ಮಂಗಳೂರು, ಜುಲೈ 31, 2026 (ಕರಾವಳಿ ಟೈಮ್ಸ್) : 2018 ರಲ್ಲಿ ಪಣಂಬೂರು-ತೋಟ ಬೆಂಗ್ರೆ ಬೀಚಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪಿತ್ತಿದೆ.
ಶಿಕ್ಷೆಗೊಳಗಾದವರನ್ನು ಪ್ರಜ್ವಲ್ ಅಲಿಯಾಸ್ ಪಜ್ಜು, ಅರುಣ್ ಅಮೀನ್ ಅಲಿಯಾಸ್ ಅರುಣ್ ಎಸ್., ಆದಿತ್ಯ ಸಾಲಿಯಾನ್ ಅಲಿಯಾಸ್ ಆದಿತ್ಯ ಹಾಗೂ ಅಬ್ದುಲ್ ರಿಯಾಝ್ ಅಲಿಯಾಸ್ ರಿಯಾಝ್ ಎಂದು ಹೆಸರಿಸಲಾಗಿದೆ.
2018 ರ ನವೆಂಬರ್ 17 ರಂದು ನೊಂದ ಯುವತಿಯು ತನ್ನ ಸ್ನೇಹಿತನೊಂದಿಗೆ ತೋಟ ಬೆಂಗ್ರೆ ಬೀಚಿಗೆ ತೆರಳಿ ಕುಳಿತು ಮಾತನಾಡುತ್ತಿದ್ದ ವೇಳೆ, ಏಳು ಮಂದಿ ಅಪರಿಚಿತರು ಬಂದು ಯುವತಿಯ ಸ್ನೇಹಿತನನ್ನು ಎಳೆದುಕೊಂಡು ಹೋಗಿ ಹಲ್ಲೆ ನಡೆಸಿ, ಯುವತಿಯ ಮೇಲೆ ಬಲವಂತವಾಗಿ ಸಾಮೂಹಿಕ ಅತ್ಯಾಚಾರ ಎಸಗಿ ಜೀವ ಬೆದರಿಕೆ ಹಾಕಿದ್ದರು. ಘಟನೆಯ ನಂತರ ಭಯದಿಂದ ಯುವತಿಯು ಯಾರಿಗೂ ವಿಷಯ ತಿಳಿಸದೆ ಇದ್ದರು. ಎರಡು ದಿನಗಳ ಬಳಿಕ ಆರೋಪಿತರು ದೂರವಾಣಿ ಕರೆ ಮಾಡಿ ಬರಲು ಸೂಚಿಸಿದಾಗ, ಯುವತಿಯು ಮನೆಯವರಿಗೆ ವಿಷಯ ತಿಳಿಸಿ ಮಂಗಳೂರು ಮಹಿಳಾ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಮಂಗಳೂರು ಮಹಿಳಾ ಪೆÇಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಒಟ್ಟು ಏಳು ಮಂದಿ ಆರೋಪಿಗಳಿದ್ದು, ಅವರ ಪೈಕಿ ಮೂವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರಾಗಿದ್ದರು. ಉಳಿದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಾಲಕರನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿತ್ತು.
ಪ್ರಕರಣದ ಪ್ರಾಥಮಿಕ ತನಿಖೆಯನ್ನು ಅಂದಿನ ಮಂಗಳೂರು ಮಹಿಳಾ ಪೆÇಲೀಸ್ ಠಾಣೆಯ ಪೆÇಲೀಸ್ ನಿರೀಕ್ಷಕರಾಗಿದ್ದ ಶ್ರೀಮತಿ ಕಲಾವತಿ ಅವರು ಕೈಗೊಂಡಿದ್ದರು. ನಂತರ ಅಂದಿನ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೆÇಲೀಸ್ ಆಯುಕ್ತರಾಗಿದ್ದ ಮಂಜುನಾಥ ಶೆಟ್ಟಿ ಅವರು ತನಿಖೆ ಮುಂದುವರಿಸಿದ್ದರು. ಬಳಿಕ ಐಪಿಎಸ್ ಅಧಿಕಾರಿ ಶ್ರೀನಿವಾಸ ಗೌಡ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ಅಗತ್ಯ ಸಾಕ್ಷ್ಯಾಧಾರಗಳು ಹಾಗೂ ದಾಖಲೆಗಳನ್ನು ಸಂಗ್ರಹಿಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣವು ಸ್ಪೆಷಲ್ ಕೇಸ್ ನಂ. 31/2019 ರಂತೆ ವಿಚಾರಣೆಗೆ ಒಳಪಟ್ಟಿದ್ದು, ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಜ್ಯೋತಿ ಪ್ರಮೋದ ನಾಯಕ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಜುಲೈ 27 ರಂದು ನ್ಯಾಯಾಲಯವು ಸಾಕ್ಷ್ಯಾಧಾರಗಳು ಹಾಗೂ ಸಾಕ್ಷಿದಾರರ ಹೇಳಿಕೆಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 341, 323, 354, 376(ಆರ್), 506 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಕಲಂಗಳಡಿಯಲ್ಲಿ ಆರೋಪಗಳು ಸಾಬೀತಾಗಿರುವುದಾಗಿ ತೀರ್ಪು ನೀಡಿತ್ತು.
ಜುಲೈ 30 ರಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ.ಎನ್. ಅವರು ಆರೋಪಿಗಳಿಗೆ ಕೆಳಕಂಡಂತೆ ಶಿಕ್ಷೆ ವಿಧಿಸಿದ್ದಾರೆ. ಕಲಂ 376(ಆರ್) ಐಪಿಸಿ ಅಡಿಯಲ್ಲಿ ತಲಾ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ, ಕಲಂ 354 ಐಪಿಸಿ ಅಡಿಯಲ್ಲಿ ತಲಾ 1 ವರ್ಷದ ಸಾದಾ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 1 ತಿಂಗಳ ಕಾರಾಗೃಹ ಶಿಕ್ಷೆ, ಕಲಂ 506 ಐಪಿಸಿ ಅಡಿಯಲ್ಲಿ ತಲಾ 1 ವರ್ಷದ ಸಾದಾ ಕಾರಾಗೃಹ ಶಿಕ್ಷೆ ಹಾಗೂ 2 ಸಾವಿರ ರೂಪಾಯಿ ದಂಡ, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 15 ದಿನಗಳ ಕಾರಾಗೃಹ ಶಿಕ್ಷೆ, ಕಲಂ 323 ಐಪಿಸಿ ಅಡಿಯಲ್ಲಿ ತಲಾ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ 1 ಸಾವಿರ ರೂಪಾಯಿ ದಂಡ, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 15 ದಿನಗಳ ಕಾರಾಗೃಹ ಶಿಕ್ಷೆ, ಕಲಂ 341 ಐಪಿಸಿ ಅಡಿಯಲ್ಲಿ ತಲಾ 500/- ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪಿತ್ತಿದೆ. ಅಲ್ಲದೆ ಪ್ರಕರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ನೊಂದ ಯುವತಿಗೆ 60 ಸಾವಿರ ರೂಪಾಯಿ ಪರಿಹಾರ ಮಂಜೂರು ಮಾಡಲಾಗಿದೆ.











0 comments:
Post a Comment