ಮಂಗಳೂರು, ಜೂನ್ 26, 2026 (ಕರಾವಳಿ ಟೈಮ್ಸ್) : ಸಸಿಗಳನ್ನು ನೆಡುವ ಬೃಹತ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಾರ್ಯಕ್ರಮಕ್ಕೆ ಕಟ್ಟಡ ಕಾರ್ಮಿಕರ ಸೌಲಭ್ಯಗಳಿಗೆ ಮೀಸಲಾದ ಕಲ್ಯಾಣ ಮಂಡಳಿಯ ನಿಧಿಯ 10 ಕೋಟಿ ರೂಪಾಯಿಗಳನ್ನು ಬಳಕೆ ಮಾಡುವ ಕ್ರಮವು ಅತ್ಯಂತ ಖಂಡನಾರ್ಹವಾಗಿದ್ದು, ಪ್ರಗತಿಪರ ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಎಐಸಿಸಿಟಿಯು) ವಿರೋಧಿಸಿದ್ದು. ಸಸಿ ನೆಡುವ ಸರ್ಕಾರಿ ಕಾರ್ಯಕ್ರಮಕ್ಕೆ ಕಟ್ಟಡ ಕಾರ್ಮಿಕರ ನಿಧಿ ಬಳಸುವುದನ್ನು ಕೈಬಿಡಬೇಕೆಂದು ಆಗ್ರಹಿಸಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರಿಗೆ ಪಿಂಚಣಿ, ವೈದ್ಯಕೀಯ, ವಿದ್ಯಾರ್ಥಿ ವೇತನ, ಹೆರಿಗೆ ಭತ್ಯೆ, ಮರಣ ಪರಿಹಾರ ಇತ್ಯಾದಿಗಳಿಗಾಗಿ ಸಂಗ್ರಹವಾಗಿರುವ ನೂರಾರು ಕೋಟಿ ಹಣದಲ್ಲಿ 10 ಕೋಟಿ ರೂಪಾಯಿಗಳನ್ನು ಏಕಪಕ್ಷಿಯವಾಗಿ ಖರ್ಚುಮಾಡಲು ಹೊರಟಿರುವುದು ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಭ್ರಷ್ಟಚಾರಕ್ಕೊಂದು ಸಾಕ್ಷಿಯಾಗಿದೆ ಎಂದು ಸಂಘ ಆರೋಪಿಸಿದೆ.
ಕಲ್ಯಾಣ ಮಂಡಳಿಯು ಒಂದು ತ್ರೀಪಕ್ಷೀಯ ಸಮಿತಿಯಾಗಿದ್ದು ಅಲ್ಲಿ ಚರ್ಚಿಸದೇ ಕಾರ್ಮಿಕ ಕಲ್ಯಾಣಕ್ಕೆ ಸಂಬಂಧವಿರದ ಸರ್ಕಾರದ ಇನ್ನೊಂದು ಇಲಾಖೆಯ ಕಾರ್ಯಕ್ರಮಕ್ಕೆ ಈ ರೀತಿ ನಿಧಿ ವಿನಿಯೋಗಿಸುವುದು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದಿದೆ.
ಮಂಡಳಿಯು ಸಸಿ ನೆಡುವ ಕಾರ್ಯಕ್ರಮಕ್ಕೆ ನೀಡುವ ಹಣ ಬಳಕೆಯನ್ನು ಕೂಡಲೇ ಹಿಂಪಡೆಯಬೇಕೆಂದು ಮಂಗಳೂರು ಸಹಾಯಕ ಕಾರ್ಮಿಕ ಆಯುಕ್ತರ ಮೂಲಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಪ್ರಧಾನ ಕಾರ್ಯದರ್ಶಿಗೆ ಎಐಸಿಸಿಟಿಯು ಮನವಿ ಸಲ್ಲಿಸಿದೆ.
ನಿಯೋಗದಲ್ಲಿ ಪ್ರಗತಿಪರ ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ಎಐಸಿಸಿಟಿಯು) ಜಿಲ್ಲಾದ್ಯಕ್ಷ ರಾಮಣ್ಣ ವಿಟ್ಲ, ಕಾರ್ಯದರ್ಶಿ ಮೋಹನ್ ಕೆ ಇ, ಪ್ರಮುಖರಾದ ವಿಲ್ಲಿ ವಿಲ್ಸನ್, ಮಾರ್ಟಿನ್ ಬಂಟ್ವಾಳ, ಬಾಲಕೃಷ್ಣ ಶೆಟ್ಟಿ, ಅಬ್ದುಲ್ ಹಮೀದ್, ಡೆನ್ನಿಸ್ ಡಿ ಸೋಜ, ಜಾನ್ ಡಿ ಸೋಜ ಮೊದಲಾದವರು ಇದ್ದರು















0 comments:
Post a Comment