ಬಂಟ್ವಾಳ, ಜೂನ್ 09, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಹಾಗೂ ಗೆಟಿಕ್ಸ್ ಹೆಲ್ತ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಜೂನ್ 8 ರಂದು ಉಚಿತ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು.
ಶಾಲೆಯ ಎಲ್ಲಾ ಮಕ್ಕಳೂ ಶೈಕ್ಷಣಿಕ ಸಬಲೀಕರಣ ಮತ್ತು ಕಲಿಕೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವ ಉದ್ದೇಶದಿಂದ ಸಂಸ್ಥೆಯು ಈ ಸೇವಾ ಕಾರ್ಯ ಮಾಡಿದೆ.
ಈ ಸಂದರ್ಭ ಮಾತನಾಡಿದ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಪ್ರತಿನಿಧಿ ಹೇಮಂತ್ ಅವರು, ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ, ವಿದ್ಯಾರ್ಥಿಗಳು ಛಲ, ದೃಢಸಂಕಲ್ಪ, ಶಿಸ್ತು, ಸಂಯಮ ಮತ್ತು ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಕಲಿಕೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ ತಮ್ಮ ಬದುಕನ್ನು ಉತ್ತಮವಾಗಿ ರೂಪಿಸಿಕೊಂಡು, ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕೆಂದು ಕರೆ ನೀಡಿದರಲ್ಲದೆ ಮುಂದಿನ ವರ್ಷದಿಂದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ನೋಟ್ ಪುಸ್ತಕಗಳ ಜೊತೆಗೆ ಉಚಿತ ಬ್ಯಾಗ್ ವಿತರಿಸುವ ಭರವಸೆ ನೀಡಿದರು.
ಇದೇ ವೇಳೆ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ 603 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾದ ಕು ಶ್ರಾವ್ಯ ಅವರನ್ನು ಸನ್ಮಾನಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಶಿವಪ್ಪ ನಾಯಕ್ ಸ್ವಾಗತಿಸಿದರು. ಶಿಕ್ಷಕರಾದ ಶ್ರೀಮತಿ ವೀಣಾ ವಂದಿಸಿ, ಸುಧಾಕರ್ ಅವರು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಕುರಿತು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಶ್ರೀಮತಿ ತೇಜಸ್ವಿನಿ ಅವರು ಶ್ರಾವ್ಯಾಳ ಸನ್ಮಾನ ಪತ್ರ ವಾಚಿಸಿದರು. ಧನರಾಜ್ ಡಿ ಆರ್ ಕಾರ್ಯಕ್ರಮ ನಿರೂಪಿಸಿದರು.















0 comments:
Post a Comment