ಮಂಗಳೂರು, ಜುಲೈ 30, 2026 (ಕರಾವಳಿ ಟೈಮ್ಸ್) : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ ನೀಡಿರುವ ಅವಹೇಳನಕಾರಿ ಹಾಗೂ ಬೆದರಿಕೆ ಸ್ವರೂಪದ ಹೇಳಿಕೆಯನ್ನು ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ ತೀವ್ರವಾಗಿ ಖಂಡಿಸಿದ್ದಾರೆ.
ಲೋಕಸಭಾ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿಯವರ ಹೋರಾಟದ ಫಲವಾಗಿ ಇವತ್ತು ನಡೆದ ನೀಟ್ ಪರೀಕ್ಷೆಯ ಅಕ್ರಮದ ಬಗ್ಗೆ ಕೇಂದ್ರ ಸರ್ಕಾರದ ಶಿಕ್ಷಣ ಸಚಿವರಾದ ಧರ್ಮೆಂದ್ರ ಪ್ರದಾನ್ ಅವರು ರಾಜೀನಾಮೆ ನೀಡುವಂತೆ ಮಾಡುವ ಮೂಲಕ ಇಡೀ ದೇಶದ ವಿದ್ಯಾರ್ಥಿಗಳಿಗೆ ನ್ಯಾಯವನ್ನು ಒದಗಿಸಿಕೊಡುವಲ್ಲಿ ಲೋಕಸಭೆಯ ಒಳಗಡೆ ಹಾಗೂ ಹೊರಗಡೆ ಹೋರಾಟ ಮಾಡಿದ ಏಕೈಕ ನಾಯಕ ಎಂದರೆ ಅದು ರಾಹುಲ್ ಗಾಂಧಿ. ಪ್ರಧಾನಿ ನಿವಾಸದ ಮುಂದೆ ಹೋರಾಟ ನಡೆಸದೇ ಇದ್ದರೆ ಲಾಠಿ ಎಟು ತಿಂದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕುತ್ತಿರಲಿಲ್ಲ. 21 ವಿದ್ಯಾರ್ಥಿಗಳನ್ನು ಬಲಿ ತೆಗೆದುಕೊಂಡ ನೀಟ್ ಪರೀಕ್ಷೆಯಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದು ವರ್ತನೆ ತೋರುತ್ತಿದ್ದ ದೇಶದ ಪ್ರಧಾನ ಮಂತ್ರಿಯನ್ನು ಕಣ್ಣು ತೆರೆಸುವಂತೆ ಮಾಡಿದ ಕೀರ್ತಿ ಏನಾದ್ರೂ ಇದ್ರೆ ಅದು ರಾಹುಲ್ ಗಾಂಧಿಯವರಿಗೆ ಸಲ್ಲುತ್ತದೆ. ಎಂದು ಐವನ್ ಡಿಸೋಜಾ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನೀಟ್ ಪರೀಕ್ಷೆಯ ಅಕ್ರಮಗಳು ಮತ್ತು ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ವಿರುದ್ಧ ರಾಹುಲ್ ಗಾಂಧಿ ಅವರು ದೇಶಾದ್ಯಂತ ನಿರಂತರ ಹೋರಾಟ ನಡೆಸಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯನ್ನು ರಾಷ್ಟ್ರದ ಮುಂದಿಟ್ಟಿದ್ದಾರೆ. ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ ರಾಷ್ಟ್ರೀಯ ನಾಯಕರ ವಿರುದ್ಧ ವೈಯಕ್ತಿಕ ದ್ವೇಷದ ಭಾಷೆ ಬಳಸುವುದು ಮತ್ತು ಅವಹೇಳನಕಾರಿ ಹೇಳಿಕೆ ನೀಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
“ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಿದ ನೀಟ್ ಹಗರಣದ ವಿರುದ್ಧ ಧ್ವನಿ ಎತ್ತಿದವರನ್ನೇ ಗುರಿಯಾಗಿಸಿಕೊಂಡು ದ್ವೇಷದ ರಾಜಕಾರಣ ಮಾಡುವುದು ಅತ್ಯಂತ ಖಂಡನೀಯ. ಇಂತಹ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ ಮತ್ತು ವೈಮನಸ್ಸು ಸೃಷ್ಟಿಸುವ ಪ್ರಯತ್ನವಾಗಿದ್ದು, ಜನಪ್ರತಿ£ಧಿಯೊಬ್ಬರಿಗೆ ಶೋಭೆ ತರುವುದಿಲ್ಲ,” ಎಂದು ಐವನ್ ಡಿ’ಸೋಜಾ ತಿಳಿಸಿದ್ದಾರೆ.
ಯಶ್‍ಪಾಲ್ ಸುವರ್ಣ ಅವರ ಹೇಳಿಕೆಗಳು ದ್ವೇಷಪೂರಿತ ಹಾಗೂ ಪ್ರಚೋದನಕಾರಿ ಸ್ವರೂಪದ್ದಾಗಿದ್ದು, ರಾಜ್ಯದ ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ. ಆದ್ದರಿಂದ ಅವರ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಾನೂನಿನ ಅನ್ವಯ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಂತಹ ಹೇಳಿಕೆಗಳು ಕ್ಷಮೆಗೆ ಅರ್ಹವಲ್ಲ. ನೀಟ್ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರು ನಡೆಸಿದ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಇಂದು ನೀಟ್ ಸಂಬಂಧಿತ ಸುಧಾರಣೆಗಳನ್ನು ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ ಎಂದವರು ಹೇಳಿದರು.
ಈ ವಿಷಯವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಜನಪ್ರತಿನಿಧಿಗಳು ಸಾರ್ವಜನಿಕ ಜೀವನದ ಘನತೆಗೆ ತಕ್ಕ ರೀತಿಯಲ್ಲಿ ನಡೆದುಕೊಳ್ಳುವಂತೆ ವಿಧಾನಸಭೆಯ ಸಭಾಧ್ಯಕ್ಷರು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಐವನ್ ಡಿ’ಸೋಜಾ ಆಗ್ರಹಿಸಿದ್ದಾರೆ.
ಈ ವಿಚಾರವಾಗಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಲಿದೆ ಎಂದವರು ತಿಳಿಸಿದ್ದಾರೆ.











0 comments:
Post a Comment