ಬಂಟ್ವಾಳ, ಜೂನ್ 09, 2026 (ಕರಾವಳಿ ಟೈಮ್ಸ್) : ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ-ಪುಚ್ಚಕೆರೆ ನಿವಾಸಿ ಧಾರ್ಮಿಕ ಗುರು ಅಬ್ದುಲ್ ಲತೀಫ್ ಮದನಿ (50) ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮಸೀದಿಯಲ್ಲಿ ಸಂಜೆಯ ಆಝಾನ್ (ಬಾಂಗ್) ಕರೆ ಕೊಡುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದ ಘಟನೆ ಜೂನ್ 9 ರಂದು ಸಂಭವಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಮಸೀದಿಯಲ್ಲಿ ಮುಅಝಿನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಮಂಗಳವಾರ ಸಂಜೆ 4 ಗಂಟೆಗೆ ಆಝಾನ್ (ಬಾಂಗ್) ಕರೆಯುತ್ತಿದ್ದ ವೇಳೆ ಅರ್ಧದಲ್ಲೇ ಕುಸಿದು ಬಿದ್ದರು ಎನ್ನಲಾಗಿದೆ. ತಕ್ಷಣ ಅವರನ್ನು ಸ್ಥಳೀಯರು ಉಪಚರಿಸಿ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹಠಾತ್ ಉಂಟಾದ ಹೃದಯ ಸ್ಥಂಭನವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.
ಮಂಗಳವಾರ ರಾತ್ರಿ ವೇಳೆಗೆ ಮೃತದೇಹ ಲತೀಫ್ ಮದನಿ ಅವರ ಹುಟ್ಟೂರಾದ ಮಂಚಿ-ಪುಚ್ಚಕೆರೆಗೆ ತರಲಾಗುತ್ತಿದೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.













0 comments:
Post a Comment