ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನಿಯಂತ್ರಣಕ್ಕೆ ಬಾರದ ಬೀದಿ ನಾಯಿಗಳ ಕಾಟ : ಹೆಚ್ಚಿನ ಅಪಾಯ ಎದುರಿಸುತ್ತಿರುವ ಪುಟಾಣಿ ವಿದ್ಯಾರ್ಥಿಗಳು, ಶಾಶ್ವತ ಪರಿಹಾರಕ್ಕೆ ಆಗ್ರಹ - Karavali Times ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನಿಯಂತ್ರಣಕ್ಕೆ ಬಾರದ ಬೀದಿ ನಾಯಿಗಳ ಕಾಟ : ಹೆಚ್ಚಿನ ಅಪಾಯ ಎದುರಿಸುತ್ತಿರುವ ಪುಟಾಣಿ ವಿದ್ಯಾರ್ಥಿಗಳು, ಶಾಶ್ವತ ಪರಿಹಾರಕ್ಕೆ ಆಗ್ರಹ - Karavali Times

728x90

23 July 2026

ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನಿಯಂತ್ರಣಕ್ಕೆ ಬಾರದ ಬೀದಿ ನಾಯಿಗಳ ಕಾಟ : ಹೆಚ್ಚಿನ ಅಪಾಯ ಎದುರಿಸುತ್ತಿರುವ ಪುಟಾಣಿ ವಿದ್ಯಾರ್ಥಿಗಳು, ಶಾಶ್ವತ ಪರಿಹಾರಕ್ಕೆ ಆಗ್ರಹ

ಬಂಟ್ವಾಳ, ಜುಲೈ 23, 2026 (ಕರಾವಳಿ ಟೈಮ್ಸ್) : ಸುಪ್ರೀಂ ಕೋರ್ಟ್ ಹಾಗೂ ಸರಕಾರಗಳು ಸಾಕಷ್ಟು ಕ್ರಮಗಳ ಭರವಸೆ ನೀಡಿದರೂ ಬೀದಿ ನಾಯಿಗಳ ಕಾಟಕ್ಕೆ ಪರಿಪೂರ್ಣ ಪರಿಹಾರ ದೊರೆತಂತೆ ಕಂಡು ಬರುತ್ತಿಲ್ಲ. ಬಂಟ್ವಾಳ ಪುರಸಭಾ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಂತೂ ಇಂತಹ ಬೀದಿ ನಾಯಿಗಳ ಆತಂಕ ತೀವ್ರವಾಗಿ ಕಂಡು ಬರುತ್ತಿದೆ. ಪುರಸಭಾ ವ್ಯಾಪ್ತಿಯ ಪ್ರಮುಖ ಪೇಟೆಗಳಾದ ಬಿ ಸಿ ರೋಡು, ಪಾಣೆಮಂಗಳೂರು, ಬಂಟ್ವಾಳ ಹಾಗೂ ಕೈಕಂಬಗಳಂತಹ ಪ್ರದೇಶಗಳಲ್ಲೇ ರಾತ್ರಿ-ಹಗಲೆನ್ನದೆ ಬೀದಿ ನಾಯಿಗಳು ಹಿಂಡು-ಹಿಂಡಾಗಿ ಅಲೆದಾಡುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಅಶಕ್ತರ ಸಹಿತ ಸಾರ್ವಜನಿಕರು ಇಂತಹ ಬೀದಿ ನಾಯಿಗಳಿಂದ ರಕ್ಷಣೆ ಪಡೆಯಲು ಹರಸಾಹಸ ಪಡುವಂತಾಗಿದೆ. 

ಬೀದಿ ಬೀದಿಗಳಲ್ಲಿ ಎಸೆಯಲಾಗುತ್ತಿರುವ ತ್ಯಾಜ್ಯಗಳು ಹಾಗೂ ಇನ್ನಿತರ ಹಳಸಿದ ಆಹಾರಗಳನ್ನು ತಿಂದು ಕೊಬ್ಬಿರುವ ಈ ಬೀದಿ ನಾಯಿಗಳು ಪರಸ್ಪರ ಕಚ್ಚಾಟ ನಡೆಸುತ್ತಾ ರಸ್ತೆ-ಬೀದಿಗಳಲ್ಲೇ ರಂಪಾಟ ನಡೆಸುತ್ತಿರುವುದು ಸರ್ವೇ ಸಾಮಾನ್ಯ ದೃಶ್ಯವಾಗಿದೆ. ಇಂತಹ ಬೀದಿ ನಾಯಿಗಳು ಕೆಲವೊಮ್ಮೆ ರೌದ್ರಾವತಾರ ತಾಳುತ್ತಿದ್ದು, ಜನರ ಮೇಲೆ ಆಕ್ರಮಣ ಮಾಡುವ ಹಂತಕ್ಕೂ ಬರುತ್ತಿದೆ. ಅಲ್ಲದೆ ದನ, ಆಡು, ಕೋಳಿ ಮೊದಲಾದ ಸಾಕು ಪ್ರಾಣಿ-ಪಕ್ಷಿಗಳ ಮೇಲೂ ಎರಗುತ್ತಿವೆ. ಈ ಬೀದಿ ನಾಯಿಗಳ ಉಪಟಳದಿಂದ ಶಾಲೆ, ಅಂಗನವಾಡಿ, ಮದ್ರಸಗಳಿಗೆ ತೆರಳುವ ಪುಟಾಣಿ ಮಕ್ಕಳಂತೂ ತೀವ್ರ ಅಪಾಯ ಹಾಗೂ ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಮಕ್ಕಳ ಪೋಷಕರು ಈ ಬೀದಿ ನಾಯಿಗಳಿಂದ ಮಕ್ಕಳಿಗೆ ರಕ್ಷಣೆ ನೀಡಲು ವಿದ್ಯಾರ್ಥಿಗಳು ಮನೆಯಿಂದ ವ್ಯಾಸಂಗ ಮಾಡುವ ಸ್ಥಳಕ್ಕೆ ಮುಟ್ಟುವವರೆಗೆ ಹಾಗೂ ವಾಪಾಸು ಹಿಂತಿರುಗಿ ಮನೆ ತಲುಪುವವರೆಗೂ ಮಕ್ಕಳ ಹಿಂದೆಯೇ ಕಾಯುವ ಸನ್ನಿವೇಶ ನಿರ್ಮಾಣವಾಗಿದೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ, ಅಧಿಕಾರಿಗಳಿಗೆ ದೂರು ನೀಡಿದರೆ ಅವರು ಅವರದೇ ಸಮಸ್ಯೆಗಳನ್ನು ಹೇಳಿಕೊಂಡು ಸುಮ್ಮನಾಗುತ್ತಾರೆ. ಇನ್ನು ಕೆಲವು ಕಡೆಗಳಲ್ಲಿ ಇಂತಹ ಬೀದಿ ನಾಯಿಗಳಿಗೆ ಬಿಸ್ಕತ್ ಮೊದಲಾದ ಆಹಾರ ಹಾಕುತ್ತಿದ್ದು, ಇದರಿಂದ ನಾಯಿಗಳ ಹಿಂಡು ಅಲ್ಲೇ ಜೊಲ್ಲು ಸುರಿಸಿಕೊಂಡು ಅಲೆದಾಟ ನಡೆಸುತ್ತಿರುತ್ತದೆ. ಇದರಿಂದಾಗಿ ಹಸಿದ ರಣ ಹದ್ದುಗಳಂತೆ ಬೀದಿ ನಾಯಿಗಳು ಸದಾ ದಾಳಿ ನಡೆಸಲೋ ಎಂಬಂತೆ ಅಲೆದಾಡುತ್ತಿರುವುದು ಕಂಡು ಬರುತ್ತಿದೆ. 

ಇನ್ನಾದರೂ ಸಂಬಂಧಪಟ್ಟವರು ಬೀದಿ ನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ನಾಗರಿಕರಿಗೆ ಅಪಾಯ ಉಂಟಾಗುವ ಮುನ್ನ ಎಚ್ಚೆತ್ತುಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನಿಯಂತ್ರಣಕ್ಕೆ ಬಾರದ ಬೀದಿ ನಾಯಿಗಳ ಕಾಟ : ಹೆಚ್ಚಿನ ಅಪಾಯ ಎದುರಿಸುತ್ತಿರುವ ಪುಟಾಣಿ ವಿದ್ಯಾರ್ಥಿಗಳು, ಶಾಶ್ವತ ಪರಿಹಾರಕ್ಕೆ ಆಗ್ರಹ Rating: 5 Reviewed By: karavali Times
Scroll to Top