ಬಂಟ್ವಾಳ, ಜುಲೈ 28 2026 (ಕರಾವಳಿ ಟೈಮ್ಸ್) : ಬರಿಮಾರಿನಲ್ಲಿ ನಡೆದ ಶಾಲಾ ಬಸ್ ದುರಂತದಲ್ಲಿ ಪುಟಾಣಿ ವಿದ್ಯಾರ್ಥಿ ಮೃತಪಟ್ಟಿದ್ದು, ಬಳಿಕದ ಬೆಳವಣಿಗೆಯಲ್ಲಿ ಶಾಲಾ ಬಸ್ಸಿನ ದಾಖಲೆ ಪತ್ರಗಳು ಸಮಪರ್ಕವಾಗಿಲ್ಲದ ಬಗ್ಗೆ ತಿಳಿದು ಬಂದ ಬಳಿಕ ಸದ್ರಿ ಕಲ್ಲಡ್ಕ ಶ್ರೀರಾಮ ವಿದ್ಯಾಲಯದ ಆಡಳಿತ ಮಂಡಳಿ ವಿರುದ್ದ ಎಫ್ ಐ ಆರ್ ದಾಖಲಾಗಿದ್ದು, ಆ ಬಳಿಕ ಶಾಲಾ ವಾಹನಗಳ ಬಗ್ಗೆ ಕೇರ್ ತೆಗೆದುಕೊಂಡ ಟ್ರಾಫಿಕ್ ಪೊಲೀಸ್ ಹಾಗೂ ಆರ್ ಟಿ ಒ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆ ವೇಳೆ ಒಟ್ಟು 40 ಶಾಲಾ ಬಸ್ಸುಗಳನ್ನು ಪರಿಶೀಲನೆ ನಡೆಸಲಾಗಿದ್ದು, ಪ್ರಥಮ ಚಿಕಿತ್ಸೆ ಇಲ್ಲದಿರುವಿಕೆ, ಅಗ್ನಿಶಾಮಕ ಉಪಕರಣ ಇಲ್ಲದಿರುವಿಕೆ, ಚಾಲಕ/ ಸಿಬ್ಬಂದಿಗಳು ಸಮವಸ್ತ್ರ ಧರಿಸದೆ ಇರುವುದು, ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಸಾಗಿಸಿರುವುದು ಸಹಿತ ಇತರ ಸಂಚಾರಿ ನಿಯಮ ಉಲ್ಲಂಘಿಸಿರುವ ಬಗ್ಗೆ ಸುಮಾರು 12 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಇದಲ್ಲದೆ, ವಿಮೆ, ತೆರಿಗೆ ಹಾಗೂ ಫಿಟ್ನೆಸ್ ಪ್ರಮಾಣ ಪತ್ರದ ಕೊರತೆ ಹಿನ್ನೆಲೆಯಲ್ಲಿ ಬಂಟ್ವಾಳ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎ ಆರ್ ಟಿ ಒ) ಅವರು 3 ಶಾಲಾ ಬಸ್ಸುಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ. ಇಂತಹ ಜಂಟಿ ಪರಿಶೀಲನಾ ಕಾರ್ಯಾಚರಣೆ ಮುಂದಿನ ದಿನಗಳಲ್ಲೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
















0 comments:
Post a Comment