ಬೆಳ್ತಂಗಡಿ, ಜುಲೈ 31, 2026 (ಕರಾವಳಿ ಟೈಮ್ಸ್) : ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿ ಕಲ್ಲು ಎಂಬಲ್ಲಿ ಜುಲೈ 29 ರಂದು ಕಾರ್ಯಾಚರಣೆ ನಡೆಸಿದ ಬೆಳ್ತಂಗಡಿ ಪೊಲೀಸರು ಬೃಹತ್ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.
ಬಂಧಿತ ಆರೋಪಿಯನ್ನು ಕುವೆಟ್ಟು ನಿವಾಸಿ ತ್ವಲಹ್ ಯಾನೆ ಅನ್ವರ್ ಯಾನೆ ಅನ್ಸರ್ (21) ಎಂದು ಹೆಸರಿಸಲಾಗಿದ್ದು, ಪರಾರಿಯಾದ ಖದೀಮನನ್ನು ಅಮ್ಜತ್ ಖರಾರ್ ಎಂದು ಗುರುತಿಸಲಾಗಿದೆ.
ಜುಲೈ 29 ರಂದು ರಾತ್ರಿ ಬೆಳ್ತಂಗಡಿ ಠಾಣಾ ಪಿಎಸ್ಸೈ ಆನಂದ ಎಂ ಅವರು ಸಿಬ್ಬಂದಿಗಳ ಜೊತೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಪಿಲಿಚಂಡಿಕಲ್ಲು ಎಂಬಲ್ಲಿ KA18 A 7203 ನೋಂದಣಿ ಸಂಖ್ಯೆಯ ಅಟೋ ರಿಕ್ಷಾದ ಬಳಿ ನಿಂತಿದ್ದ ಆರೋಪಿ ಅನುಮಾನಾಸ್ಪದಾಗಿ ವರ್ತಿಸುತ್ತಿರುವುದನ್ನು ಕಂಡು ಆತನನ್ನು ಹಿಡಿದು ವಿಚಾರಿಸಿದಾಗ ಮಾದಕ ವಸ್ತು ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ತ್ವಲಹ್ ಯಾನೆ ಅನ್ವರ್ ಯಾನೆ ಅನ್ಸರ್ ನ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ತಪಾಸಣೆ ನಡೆಸಿದಾಗ ಆತನ ಬಳಿ ಸುಮಾರು 27 ಗ್ರಾಂ ಗಾಂಜಾ ಹಾಗೂ ಒಂದು ಮೊಬೈಲ್ ಫೋನ್ ಪತ್ತೆಯಾಗಿದೆ. ಸ್ಥಳದಲ್ಲಿದ್ದ ರಿಕ್ಷಾ ಹಾಗೂ ಕಾರನ್ನು ಪರಿಶೀಲಿಸಿದಾಗ ಸುಮಾರು 7.60 ಲಕ್ಷ ರೂಪಾಯಿ ಮೌಲ್ಯದ 76.59 ಗ್ರಾಂ ತೂಕದ ನಿಷೇದಿತ ಮಾದಕ ಎಂಡಿಎಂಎ ಪತ್ತೆಯಾಗಿರುತ್ತದೆ. ಆರೋಪಿಗೆ ಮಾದಕ ವಸ್ತು ನೀಡಲು ಬಂದ ಮತ್ತೋರ್ವ ಆರೋಪಿ ಅಮ್ಜತ್ ಖರಾರ್ ಎಂಬಾತ ತಾನು ತಂದಿದ್ದ KA21 MA 4990 ನೋಂದಣಿ ಸಂಖ್ಯೆಯ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುತ್ತಾನೆ ಎಂದು ಬಂಧಿತ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ 82/2026, ಕಲಂ: 8(c),20(b),(ii)(A) ,27A, 22(c), NDPS ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.










0 comments:
Post a Comment