ಮಂಗಳೂರು, ಜುಲೈ 14, 2026 (ಕರಾವಳಿ ಟೈಮ್ಸ್) : ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಾರ್ಮಿಕರಾಗಿ ನೆಲೆಸಿದ್ದ 11 ಮಂದಿ ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರಲ್ಲದೆ ಇವರಿಗೆ ನಕಲಿ ದಾಖಲೆ ಸೃಷ್ಟಿಸಿ ಕೆಲಸಕ್ಕಿಟ್ಟುಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಮೂವರು ಏಜೆಂಟರುಗಳನ್ನೂ ಬಂಧಿಸಿದ್ದಾರೆ.
ಉರ್ವ ಪೊಲೀಸ್ ಠಾಣಾ ಪಿಎಸ್ಸೈ ಸಿದ್ದಪ್ಪ ನರಾನೂರು ಅವರಿಗೆ ಜುಲೈ 12 ರಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳ ಜೊತೆಯಲ್ಲಿ ಸಂಜೆ 7 ಗಂಟೆಗೆ ಠಾಣಾ ವ್ಯಾಪ್ತಿಯ ಬಿಜೈ ಸಂಕೈ ಗುಡ್ಡೆ ಎಂಬಲ್ಲಿ ನಿರ್ಮಾಣ ಹಂತದ ಮ್ಯಾಪ್ಸ್ ವಾಣಿಜ್ಯ ಸಂಕೀರ್ಣದ ಕಟ್ಟಡದ ಬಳಿ ತೆರಳಿ ಪರಿಶೀಲನೆ ನಡೆಸಿ ಅಕ್ರಮವಾಗಿ ನೆಲೆಸಿರುವ 3 ಜನ ಬಾಂಗ್ಲಾದೇಶದ ಮೂಲದ ನಿವಾಸಿಗಳಾದ ಮೊಹಮ್ಮದ್ ಇಮ್ರಾನ್ ಅಲಿ, ಮೊಹಮ್ಮದ್ ಕೌಸರ್ ಅಲಿ ಹಾಗೂ ಮೊಹಮ್ಮದ್ ನೂರ್ ಅಮೀನ್ ಎಂಬವರುಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿ ಜುಲೈ 13 ರಂದು ಬೆಳಿಗ್ಗೆ 7 ಗಂಟೆಗೆ ಠಾಣಾ ವ್ಯಾಪ್ತಿಯ ದೇರೆ ಬೈಲ್ ಗ್ರಾಮದ ಕೋಡಿಕಲ್ ನಾರಾಯಣ ಗುರು ಸಭಾಭವನದ ಸಮೀಪ ಇರುವ ಅಂಬಿಕಾ ಹೆಸರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ತಾತ್ಕಾಲಿಕ ಶೆಡ್ಡಿನಲ್ಲಿ ವಾಸವಾಗಿದ್ದ ಬಾಂಗ್ಲಾದೇಶದ ಮೂಲದ ಮೊಹಮ್ಮದ್ ನಹೀದುಲ್ ಇಸ್ಲಾಂ, ಮೊಹಮ್ಮದ್ ಹುಮಾಯೂನ್ ಕೋಬಿರ್, ಮೊಹಮ್ಮದ್ ರೋಮ್ಜಾನ್ ಅಲಿ, ಮೊಹಮ್ಮದ್ ರೆಹಾದ್ ಅಲಿ, ಮೊಹಮ್ಮದ್ ಜಕಾರಿಯಾ ಅಲಿ, ಮೊಹಮ್ಮದ್ ಅಬ್ದುಲ್ ರಹಮಾನ್ ರೋಯೆಲ್, ಮೊಹಮ್ಮದ್ ಇಸ್ರಾಫೀಲ್ ಅಲಿ ಹಾಗೂ ಮೊಹಮ್ಮದ್ ನೊಯಾನ್ ಎಂಬವರುಗಳನ್ನು ಪತ್ತೆ ಮಾಡಿದ್ದಾರೆ.
ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದಾಗ ಪಶ್ಚಿಮ ಬಂಗಳಾದ ಮೂಲದ ಮೊಯಿದ್ದಿನ್ ಇಸ್ಲಾಂ, ಮೊಹಮ್ಮದ್ ರಸೆಲ್ ಇಸ್ಲಾಂ, ದಿಲವಾರ್ ಹುಸೇನ್ ಎಂಬುವರುಗಳು ಬಾಂಗ್ಲಾದೇಶ ಪ್ರಜೆಗಳಿಗೆ ಹಣದ ಆಮಿಷ ಒಡ್ಡಿ ಅಕ್ರಮವಾಗಿ ಬಾಂಗ್ಲಾದೇಶದ ಪ್ರಜೆಗಳನ್ನು ಪಶ್ಚಿಮ ಬಂಗಾಳದ ಮುರ್ಷಿದಾ ಬಾದ್ ಎಂಬಲ್ಲಿಗೆ ಕರೆಸಿಕೊಂಡು, ನಕಲಿ ದಾಖಲೆ ಸೃಷ್ಟಿಸಿ ಮಂಗಳೂರಿಗೆ ಕರೆದುಕೊಂಡು ಬಂದು ಸದ್ರಿಯವರಗಳನ್ನು ಹೆಚ್ಚಿನ ಸಂಬಳಕ್ಕೆ ಕಾರ್ಮಿಕರಾಗಿ ದುಡಿಸಿಕೊಂಡು ಅವರುಗಳಿಗೆ ಭಾಗಶಃ ಸಂಬಳ ನೀಡಿ ಹಣ ಮಾಡುವ ಉದ್ದೇಶದಿಂದ ಬಾಂಗ್ಲಾ ದೇಶದ ಪ್ರಜೆಗಳು ಅಕ್ರಮವಾಗಿ ಪ್ರವೇಶಿಸಿ, ಅಕ್ರಮವಾಗಿ ಭಾರತದೊಳಗೆ ನೆಲೆಸಲು ಸಹಾಯ ಮಾಡಿ, ಅವರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೀಡಿರುವುದು ಮೆಲ್ನೋಟಕ್ಕೆ ಕಂಡು ಬಂದಿರುವುದರಿಂದ ಮೊಯಿದ್ದಿನ್ ಇಸ್ಲಾಂ, ರಸೆಲ್ ಇಸ್ಲಾಂ, ದಿಲವಾರ್ ಹುಸೇನ್ ಎಂಬವರುಗಳ ಮೇಲೆ ಮತ್ತು ಇವರುಗಳಿಗೆ ಸಹಕರಿಸಿದ ಇತರರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದಾರೆ.













0 comments:
Post a Comment