ಬೆಳ್ತಂಗಡಿ, ಜುಲೈ 16, 2026 (ಕರಾವಳಿ ಟೈಮ್ಸ್) : ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜುಲೈ 1 ರಂದು ದಾಖಲಾಗಿದ್ದ ಯುಡಿಆರ್ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸ್ಥಳದಲ್ಲಿ ಕಳವು ಕೃತ್ಯ ನಡೆಸಿದ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿ-ಕಾಶಿಪಟ್ಣ ನಿವಾಸಿ ಇಬ್ರಾಹಿಂ ಲತೀಫ್ (36) ಎಂದು ಹೆಸರಿಸಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಜುಲೈ 1 ರಂದು ದಾಖಲಾದ ಯುಡಿಆರ್ ಪ್ರಕರಣ ತನಿಖೆ ನಡೆಸಿದ ಪೊಲೀಸರು ಮುಶ್ತಾಕ್ ಎಂಬವರು ಮೃತಪಟ್ಟ ಸ್ಥಳದಲ್ಲಿ ಕಳವು ಕೃತ್ಯ ನಡೆದಿರುವುದು ಕಂಡುಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿ ಇಬ್ರಾಹಿಂ ಲತೀಫ್ ಎಂಬಾತನನ್ನು ಜುಲೈ 14 ರಂದು ಬಂಧಿಸಿದ್ದಾರೆ.
ಆರೋಪಿಯ ವಿಚಾರಣೆಯ ವೇಳೆ ಮೃತ ಮುಶ್ತಕ್ ಹಾಗೂ ಇಬ್ರಾಹಿಂ ಲತೀಫ್ ಅವರುಗಳು ಮತ್ತೋರ್ವ ಆರೋಪಿಯೊಂದಿಗೆ ಸೇರಿ ಜೂನ್ 30 ರಂದು ರಾತ್ರಿ ಬೆಳ್ತಂಗಡಿ ಕುವೆಟ್ಟು ಶಕ್ತಿನಗರ ಎಂಬಲ್ಲಿರುವ ಸಂಸ್ಥೆಯೊಂದರ ಆವರಣದಲ್ಲಿದ್ದ ಅಲ್ಯೂಮಿನಿಯಂ/ ಕಬ್ಬಿಣದ ಸೊತ್ತುಗಳನ್ನು ಕಳವು ಮಾಡಿದ್ದು ಈ ವೇಳೆ ಆಕಸ್ಮಿಕವಾಗಿ ಮುಶ್ತಕ್ ಅವರ ಕುತ್ತಿಗೆಗೆ ಕಬ್ಬಿಣದ ತಂತಿ ಸಿಲುಕಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾನೆ. ಆರೋಪಿಯು ಕಳ್ಳತನ ಮಾಡಿದ ಒಟ್ಟು 550 ಕೆಜಿ ಅಲ್ಯೂಮಿನಿಯಂ ವಯರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯ ವಿಚಾರಣೆಯ ವೇಳೆ ಈತನು ವೇಣೂರು ಠಾಣೆ, ಉಪ್ಪಿನಂಗಡಿ ಠಾಣೆ, ಅರೆಹಳ್ಳಿ ಠಾಣೆ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣೆಗಳಲ್ಲಿ ಸೇರಿದಂತೆ ಒಟ್ಟು 16 ಕಳವು ಪ್ರಕರಣಗಳಲ್ಲಿ ಬಾಗಿಯಾಗಿರುವುದು ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.











0 comments:
Post a Comment