತಿ ಬಂದಿದ್ದು, ಬೆಳಿಗ್ಗೆ 8 ಗಂಟೆಗೆ ಮಾಹಿತಿ ಗಮನಿಸಿದ ಸುದರ್ಶನ್ ಅವರು ಟೆಕ್ನಿಶಿಯನ್ ತಿಮ್ಮಪ್ಪ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದಾಗ ಟೆಲಿಫೋನ್ ಎಕ್ಸ್ ಚೇಂಜಿನ ಶಟರ್ ಬೀಗ ಮುರಿದು ಒಳನುಗ್ಗಿದ ಕಳ್ಳರು ಬ್ಯಾಟರಿ ಜೋಡಣೆಗೆ ಬಳಸಲಾಗಿದ್ದ ಸುಮಾರು 20 ಸಾವಿರ ರೂಪಾಯಿ ಮೌಲ್ಯದ 40 ಮೀಟರ್ ಉದ್ದ ತಾಮ್ರದ ಕೇಬಲ್ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಇದಾದ ಬಳಿಕ ಎಕ್ಸ್ ಚೇಂಜಿಗೆ ಹೊಸ ಬೀಗ ಹಾಕುವಂತೆ ಸೂಚಿಸಿದ್ದಾರೆ. ಮೇ 18 ರಂದು ಬೆಳಿಗ್ಗೆ 10.30ಕ್ಕೆ ಎಜಿಎಂ ಸ್ನೇಹ ಹಾಗೂ ಟೆಕ್ನಿಶಿಯನ್ ತಿಮ್ಮಪ್ಪ ಅವರು ಮತ್ತೆ ಎಕ್ಸ್ ಚೇಂಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಲ್ಲಿನ ಕಿಟಕಿಯ ಗಾಜುಗಳನ್ನು ಪುಡಿಗೈದು ಒಳನುಗ್ಗಿರುವ ಕಳ್ಳರು 35 ಸಾವಿರ ರೂಪಾಯಿ ಮೌಲ್ಯದ 600 ಎ ಎಚ್ ಸಾಮಥ್ರ್ಯದ 4 ಎಕ್ಸ್ ಚೇಂಜ್ ಬ್ಯಾಟರಿಗಳನ್ನು ಹಾಗೂ ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಪ್ಲೇಟ್ ಗಳನ್ನು ಕಳವು ಮಾಡಲಾಗಿದೆ.
ಮೇ 16 ರಿಂದ ಮೇ 18 ರ ನಡುವಿನ ಅವಧಿಯಲ್ಲಿ ಸುಮಾರು 62 ಸಾವಿರ ರೂಪಾಯಿ ಮೌಲ್ಯದ ಬ್ಯಾಟರಿ, ತಾಮ್ರದ ಕೇಬಲ್ ಹಾಗೂ ಪ್ಲೇಟ್ ಗಳನ್ನು ಕಳವು ಮಾಡಲಾಗಿದೆ ಎಂದು ಸುದರ್ಶನ್ ಅವರು ನೀಡಿದ ದೂರಿನ ಮೇರೆಗೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment