ಮಂಗಳೂರು, ಜುಲೈ 08, 2026 (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಕೇಂದ್ರಗಳು ಗರ್ಭಿಣಿಯರು ಸ್ಕ್ಯಾನಿಂಗ್ ಬಂದಾಗ ಅವರ ವಯಸ್ಸನ್ನು ದೃಢಪಡಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ.
ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿಯಲ್ಲಿ ಜೂನ್ 7 ರಂದು ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ಅಮೃತಾ ಭಂಡಾರಿ ಅವರು ಈ ಸೂಚನೆ ನೀಡಿದ್ದಾರೆ.
ಸ್ಕ್ಯಾನಿಂಗಿಗೆ ಬಂದ ಗರ್ಭಿಣಿಯರ ವಯಸ್ಸಿನ ಬಗ್ಗೆ ದಾಖಲೆಗಳನ್ನು ಪರಿಶೀಲಿಸಬೇಕು. 18 ವರ್ಷದೊಳಗಿನ ಗರ್ಭಿಣಿಯರು ಕಂಡುಬಂದಲ್ಲಿ ಕೂಡಲೇ ಪೆÇಲೀಸರಿಗೆ ಮಾಹಿತಿ ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು 2026ರಲ್ಲಿ ಎಪ್ರಿಲ್ ತಿಂಗಳಿಂದ ಜೂನ್ ತಿಂಗಳವರೆಗೆ ಜಿಲ್ಲೆಯಲ್ಲಿ 2911 ಗಂಡು, 2872 ಹೆಣ್ಣು ಜನನವಾಗಿದ್ದು, ಲಿಂಗಾನುಪಾತ 987 ಇದೆ ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಹೊಸದಾಗಿ ಸ್ಕ್ಯಾನಿಂಗ್ ಉಪಕರಣಗಳನ್ನು ಖರೀದಿಸಿದ ಸಂಸ್ಥೆಗಳ ಅರ್ಜಿಗಳನ್ನು ಪರಿಶೀಲಿಸಲಾಯಿತು. ಸಲಹಾ ಸಮಿತಿಯು ಆಸ್ಪತ್ರೆಗೆ ತಪಾಸಣೆಗೆ ಭೇಟಿ ನೀಡಿದ ಸಂದರ್ಭ ಕಂಡು ಬಂದ ನ್ಯೂನತೆಗಳ ಕುರಿತು ಚರ್ಚಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶು ಆಸ್ಪತ್ರೆ ಹಾಗೂ ಕ್ಲಿನಿಕ್ ಗಳು ‘’ಪ್ರಾಣಿಗಳಿಗೆ ಮಾತ್ರ ಸ್ಕ್ಯಾನ್’’ ಎಂಬ ಫಲಕವನ್ನು ತಮ್ಮ ಸಂಸ್ಥೆಯಲ್ಲಿ ಪ್ರದರ್ಶನ ಮಾಡಲು ಹಾಗೂ ಪ್ರಾಣಿಗಳನ್ನು ಹೊರತುಪಡಿಸಿ ಮನಷ್ಯರಿಗೆ ಸ್ಕ್ಯಾನ್ ಮಾಡಲಾಗುವುದಿಲ್ಲ ಎಂಬ ನೋಟರಿ ಆಫಿದಾವಿತನ್ನು ಸಂಸ್ಥೆಯವರು ನೀಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಎಪ್ರಿಲ್ 2025 ರಿಂದ ಮಾರ್ಚ್ 2026 ರವರೆಗೆ ಖಾಸಗಿ 681 ಹಾಗೂ ಸರ್ಕಾರಿ 39 ಸ್ಕ್ಯಾನಿಂಗ್ ಸೆಂಟರುಗಳ ತಪಾಸಣೆ ನಡೆಸಲಾಗಿದೆ. ತಾಲೂಕು ಆರೋಗ್ಯಾಧಿಕಾರಿಗಳು ಖಾಸಗಿ 75 ಹಾಗೂ ಸರ್ಕಾರಿ 9 ಸ್ಕ್ಯಾನಿಂಗ್ ಸೆಂಟರುಗಳ ತಪಾಸಣೆ ನಡೆಸಿದ್ದಾರೆ ಎಂದು ಜಿಲ್ಲಾ ಅನುಷ್ಠಾನ ಅಧಿಕಾರಿ ಡಾ. ದೀಪಾ ಪ್ರಭು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಸಲಹಾ ಸಮಿತಿ (ಪಿ.ಸಿ.ಪಿ.ಎನ್.ಡಿ.ಟಿ) ಸದಸ್ಯರಾದ ಅನಿತ್ ರಾಜ್, ಡಾ. ಸುಂದರಿ, ಡಾ. ನಂಜೇಶ್ ಕುಮಾರ್, ಡಾ. ರಘುರಾಜ್, ಡಾ. ಭಾರತಿ ಪ್ರಕಾಶ್, ಡಾ. ಚಿದಾನಂದ ಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ವಸಂತ ಪೆರಾಜೆ ಮೊದಲಾದವರು ಭಾಗವಹಿಸಿದ್ದರು.















0 comments:
Post a Comment