ಬಂಟ್ವಾಳ, ಜೂನ್ 09, 2026 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಕಡೆ ನಿಲ್ಲಿಸಲಾಗಿದ್ದ ಮೂರು ಲಾರಿಗಳ ಬ್ಯಾಟರಿಗಳನ್ನು ಕಳವುಗೈದ ಘಟನೆ ಜೂನ್ 7 ರಂದು ನಡೆದಿದೆ.
ಈ ಬಗ್ಗೆ ಇಡ್ಕಿದು ನಿವಾಸಿ ವಿಜಯಕುಮಾರ್ (32) ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇವರು ತಮ್ಮ ಎಸ್ ಎಂ ಎಲ್ ಮಝ್ದಾ ವಾಹನವನ್ನು ಜೂನ್ 7 ರಂದು ರಾತ್ರಿ 9 ಗಂಟೆಗೆ ಅಳಕೆಮಜಲು ನಿನ್ನಿಕಲ್ಲು ಗೋಪಾಲ ಅವರ ಚಿಕನ್ ಪಾಯಿಂಟ್ ಕೋಳಿ ಅಂಗಡಿ ಎದುರು ನಿಲ್ಲಿಸಿ ಹೋಗಿದ್ದರು. ಮರುದಿನ ಅಂದರೆ ಜೂನ್ 8 ರಂದು ಬೆಳಿಗ್ಗೆ ಬಂದು ನೋಡಿದಾಗ ಲಾರಿಯ ಬ್ಯಾಟರಿಗಳು ಕಳವಾಗಿರುವುದು ಬೆಳಕಿಗೆ ಬಂದಿದೆ.
ಇದೇ ವೇಳೆ ಅಳಕೆಮಜಲು ಮಸೀದಿ ಎದುರು ಗ್ರೌಂಡಿನಲ್ಲಿ ನಿಲ್ಲಿಸಿದ್ದ ಪುತ್ತೂರು ತಾಲೂಕು ಬೆದ್ರಾಳ ನಿವಾಸಿ ಇಬ್ರಾಹಿಂ ಸಾಬ್ ಅವರ ಟಿಪ್ಪರ್ ಲಾರಿಯ ಹಾಗೂ ಅಳಕೆಮಜಲು ನಿವಾಸಿ ಸಂಶುದ್ದೀನ್ ಅವರ ಲಾರಿಯ ಬ್ಯಾಟರಿಗಳನ್ನೂ ಕಳ್ಳರು ಕಳವುಗೈದಿದ್ದಾರೆ. ಕಳವಾದ ಬ್ಯಾಟರಿಗಳ ಒಟ್ಟು ಮೌಲ್ಯ 30 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment