ಬಂಟ್ವಾಳ, ಜುಲೈ 17, 2026 (ಕರಾವಳಿ ಟೈಮ್ಸ್) : ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ಸೆನ್ಸಾರ್ ಬ್ಯಾರಿಯರ್ ಗೇಟ್ ಬೀಳುವ ಮುಂಚೆ ಕಾರು ಚಲಾಯಿಸಿದ ಪರಿಣಾಮ ಕಾರಿನ ಮೇಲೆ ಸೆನ್ಸಾರ್ ಬ್ಯಾರಿಯರ್ ಬಿದ್ದುದಕ್ಕೆ ಕಾರು ಚಾಲಕಿ ಹಾಗೂ ಪ್ರಯಾಣಿಕ ಸೇರಿ ಟೋಲ್ ಇನ್ ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದವರಿಗೆ ಅವಾಚ್ಯವಾಗಿ ಬೈದು ದೂಡಿ ಹಾಕಿದ ಘಟನೆ ಮುಲೈ 15 ರಂದು ಮಧ್ಯಾಹ್ನ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಟೋಲ್ ಇನ್ ಚಾರ್ಜ್ ಆಗಿ ಕೆಲಸ ಮಾಡಿಕೊಂಡಿರುವ ಕಾಸರಗೋಡು-ದೇಲಂಪಾಡಿ ನಿವಾಸಿ ಪ್ರಶಾಂತ್ (36) ಅವರು ಪೊಲೀಸರಿಗೆ ದೂರು ನೀಡಿದ್ದು, ಜುಲೈ 15 ರಂದು ಮಧ್ಯಾಹ್ನ 12.55 ಗಂಟೆಗೆ ಬಿ ಸಿ ರೋಡು ಕಡೆಯಿಂದ ಮಂಗಳೂರು ಕಡೆಗೆ ಟೋಲ್ ಬೂತ್ ನಂಬ್ರ 4ರಲ್ಲಿ ಕೆ ಎಲ್ 04 ಎಕ್ಯೂ 1138 ನೋಂದಣಿ ಸಂಖ್ಯೆಯ ಕಾರನ್ನು ಚಲಾಯಿಸಿಕೊಂಡು ಬಂದ ಚಾಲಕಿ ಟೋಲ್ ಗೇಟ್ ಸೆನ್ಸರ್ ಬ್ಯಾರಿಯರ್ ಬೀಳುವ ಮುಂಚೆ, ಕಾರನ್ನು ಮುಂದಕ್ಕೆ ಚಲಾಯಿಸಿದ ಕಾರಣ ಸೆನ್ಸರ್ ಬ್ಯಾರಿಯರ್ ಕಾರಿನ ಮೇಲೆ ಬಿದ್ದಿದೆ. ಈ ಸಂದರ್ಭ ಕಾರಿನ ಚಾಲಕಿ ಕಾರನ್ನು ನಿಲ್ಲಿಸಿ, ಡೋರನ್ನು ತೆರೆದು, ಟೋಲ್ ಗೇಟಿನಲ್ಲಿ ಕಲೆಕ್ಷನ್ ಮಾಡುತ್ತಿದ್ದ ಸಿಬ್ಬಂದಿ ಮಂಜುನಾಥ ಅವರನ್ನುದ್ದೇಶಿಸಿ “ಟೋಲ್ ಗೇಟಿನಲ್ಲಿ ಹಣ ಕೊಡಲಿಕ್ಕೆ ಇಲ್ಲ, ನನ್ನ ಕಾರನ್ನು ಯಾಕೆ ನಿಲ್ಲಿಸಿದ್ದಿರಿ ಎಂದು ಅವಾಚ್ಯವಾಗಿ ಬೈದರು. ಆಗ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಓರ್ವ ವ್ಯಕ್ತಿ ಕಾರಿನಿಂದಿಳಿದು ಬಂದು ಮಂಜುನಾಥ ಅವರನ್ನು ಕೈಯಿಂದ ದೂಡಿದ್ದು, ಆಗ ಅಲ್ಲೆ ಇದ್ದ ಟೋಲ್ ಗೇಟ್ ಮ್ಯಾನೆಜರ್ ಯಶವಂತ ಅವರು ಬಂದಿದ್ದು ಅವರನ್ನು ಕೂಡ ದೂಡಿರುತ್ತಾರೆ. ಬಳಿಕ ಕಾರಿನ ಬಳಿಗೆ ತೆರಳಿದ ಪ್ರಶಾಂತ್ ಅವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment