ಬಂಟ್ವಾಳ, ಮೇ 22, 2026 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಗೂಡಿನಬಳಿ-ಕಂಚಿಕಾರ ಪೇಟೆ ಎಂಬಲ್ಲಿ ನೇತ್ರಾವತಿ ನದಿಯ ಹೊಸ ಸೇತುವೆಯಡಿಯಲ್ಲಿ ಗುರುವಾರ ಬೆಳಿಗ್ಗೆ ಪತ್ತೆಯಾದ ಮೃತದೇಹದ ಗುರುತು ಪತ್ತೆಯಾಗಿದ್ದು, ಸ್ಥಳೀಯರು ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತ ವ್ಯಕ್ತಿಯನ್ನು ಗೂಡಿನಬಳಿ ನಿವಾಸಿ ಜಿ ಮುಹಮ್ಮದ್ ಎಂಬವರ ಪುತ್ರ ಇರ್ಫಾನ್ (37) ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ಗೂಡಿನಬಳಿ-ಕಂಚಿಕಾರ ಪೇಟೆ ಎಂಬಲ್ಲಿ ನೇತ್ರಾವತಿ ನದಿಯ ಹೊಸ ಸೇತುವೆಯಡಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಕಂಡು ಬಂದಿದ್ದು, ಪುರಸಭಾ ಪೌರ ಕಾರ್ಮಿಕರು ಮೃತದೇಹ ಇರುವ ಬಗ್ಗೆ ಸ್ಥಳೀಯರಿಗೆ ಹಾಗೂ ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಿಟಿ ಅಂಬ್ಯುಲೆನ್ಸ್ ಚಾಲಕ ಹಿದಾಯತ್ ಹಾಗೂ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿಗಳು ಸೇರಿ ಮೃತದೇಹವನ್ನು ಮೇಲಕ್ಕೆತ್ತಿದ್ದರು. ಮೃತದೇಹ ಸಂಪೂರ್ಣ ವಿರೂಪಗೊಂಡ ಸ್ಥಿತಿಯಲ್ಲಿದ್ದು ಸ್ಥಳೀಯರಿಂದ ಗುರುತು ಪತ್ತೆಹಚ್ಚಲಾಗದೆ ಬಂಟ್ವಾಳ ಸರಕಾರಿ ಆಸ್ಪತ್ರೆಯೆ ಶೈತ್ಯಾಗಾರಕ್ಕೆ ಸಾಗಿಸಲಾಗಿತ್ತು.
ಸಂಜೆಯ ಬಳಿಕ ಸ್ಥಳೀಯರು ಮೃತದೇಹದ ಗುರುತು ಪತ್ತೆ ಹಚ್ಚಿದ್ದು, ಗೂಡಿನಬಳಿ ನಿವಾಸಿ ಅಟೋ ರಿಕ್ಷಾ ಚಾಲಕ ಇರ್ಫಾನ್ ಎಂದು ಗುರುತು ಪತ್ತೆ ಹಚ್ಚಿದ್ದಾರೆ. ಈತ ಅತ್ಯುತ್ತಮ ಈಜುಪಟುವಾಗಿದ್ದು, ನೀರಿಗೆ ಬಿದ್ದು ಮೃತಪಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕುಟುಂಬಿಕರು ಹಾಗೂ ಸ್ಥಳೀಯರು ಇದು ನೀರಿನಲ್ಲಿ ಬಿದ್ದು ಸಂಭವಿಸಿದ ಸಾವಲ್ಲ, ಸಾವಿನಲ್ಲಿ ಸಂಶಯಗಳಿವೆ ಎಂದು ಶಂಕೆ ವ್ಯಕ್ತಪಡಿಸಿ ಸಮಗ್ರ ತನಿಖೆ ನಡೆಸುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ. ಗುರುವಾರ ಸಂಜೆಯಿಂದ ರಾತ್ರಿವರೆಗೂ ಮೃತದೇಹ ಇಡಲಾಗಿರುವ ಬಂಟ್ವಾಳ ಸರಕಾರಿ ಆಸ್ಪತ್ರೆಯ ವಠಾರದಲ್ಲಿ ಭಾರೀ ಸಂಖ್ಯೆಯಲ್ಲಿ ಸ್ಥಳೀಯರು ಜಮಾಯಿಸಿದ್ದರು. ಮೃತ ಇರ್ಫಾನ್ ವಿವಾಹಿತನಾಗಿದ್ದು, ಮೂರು ಮಂದಿ ಅಪ್ರಾಪ್ರ ವಯಸ್ಸಿನ ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಸಮಯ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಈತ ಸುಮಾರು ಆರು ವರ್ಷಗಳ ಹಿಂದೆ ಊರಿಗೆ ಬಂದು ಅಟೋ ಚಾಲಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ. ಮಂಗಳವಾರ ರಾತ್ರಿಯಿಂದ ಕಳೆದ ಈತ ನಾಪತ್ತೆಯಾಗಿದ್ದ ಎನ್ನಲಾಗಿದ್ದು, ಗುರುವಾರ ನದಿ ನೀರಿನಲ್ಲಿ ಮೃತದೇಹ ಪತ್ತೆಯಾಗಿದೆ. ಈತನ ಸಾವಿನಲ್ಲಿ ವ್ಯಾಪಕ ಶಂಕೆ ವ್ಯಕ್ತಪಡಿಸಿರುವ ಕುಟುಂಬಿಕರು ಹಾಗೂ ಸ್ಥಳೀಯರು ತನಿಖೆಗಾಗಿ ಆಗ್ರಹಿಸಿದ್ದಾರೆ.













0 comments:
Post a Comment