ಮಂಗಳೂರು, ಜೂನ್ 29, 2026 (ಕರಾವಳಿ ಟೈಮ್ಸ್) : ಮಹಿಳೆಯರ ಸರ ಸುಲಿಗೆ ಪ್ರಕರಣ ಬೇಧಿಸಿದ ಸುರತ್ಕಲ್ ಪೊಲೀಸರು ಚಿನ್ನಾಭರಣ ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಸುರತ್ಕಲ್-ಕಾಟಿಪಳ್ಳದ 2ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಅಬ್ದುಲ್ ಜಾಫರ್ (28) ಎಂದು ಹೆಸರಿಸಲಾಗಿದೆ.
ಜೂನ್ 26 ರಂದು ಮುಂಜಾನೆ 2 ಗಂಟೆ ವೇಳೆಗೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಅಜಾದ್ ನಗರದ 2ನೇ ಬ್ಲಾಕ್ ನಿವಾಸಿ ಶ್ರೀಮತಿ ಜಾಹೀದ್ ಅವರು ತನ್ನ ಮನೆಯ ಬೆಡ್ ರೂಮಿನಲ್ಲಿ ಮಲಗಿದ್ದಾಗ ಅಪರಿಚಿತ ವ್ಯಕ್ತಿಯು ಕಿಟಿಕಿ ಮೂಲಕ ಕೈ ಹಾಕಿ ಶ್ರೀಮತಿ ಜಾಹೀದ್ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಸುಲಿಗೆ ಮಾಡಿದ್ದು, ಈ ಸಂದರ್ಭ ಕರಿಮಣಿ ಸರ ತುಂಡಾಗಿ ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಸರದ ತುಂಡನ್ನು ಆರೋಪಿ ಕೊಂಡುಹೋಗಿದ್ದಾನೆ. ಉಳಿದ ಕರಿಮಣಿ ಸರ ಮಹಿಳೆಯ ಬಳಿ ಉಳಿದಿರುತ್ತದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದೇ ರೀತಿ ಜೂನ್ 27 ರಂದು ಬೆಳಿಗ್ಗೆ 5 ಗಂಟೆಯಿಂದ 5.15 ರ ಮದ್ಯೆ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು 8ನೇ ಬ್ಲಾಕ್ ನಿವಾಸಿ ಫಯಾಜ್ ಎಂಬವರು ಮುಂಜಾನೆ 5 ಗಂಟೆಗೆ ಮಸೀದಿಗೆ ಪ್ರಾರ್ಥನೆಗೆಂದು ಹೋದಾಗ ತನ್ನ ಮನೆಯ ಬಾಗಿಲನ್ನು ಮುಚ್ಚಿಹೋಗಿದ್ದರು. ಅದೇ ವೇಳೆಗೆ ಅಪರಿಚಿತ ವ್ಯಕ್ತಿಯು ಬಾಗಿಲನ್ನು ತೆರೆದು ಮನೆಯ ಒಳಗಡೆ ಪ್ರವೇಶಿಸಿ ಬೆಡ್ ರೂಮಿನಲ್ಲಿ ಮಲಗಿದ್ದ ಶ್ರೀಮತಿ ಅಪ್ರೀನಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡಾಗ ಚಿನ್ನದ ಸರ ತುಂಡಾಗಿದ್ದು, ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರ ಆರೋಪಿ ಕೊಂಡುಹೋಗಿದ್ದು, ಚಿನ್ನದ ಸಣ್ಣ ತುಂಡು ಹಾಗೂ ಪೆಂಡೆಂಟ್ ಮಹಿಳೆ ಬಳಿ ಉಳಿದಿರುತ್ತದೆ. ಈ ಬಗ್ಗೆಯೂ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎರಡೂ ಸುಲಿಗೆ ಪ್ರಕರಣಗಳನ್ನು ಭೇದಿಸಿದ ಪೊಲೀಸರು ಆರೋಪಿಯ ಮಾಹಿತಿ ಸಂಗ್ರಹಿಸಿ ಆರೋಪಿ ಮೊಹಮ್ಮದ್ ಅಬ್ದುಲ್ ಜಾಫರ್ ಎಂಬಾತನನ್ನು ಜೂನ್ 29 ರಂದು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿಯಲ್ಲಿ ಚಿನ್ನಾಭರಣಗಳ ಸಹಿತವಾಗಿ ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ. ಆರೋಪಿಯಿಂದ ಎರಡೂ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಚಿನ್ನಾಭರಣಗಳನ್ನು ಯಥಾ ಸ್ಥಿತಿಯಲ್ಲಿ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿ ಮೊಹಮ್ಮದ್ ಅಬ್ದುಲ್ ಜಾಫರ್ ವಿರುದ್ಧ ಈ ಹಿಂದೆ ಸುರತ್ಕಲ್, ಉರ್ವಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.















0 comments:
Post a Comment