ಬಂಟ್ವಾಳ, ಜುಲೈ 17, 2026 (ಕರಾವಳಿ ಟೈಮ್ಸ್) : ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಅಂದಾಜು 26.18 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರಾಭಿವೃದ್ಧಿಗೊಳಿಸಲಾದ ಬಂಟ್ವಾಳ ರೈಲ್ವೆ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜುಲೈ 17 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಜನತೆಗೆ ಅರ್ಪಿಸಿದರು.
ಬಂಟವಾಳ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಯು ದೇಶಾದ್ಯಂತ ರೈಲ್ವೆ ನಿಲ್ದಾಣಗಳನ್ನು ಆಧುನೀಕರಿಸುವ ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷೆಯ ಉಪಕ್ರಮದ ಒಂದು ಭಾಗವಾಗಿದೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ, ಮೈಸೂರು ವಿಭಾಗದ 15 ರೈಲ್ವೆ ನಿಲ್ದಾಣಗಳ ಮೂಲಸೌಕರ್ಯ ಹಾಗೂ ಪ್ರಯಾಣಿಕರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಒಟ್ಟು 339.41 ಕೋಟಿ ವೆಚ್ಚದ ಪುನರಾಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ.
ಈ ನಿಲ್ದಾಣವನ್ನು ಅತ್ಯಾಧುನಿಕ, ಸುರಕ್ಷಿತ, ಸುಲಭ ಪ್ರವೇಶಿಸಬಹುದಾದ ಮತ್ತು ಪ್ರಯಾಣಿಕಸ್ನೇಹಿ ಸೌಲಭ್ಯಗಳೊಂದಿಗೆ ಪರಿವರ್ತಿಸಲಾಗಿದೆ. ಇದರಲ್ಲಿ ಮೇಲ್ದರ್ಜೆಗೇರಿಸಲಾದ ವಿಶ್ರಾಂತಿ ಕೊಠಡಿಗಳು, ಆಧುನಿಕ ಬುಕ್ಕಿಂಗ್ ಕಚೇರಿ, ಸುಧಾರಿತ ಒಳಾಂಗಣ ವಿನ್ಯಾಸ, ಆಕರ್ಷಕ ಮುಂಭಾಗ, ಸುಂದರವಾದ ಉದ್ಯಾನವನ, ಇಂಧನ-ದಕ್ಷತೆಯ ಬೆಳಕಿನ ವ್ಯವಸ್ಥೆ ಹಾಗೂ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಪ್ರವೇಶ ಮತ್ತು ನಿರ್ಗಮನ ಕಮಾನುಗಳನ್ನು ಒಳಗೊಂಡಿದೆ.
ನಿಲ್ದಾಣದ ಮುಂಭಾಗದ ಸಂಚಾರಿ ಪ್ರದೇಶವನ್ನು 384 ಚದರ ಮೀಟರಿನಿಂದ 9,354 ಚದರ ಮೀಟರಿಗೆ ವಿಸ್ತರಿಸಲಾಗಿದ್ದು, ಪ್ರಯಾಣಿಕರನ್ನು ಬಿಡಲು ಮತ್ತು ಕರೆದೊಯ್ಯಲು ಪ್ರತ್ಯೇಕ ವಲಯಗಳನ್ನು ಮಾಡಲಾಗಿದೆ. ಜೊತೆಗೆ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳಿಗಾಗಿ 3,837 ಚದರ ಮೀಟರ್ ವಿಸ್ತೀರ್ಣದ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಪ್ಲಾಟ್ ಫಾರ್ಮ್ ಮೂಲ ಸೌಕರ್ಯದಲ್ಲೂ ಗಮನಾರ್ಹ ಸುಧಾರಣೆ ಮಾಡಲಾಗಿದೆ. ಪ್ಲಾಟ್ ಫಾರ್ಮ್ ಸಂಖ್ಯೆ 1ರಲ್ಲಿನ ಮೇಲ್ಛಾವಣಿ ಆವರಣವನ್ನು 405 ಚದರ ಮೀಟರಿನಿಂದ 3,874 ಚದರ ಮೀಟರಿಗೆ ವಿಸ್ತರಿಸಲಾಗಿದ್ದರೆ, ಪ್ಲಾಟ್ ಫಾರ್ಮ್ ಸಂಖ್ಯೆ 2ಕ್ಕೆ 5,128 ಚದರ ಮೀಟರ್ ವಿಸ್ತೀರ್ಣದ ಹೊಸ ಸುಸಜ್ಜಿತ ಮೇಲ್ಛಾವಣಿಯನ್ನು ಒದಗಿಸಲಾಗಿದೆ.
ಪ್ರಯಾಣಿಕರ ಸೌಕರ್ಯಗಳಿಗಾಗಿ ದೊಡ್ಡ ವಿಶ್ರಾಂತಿ ಕೊಠಡಿಗಳು, ಶಿಶು ಪಾಲನಾ ಕೊಠಡಿ, ಅಡುಗೆ ಮನೆ ಸಹಿತ ಉಪಾಹಾರ ಗೃಹ, ಅಸ್ತಿತ್ವದಲ್ಲಿರುವ ಪಾದಚಾರಿ ಮೇಲ್ಸೇತುವೆಯಲ್ಲಿ ಲಿಫ್ಟ್ ಸೌಲಭ್ಯ, ಆಟೋ ಸ್ಟ್ಯಾಂಡ್, ವೈ-ಫೈ ಸಂಪರ್ಕ, ಕೋಚ್ ಗೈಡೆನ್ಸ್ ಡಿಸ್ಪ್ಲೇ ಬೋರ್ಡ್‍ಗಳು ಮತ್ತು ಇತರ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ನಿಲ್ದಾಣವು ದಿವ್ಯಾಂಗಸ್ನೇಹಿ ಸೌಲಭ್ಯಗಳನ್ನು ಹೊಂದಿದ್ದು, ಪ್ರತ್ಯೇಕ ಬುಕ್ಕಿಂಗ್ ಕೌಂಟರ್‍ಗಳು, ಶೌಚಾಲಯಗಳು, ಸ್ಪರ್ಶದ ಹಾದಿ, ಕುಡಿಯುವ ನೀರಿನ ಕೇಂದ್ರಗಳು, ಕಾಯ್ದಿರಿಸಿದ ಪಾರ್ಕಿಂಗ್ ಮತ್ತು ಆಧುನಿಕ ಪ್ರಯಾಣಿಕ ಮಾಹಿತಿ ವ್ಯವಸ್ಥೆಗಳನ್ನು ಒಳಗೊಂಡಿದೆ.
ನಿಲ್ದಾಣದ ಈ ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕ ಪ್ರತಿನಿಧಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿಧಾನ, ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ, ಅಮೈ ಮಹಾಲಿಂಗ ನಾಯ್ಕ, ರೈಲ್ವೆ ವಿಭಾಗೀಯ ಮುಖ್ಯಸ್ಥ ಮುದಿತ್ ಮಿತ್ತಲ್, ಗತಿ ಶಕ್ತಿ ಹಿರಿಯ ಅಭಿಯಂತರ ಆನಂದ ಭಾರತಿ, ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಮೊದಲಾದವರು ಭಾಗವಹಿಸಿದ್ದರು. ಇದೇ ವೇಳೆ ಸ್ಥಳೀಯ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ರೈಲ್ವೆ ಇಲಾಖಾ ಸಿಬ್ಬಂದಿಗಳಿಗೆ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಿತು. ರೈಲ್ವೆ ಇಲಾಖೆ ಬಗ್ಗೆ ಏರ್ಪಡಿಸಲಾಗಿದ್ದ ಪ್ರಬಂಧ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.














0 comments:
Post a Comment