ಬಂಟ್ವಾಳ, ಆಗಸ್ಟ್ 14, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಆಗಸ್ಟ್ 14 ರಂದು ನಡೆಯಿತು.
ಶಾಲೆಯ ಸುವರ್ಣ ಮಹೋತ್ಸವ ಸಭಾಭವನದ ಡಾ ಪಿ ದಯಾನಂದ ಪೈ ಮತ್ತು ಸತೀಶ್ ಪೈ ಸಭಾಂಗಣದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಏರಮಲೆ ಶ್ರೀ ಭದ್ರಕಾಳಿ ದೇವಸ್ಥಾನದ ಪ್ರಧಾನ ಅರ್ಚಕ ಕೇಶವ ಶಾಂತಿ ಅವರು ಮಾತನಾಡಿ, ಆಟಿ ತಿಂಗಳು ಅತ್ಯಂತ ಸಂಕಷ್ಟದ ತಿಂಗಳಾಗಿದ್ದು, ಈ ಸಂದರ್ಭ ಪ್ರಕೃತಿಯಲ್ಲಿ ಸಿಗುವ ಅಚ್ಚ ಹಸಿರಿನಿಂದ ಕೂಡಿದ ಗಿಡಗಳು ಔಷಧೀಯ ಸತ್ವವನ್ನು ಪಡೆದುಕೊಳ್ಳುತ್ತವೆ. ಆಟಿ ತಿಂಗಳ ವಿವಿಧ ಬಗೆಯ ತಿಂಡಿ ತಿನಿಸುಗಳು ಬಹಳ ವಿಶೇಷವಾಗಿದ್ದು ನಮ್ಮ ಹಿರಿಯರು ಅದನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದರು. ನಮ್ಮ ಹಿರಿಯರು ಮಳೆಗಾಲದಲ್ಲಿ ಆಹಾರ ವಸ್ತುಗಳು ದೀರ್ಘ ಸಮಯ ಬರುವಂತೆ ಹಾಳಾಗದಂತೆ ಸಂಗ್ರಹಿಸುವಂತಹ ವಿಧಾನವನ್ನು ಮಕ್ಕಳಿಗೆ ತಿಳಿ ಹೇಳಿದರು.
ಇದೇ ವೇಳೆ ಶಾಲೆಗೆ 10 ಕಂಪ್ಯೂಟರ್ ಕೊಡುಗೆಯಾಗಿ ನೀಡಿದ ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಶ್ರೀಮತಿ ಸೌಮ್ಯಚಂದ್ರಹಾಸ್ ಹಾಗೂ ಅವರ ತಾಯಿ ಶ್ರೀಮತಿ ವಸಂತಿ ಸಂಜೀವ ಪೂಜಾರಿ ಮೆಲ್ಕಾರ್ ಅವರನ್ನು ಗೌರವಿಸಲಾಯಿತು.
ಪಾಣೆಮಂಗಳೂರು ಎಜುಕೇಶನ್ ಸೊಸೈಟಿ ಅಧ್ಯಕ್ಷ ನರೇಂದ್ರನಾಥ್ ಕುಡ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಡಾ ಪಿ ವಿಶ್ವನಾಥ ನಾಯಕ್. ಶಾಲಾ ನಾಯಕಿ ಸಂಜನಾ ಉಪಸ್ಥಿತರಿದ್ದರು. ಶಿಕ್ಷಕ ಧನರಾಜ್ ಡಿ ಆರ್ ಅವರು ತುಳುನಾಡಿನ ಆಟಿಯ ವಿಶೇಷ ಮತ್ತು ಆಚರಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಇದೇ ವೇಳೆ ಆಟಿಡೊಂಜಿ ದಿನದ ಕುರಿತು ವಿವಿಧ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಆಟಿ ತಿಂಗಳಿನಲ್ಲಿ ತಯಾರಿಸುವ ಖಾದ್ಯಗಳು ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ಬಂದು ಅತಿಥಿಗಳು ಹಾಗೂ ಶಿಕ್ಷಕರೊಂದಿಗೆ ಹಂಚಿ, ಸಹಭೋಜನ ನಡೆಸಿದರು.
ಶಾಲಾ ಮುಖ್ಯೋಪಾಧ್ಯಾಯ ಶಿವಪ್ಪ ನಾಯ್ಕ್ ಎಸ್ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ವೀಣಾ ಕೆ ಅತಿಥಿ ಪರಿಚಯ ಮಾಡಿದರು. ಶಿಕ್ಷಕರಾದ ಅಜಿತ್ ಕುಮಾರ್ ವಂದಿಸಿ, ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ತುಳುನಾಡಿನ ಜಾನಪದ ನೃತ್ಯ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.































0 comments:
Post a Comment