ಸುಧಾರಣೆಯಾಗದ ಬಂಟ್ವಾಳ ಮಿನಿ ವಿಧಾನಸೌಧ : ಎಲ್ಲ ಕ್ರಮಗಳೂ ಫಲಕಕ್ಕೆ ಸೀಮಿತ - Karavali Times ಸುಧಾರಣೆಯಾಗದ ಬಂಟ್ವಾಳ ಮಿನಿ ವಿಧಾನಸೌಧ : ಎಲ್ಲ ಕ್ರಮಗಳೂ ಫಲಕಕ್ಕೆ ಸೀಮಿತ - Karavali Times

728x90

23 July 2026

ಸುಧಾರಣೆಯಾಗದ ಬಂಟ್ವಾಳ ಮಿನಿ ವಿಧಾನಸೌಧ : ಎಲ್ಲ ಕ್ರಮಗಳೂ ಫಲಕಕ್ಕೆ ಸೀಮಿತ

ಬಂಟ್ವಾಳ, ಜುಲೈ 23, 2026 (ಕರಾವಳಿ ಟೈಮ್ಸ್) : ಬಂಟ್ವಾಳ ಮಿನಿ ವಿಧಾನಸೌಧದ ವ್ಯವಸ್ಥೆಗಳು ಇನ್ನೂ ಸುಧಾರಣೆಯಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಮಿನಿ ವಿಧಾನಸೌಧ ನಿರ್ಮಾಣವಾಗಿ ದಶಕ-ಶತಕಗಳ ಝಮಾನಾ ಏನೂ ಆಗಿಲ್ಲ. ಇನ್ನೂ ಏಳೆಂಟು ವರ್ಷಗಳಷ್ಟೇ ಆಗುತ್ತಿದೆ. ಆದರೆ ಇಲ್ಲಿನ ಯಾವುದೇ ವ್ಯವಸ್ಥೆಗಳು ಕಚೇರಿಗೆ ಬರುವ ಸಾರ್ವಜನಿಕರಿಗೆ ಪೂರಕವಾಗಿಲ್ಲ. ಇಲ್ಲಿನ ಕಟ್ಟಡದಲ್ಲಿ ಸ್ವಚ್ಛತೆ ಎಂಬುದು ಅಂದಿನಿಂದ ಇಂದಿನವರೆಗೂ ಮರೀಚಿಕೆಯಾಗಿಯೇ ಉಳಿದಿದೆ.  ಶೌಚಾಲಯ ಸಮಸ್ಯೆಗೆ ಶಾಶ್ವತ ಪರಿಹಾರ ಎಂಬುದೂ ದೊರೆತಿಲ್ಲ. ಲಿಫ್ಟ್ ವ್ಯವಸ್ಥೆಯಾದರೋ ಪದೇ ಪದೇ ಕೈಕೊಡುತ್ತಿದೆ. ವಿದ್ಯುತ್ ಕೈಕೊಟ್ಟರೆ ಜನರೇಟರ್ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಈ ಎಲ್ಲ ಅವ್ಯವಸ್ಥೆಗಳ ಮಧ್ಯೆ ಡಿಜಿಟಲ್ ಯುಗದಲ್ಲಿ ಸರ್ವರ್ ಸಮಸ್ಯೆ ಬೇರೆ. ಒಟ್ಟಾರೆ ಬಂಟ್ವಾಳ ಆಡಳಿತ ಸೌಧಕ್ಕೆ ಬರುವ ಸಾರ್ವಜನಿಕರು ನಿತ್ಯವೂ ಒಂದಿಲ್ಲೊಂದು ಕಾರಣಗಳಿಗಾಗಿ ಹಿಡಿಶಾಪ ಹಾಕುತ್ತಲೇ ಹೋಗುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ.

ಈ ಎಲ್ಲ ಸಮಸ್ಯೆಗಳ ಮಧ್ಯೆ ಇತ್ತೀಚೆಗೆ ಆಡಳಿತ ಸೌಧದ ಆವರಣದೊಳಗೆ ನಿರಂತರ ಧರಣಿ ಸತ್ಯಾಗ್ರಹ ನಡೆಸಿದ ಘಟನೆಯೂ ನಡೆದಿದ್ದು, ಇದನ್ನು ನಿಯಂತ್ರಿಸಲು ಕೊನೆಗೆ ತಹಶೀಲ್ದಾರರು ಆವರಣದೊಳಗೆ ಪ್ರತಿಭಟನೆ ನಡೆಸುವುದನ್ನು ನಿಷೇಧಿಸಿ ನಾಮಫಲಕ ಅಳವಡಿಸುವ ಪರಿಸ್ಥಿತಿ ಬಂದಿದೆ. ಅಲ್ಲದೆ ಆಡಳಿತ ಸೌಧ ಆವರಣದೊಳಗೆ ಸಾರ್ವಜನಿಕರು ತಮ್ಮ ಖಾಸಗಿ ವಾಹನಗಳನ್ನು ಪಾರ್ಕ್ ಮಾಡಿ ದಿನವಿಡೀ ಪತ್ತೆಯಿಲ್ಲದ ಪರಿಸ್ಥಿತಿ ನಿಭಾಯಿಸಲು  ತಹಶೀಲ್ದಾರರು ಸೂಕ್ತ ಕ್ರಮದ ಎಚ್ಚರಿಕೆ ನೀಡಿದರಲ್ಲದೆ ಕಚೇರಿ ಕೆಲಸ-ಕಾರ್ಯಗಳಿಗೆ ಬರುವವರಲ್ಲದ ಸಾರ್ವಜನಿಕರು ಕಟ್ಟಡ ಆವರಣದೊಳಗೆ ಖಾಸಗಿ ವಾಹನಗಳನ್ನು ನಿಲ್ಲಿಸಿ ಹೋಗುವುದಕ್ಕಾಗಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 9 ಗಂಟೆವರೆಗೂ ಸೌಧದ ಆವರಣ ಗೇಟಿಗೆ ಬೀಗ ಹಾಕುವ ತೀರ್ಮಾನಕ್ಕೂ ತಹಶೀಲ್ದಾರರು ಬಂದಿದ್ದಾರೆ. 

ಆದರೆ ಇಲ್ಲಿನ ತಾಲೂಕು ಕಚೇರಿಯ ಎಲ್ಲ ಸಮಸ್ಯೆಗಳ ಬಗ್ಗೆ ಪರಿಹಾರ ಕೇವಲ ನಾಮಫಲಕ ಅಳವಡಿಕೆ ಹಾಗೂ ಹೇಳಿಕೆಗಳಿಗೆ ಸೀಮಿತವಾಗುತ್ತಿದೆಯೇ ಹೊರತು ಶಾಶ್ವತ ಪರಿಹಾರ ಕ್ರಮವಂತೂ ಜರುಗುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿ ಸಿ ರೋಡು ಪೇಟೆಗೆ ಸಂಬಂಧಿಸಿದಂತೆ ಎಲ್ಲಿಯೂ ಸುರಕ್ಷಿತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಹಾಗೂ ಜನನಿಬಿಡ ಪ್ರದೇಶಗಳಲ್ಲೂ ಪಾರ್ಕಿಂಗ್ ಮಾಡಿದ ವಾಹನಗಳ ಕಳವು ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಜನ ಸುರಕ್ಷತೆಗಾಗಿ ಸೀಸಿ ಕ್ಯಾಮೆರಾ ಕಣ್ಗಾವಲಿನಲ್ಲಿರುವ ಆಡಳಿತ ಸೌಧ ಕಟ್ಟಡದ ಆವರಣದೊಳಗೆ ವಾಹನ ಪಾರ್ಕ್ ಮಾಡಿ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. 

ಈ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ತಾಲೂಕು ತಹಶೀಲ್ದಾರ್ ಅವರು ಪುರಸಭಾಡಳಿತ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಸೂಕ್ತ ಸಭೆ ನಡೆಸಿ ಬಿ ಸಿ ರೋಡು ಪೇಟೆಯಲ್ಲಿ ಸಮಪರ್ಕಕ ಪಾರ್ಕಿಂಗ್ ವ್ಯವಸ್ಥೆ ಹಾಗೂ ಪೇಟೆಯನ್ನು ಸಂಪೂರ್ಣವಾಗಿ ಸೀಸಿ ಕ್ಯಾಮೆರಾ ಕಣ್ಗಾವಲಿಗೆ ತರುವಂತೆ ಕ್ರಮ ಕೈಗೊಂಡರೆ ಖಾಸಗಿ ವಾಹನಗಳ ಪಾರ್ಕಿಂಗ್ ಸಮಸ್ಯೆಗಳ ಸಹಿತ ಅಪರಾಧ ಚಟುವಟಿಕೆಗಳಿಗೂ ನಿಯಂತ್ರಣ ಹೇರಿದಂತಾಗುತ್ತದೆ ಎಂಬ ಅಭಿಪ್ರಾಯ ಜನರಿಂದ ಕೇಳಿ ಬರುತ್ತಿದೆ. 

ಇನ್ನು ಕಚೇರಿಯೊಳಗಿನ ಸ್ವಚ್ಛತೆ, ಶೌಚಾಲಯ, ಕುಡಿಯುವ ನೀರು, ಲಿಫ್ಟ್ ಮೊದಲಾದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೇವಲ ತಹಶೀಲ್ದಾರ್ ಒಬ್ಬರಿಂದ ಇದು ಯಾವುದೂ ಪರಿಹಾರವಾಗುವ ಸಮಸ್ಯೆಯಲ್ಲ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಮಂಗಳೂರು ಸಹಾಯಕ ಕಮಿಷನರ್, ಜಿಲ್ಲಾಧಿಕಾರಿಗಳು, ಶಾಸಕರ ಸಹಿತ ಜನಪ್ರತಿನಿಧಿಗಳ ಒಗ್ಗೂಡುವಿಕೆಯಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈ ಬಗ್ಗೆ ಪ್ರತೀ ವಾರವೂ ಕಚೇರಿಗೆ ಬರುವ ಮಂಗಳೂರು ಸಹಾಯಕ ಕಮಿಷನರ್ ಅವರು ಇಲ್ಲಿನ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಪರಿಶೀಲನೆ ನಡೆಸದೆ ಕೇವಲ ತಮ್ಮ ಕಚೇರಿ ಜವಾಬ್ದಾರಿ ಮಾತ್ರ ಮುಗಿಸಿಕೊಂಡು ತೆರಳುತ್ತಿದ್ದಾರೆ ಎಂದು ಜನ ಆರೋಪಿಸಿದ್ದು, ಸಹಾಯಕ ಕಮಿಷನರ್ ಹಾಗೂ ಜಿಲ್ಲಾಧಿಕಾರಿಗಳು ಜಂಟಿಯಾಗಿ ಬಂಟ್ವಾಳದ ಆಡಳಿತ ಸೌಧ ಕಚೇರಿಗೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರಕ್ಕೆ ಮುಂದಾದರೆ ಖಂಡಿತ ಇಲ್ಲಿನ ಎಲ್ಲ ಸಮಸ್ಯೆಗಳೂ ಅಲ್ಪ ಸಮಯದಲ್ಲೇ ಎಲ್ಲವೂ ಪರಿಹಾರವಾಗುವುದರಲ್ಲಿ ಸಂಶಯವಿಲ್ಲ ಎನ್ನುವ ಜನ ಸಂಬಂಧಪಟ್ಟವರು ಈ ಬಗ್ಗೆ ಇಚ್ಛಾ ಶಕ್ತಿಯಿಂದ ಕಾರ್ಯೋನ್ಮುಖರಾದರೆ ಇದಕ್ಕೆ ಸಾರ್ವಜನಿಕರು, ಸ್ಥಳೀಯ ಸಂಘ-ಸಂಸ್ಥೆಗಳೂ ಕೂಡಾ  ಉದಾರತೆ ಮೆರೆದು ಸಹಕಾರ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಾರೆ. 

ಇನ್ನಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಶಾಸಕರ ಸಹಿತ ಜನಪ್ರತಿನಿಧಿಗಳು ಬಂಟ್ವಾಳ ತಾಲೂಕಿನ ಮುಕುಟದಂತಿರುವ ಆಡಳಿತ ಸೌಧದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂಬ ಆಗ್ರಹ ಜನರಿಂದ ಕೇಳಿ ಬರುತ್ತಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸುಧಾರಣೆಯಾಗದ ಬಂಟ್ವಾಳ ಮಿನಿ ವಿಧಾನಸೌಧ : ಎಲ್ಲ ಕ್ರಮಗಳೂ ಫಲಕಕ್ಕೆ ಸೀಮಿತ Rating: 5 Reviewed By: karavali Times
Scroll to Top