ಸುಬ್ರಹ್ಮಣ್ಯ, ಜೂನ್ 16, 2026 (ಕರಾವಳಿ ಟೈಮ್ಸ್) : ಅಕ್ರಮ ಜಾನುವಾರು ಸಾಗಾಟದ ಪಿಕಪ್ ವಾಹನ ಪಲ್ಟಿಯಾದ ವೇಳೆ ಜಾನುವಾರುಗಳನ್ನು ಓಡಿಸಿದ ಆರೋಪಿಗಳು ಬಚಾವಾಗಲು ಯತ್ನಿಸಿದರೂ ಖಚಿತ ಮಾಹಿತಿ ಮೇರೆಗೆ ಜಾನುವಾರು ಸಹಿತ ಆರೋಪಿಗಳನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ ಘಟನೆ ಸುಬ್ರಹ್ಮಣ್ಯ ಗ್ರಾಮದ ಕಲ್ಕುಂದ-ಬಿಸ್ಲೆ ರಸ್ತೆಯ ಡಿಪ್ಪೋ ಎಂಬಲ್ಲಿ ಜೂನ್ 13 ರಂದು ಸಂಭವಿಸಿದೆ.
ಬಂಧಿತ ಆರೋಪಿಗಳನ್ನು ಹಾಸನ ಅರಕಲಗೂಡು ನಿವಾಸಿಗಳಾದ ಪಿಕಪ್ ಚಾಲಕ ಚಂದ್ರು ಅಲಿಯಾಸ್ ಚಂದ್ರಶೇಖರ ಹಾಗೂ ಕ್ಲೀನರ್ ಮೋಹನ ಎಂದು ಹೆಸರಿಸಲಾಗಿದೆ.
ಜೂನ್ 13 ರಂದು ಬೆಳಗ್ಗೆ, ಕಡಬ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ-ಬಿಸ್ಲೆ ರಸ್ತೆಯ ಡಿಪ್ಪೋ ಎಂಬಲ್ಲಿ KA-13 D 1923 ನೊಂದಣಿ ಸಂಖ್ಯೆಯ ಪಿಕಪ್ ವಾಹನ ಆಯತಪ್ಪಿ ಬಿದ್ದಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ವಾಹನವನ್ನು ಹಾಗೂ ಆರೋಪಿಗಳನ್ನು ಪೊಲೀಸರು ಠಾಣೆಗೆ ಕರೆತಂದಿದ್ದಾರೆ. ಈ ವೇಳೆ ಸದ್ರಿ ವಾಹನದಲ್ಲಿ ಅಕ್ರಮ ಜಾನುವಾರು ಸಾಗಿಸುತ್ತಿದ್ದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಪಿಎಸ್ಸೈ ಆಂಜನೇಯ ರೆಡ್ಡಿ ಅವರಿಗೆ ಮಾಹಿತಿ ಬಂದ ಮೇರೆಗೆ, ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಯಾವುದೇ ಪರವಾನಗಿ ಇಲ್ಲದೇ 2 ಜಾನುವಾರುಗಳನ್ನು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ಪಿಕಪ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದು, ವಾಹನ ಆಯತಪ್ಪಿ ಬಿದ್ದಾಗ ಸದ್ರಿ ಜಾನುವಾರುಗಳನ್ನು ವಾಹನದಿಂದ ಇಳಿಸಿ ಓಡಿಸಿರುವುದು ತಿಳಿದು ಬಂದಿದೆ. ಘಟನಾ ಸ್ಥಳದ ಸ್ವಲ್ಪ ದೂರದಲ್ಲಿ ಸದ್ರಿ 2 ಜಾನುವಾರುಗಳನ್ನು ಪತ್ತೆಮಾಡಲಾಗಿದ್ದು, ಕೃತ್ಯಕ್ಕೆ ಬಳಸಿದ ವಾಹನ, 2 ಜಾನುವಾರುಗಳನ್ನು ಸ್ವಾಧೀನಪಡಿಸಿ ಆರೋಪಿಗಳ ವಿರುದ್ದ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಅ,ಕ್ರ 21/2025 ಕಲಂ;4,5,7,12 ಕರ್ನಾಟಕ ಗೋವುಗಳ ಸಂರಕ್ಷಣಾ & ಜಾನುವಾರು ಪ್ರತಿಬಂಧಕ ಕಾಯ್ದೆ-2020, ಕಲಂ:11(1)(D) ಪ್ರಾಣಿ ಸಂರಕ್ಷಣಾ ಕಾಯ್ದೆ-1960 & ಕಲಂ:66,192(A) ಭಾರತೀಯ ಮೋಟಾರು ವಾಹನ ಕಾಯ್ದೆ-1988 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.















0 comments:
Post a Comment