ಪುಣ್ಯ ರಬೀವ್ ಮುಸ್ಲಿಂ ಉಮ್ಮತ್ತನ್ನು ಮತ್ತೆ ಸ್ವಾಗತಿಸಿದೆ : ಸತ್ಯ ವಿಶ್ವಾಸಿ ಪ್ರವಾದಿ ಪ್ರೇಮದಿಂದ ಪುಳಕಿತಗೊಳ್ಳದೆ ಇರಲು ಸಾಧ್ಯವೇ ಇಲ್ಲ. ಪ್ರವಾದಿ ಪ್ರೇಮದ ಹೆಸರಿನಲ್ಲಿ ಆಡಂಬರ ರಾರಾಜಿಸದೆ ಪ್ರವಾದಿಗಳ ಜೀವನ ಮಾದರಿಯಾಗಿರುವ ಸರಳತೆ, ಲಾಲಿತ್ಯ ಮೇಳೈಸಲಿ - Karavali Times ಪುಣ್ಯ ರಬೀವ್ ಮುಸ್ಲಿಂ ಉಮ್ಮತ್ತನ್ನು ಮತ್ತೆ ಸ್ವಾಗತಿಸಿದೆ : ಸತ್ಯ ವಿಶ್ವಾಸಿ ಪ್ರವಾದಿ ಪ್ರೇಮದಿಂದ ಪುಳಕಿತಗೊಳ್ಳದೆ ಇರಲು ಸಾಧ್ಯವೇ ಇಲ್ಲ. ಪ್ರವಾದಿ ಪ್ರೇಮದ ಹೆಸರಿನಲ್ಲಿ ಆಡಂಬರ ರಾರಾಜಿಸದೆ ಪ್ರವಾದಿಗಳ ಜೀವನ ಮಾದರಿಯಾಗಿರುವ ಸರಳತೆ, ಲಾಲಿತ್ಯ ಮೇಳೈಸಲಿ - Karavali Times

728x90

14 August 2026

ಪುಣ್ಯ ರಬೀವ್ ಮುಸ್ಲಿಂ ಉಮ್ಮತ್ತನ್ನು ಮತ್ತೆ ಸ್ವಾಗತಿಸಿದೆ : ಸತ್ಯ ವಿಶ್ವಾಸಿ ಪ್ರವಾದಿ ಪ್ರೇಮದಿಂದ ಪುಳಕಿತಗೊಳ್ಳದೆ ಇರಲು ಸಾಧ್ಯವೇ ಇಲ್ಲ. ಪ್ರವಾದಿ ಪ್ರೇಮದ ಹೆಸರಿನಲ್ಲಿ ಆಡಂಬರ ರಾರಾಜಿಸದೆ ಪ್ರವಾದಿಗಳ ಜೀವನ ಮಾದರಿಯಾಗಿರುವ ಸರಳತೆ, ಲಾಲಿತ್ಯ ಮೇಳೈಸಲಿ

ರಬೀವುಲ್ ಅವ್ವಲ್ ಚಂದ್ರದರ್ಶನವಾಗುತ್ತಲೇ ಲೋಕ ಮುಸಲ್ಮಾನರು ರೋಮಾಂಚನಗೊಳ್ಳುತ್ತಾರೆ. ಕಾರಣ ಲೋಕಾನುಗ್ರಹಿ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರ ಜನನದಿಂದ ಅನುಗ್ರಹೀತವಾದ ತಿಂಗಳು ಎಂಬುದಾಗಿದೆ. ವಿಶ್ವಾಸಿಯೋರ್ವ ತನ್ನ ಸ್ವ ಶರೀರಕ್ಕಿಂತಲೂ ಹೆಚ್ಚಾಗಿ ಪ್ರೀತಿಸಬೇಕಾದ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರ ಜನನದಿಂದ ಅನುಗ್ರಹೀತ ಮಾಸದ ಆಗಮನಕ್ಕೆ ಪುಳಕಿತಗೊಳ್ಳದವನು ಪರಿಪೂರ್ಣ ವಿಶ್ವಾಸಿಯಾಗಲು ಸಾಧ್ಯವೇ ಇಲ್ಲ.

“ತನ್ನನ್ನು ಹೆತ್ತು ಸಾಕಿ, ಸಲಹಿ, ತಮ್ಮೆಲ್ಲ ಕೃಪಾಶೀರ್ವಾದಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತನಗಾಗಿ ಧಾರೆಯೆರೆದ ತನ್ನ ತಂದೆ-ತಾಯಿ, ಕಷ್ಟ-ಸುಖಗಳಲ್ಲಿ ಸದಾ ಸ್ಪಂದಿಸಿ ಸಾಂತ್ವನಗೈಯುತ್ತಿರುವ ತನ್ನ ಬಂಧು-ಬಳಗ ಸೇರಿದಂತೆ ಜಗತ್ತಿನ ಸರ್ವ ಜನರಿಗಿಂತಲೂ ನನ್ನನ್ನು ಅತ್ಯಂತ ಹೆಚ್ಚು ಇಷ್ಟಪಡುವವರೆಗೆ ಯಾವನೂ ಕೂಡಾ ಪರಿಪೂರ್ಣ ಸತ್ಯ ವಿಶ್ವಾಸಿಯಾಗಲಾರ” ಎಂಬ ಪ್ರವಾದಿ ವಚನವೇ ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರನ್ನು ಯಾವ ರೀತಿ ಒಬ್ಬ ಮುಸಲ್ಮಾನ ತನ್ನ ಬದುಕಿನಲ್ಲಿ ಇಷ್ಟಪಡಬೇಕು ಎಂಬುದನ್ನು ಸಾರಿ ಹೇಳುತ್ತದೆ. 

ಈ ಲೋಕವನ್ನೇ ಸೃಷ್ಟಿಸಲು ಕಾರಣೀಕರ್ತರಾಗಿದ್ದಾರೆ ಹಝ್ರತ್ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಅಂತ್ಯ ಪ್ರವಾದಿಗಳ ಜೀವನ ಕ್ರಮವು ಅದು ಪವಿತ್ರ ಕುರ್-ಆನ್ ಆಗಿತ್ತು. ಅಂದರೆ ಪವಿತ್ರ ಕುರ್-ಆನಿನ ಸಕಲ ಆಶಯಾದರ್ಶಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಲೋಕಕ್ಕೆ ಮಾದರಿಯಾಗಿ ನಿಯೋಜಿಸಲ್ಪಟ್ಟಿದ್ದರು ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಪ್ರವಾದಿಯವರ ಮುಅï-ಜಿಝತ್‍ಗಳನ್ನು ಹೇಳುವುದಾದರೆ, ಅವುಗಳನ್ನು ಬಣ್ಣಿಸುವುದಾದರೆ ಪದಗಳೇ ದೊರಕುತ್ತಿಲ್ಲ. ಅವರ ಔಸಾಫ್‍ಗಳನ್ನು ಹೇಳಿ ಮುಗಿಸಲು ಇದುವರೆಗೆ ಯಾವುದೇ ಸೃಷ್ಟಿಯಿಂದ ಸಾಧ್ಯವಾಗಿಲ್ಲ. ಇನ್ನು ಅಂತ್ಯ ದಿವಸದವರೆಗೆ ಸಾಧ್ಯವಾಗುವುದೂ ಇಲ್ಲ. 

ಅರಬೀ ಸಾಹಿತ್ಯದಲ್ಲಿ ಅತ್ಯಮೋಘ ಪಾಂಡಿತ್ಯವನ್ನು ಪ್ರದರ್ಶಿಸುತ್ತಿದ್ದ ಕಾಲಘಟ್ಟದಲ್ಲಾಗಿತ್ತು ಪ್ರವಾದಿಗಳಿಗೆ ಸಾಹಿತ್ಯ ಲೋಕಕ್ಕೆ ಸವಾಲಾಗಿ ಪವಿತ್ರ ಕುರ್-ಆನ್ ಗ್ರಂಥ ಅವತರಿಸಲ್ಪಟ್ಟದ್ದು. ಜೀವನದ ಪ್ರತಿಯೊಂದು ನಿಮಿಷವನ್ನೂ, ತಮ್ಮ ಸಕಲ ವ್ಯವಹಾರಗಳನ್ನೂ ಸಾಹಿತ್ಯ ಉಪಯೋಗಿಸಿಯೇ ನಡೆಸುತ್ತಿದ್ದ ಸಾಹಿತ್ಯ ದಿಗ್ಗಜರಿಗೆ ಪವಿತ್ರ ಕುರ್-ಆನಿನ ಒಂದು ಸಣ್ಣ ಶ್ಲೋಕಕ್ಕೆ ಸಮಾನವಾದ ಒಂದೇ ಒಂದು ಚರಣವನ್ನು ರಚಿಸಲು ಸಾಧ್ಯವಾಗಿಲ್ಲ ಎನ್ನುವಾಗ ಇದಕ್ಕಿಂತ ದೊಡ್ಡ ಮುಅï-ಜಿಝತ್ ಬೇರೆ ಹೇಳಬೇಕಾಗಿಲ್ಲ. ಪ್ರವಾದಿ ಕಾಲದ ಸಾಹಿತ್ಯ ಪರಾಕ್ರಮಿಗಳಿಗೆ ಪ್ರವಾದಿಗಳಿಗೆ ಅವತೀರ್ಣಗೊಂಡ ಜಗತ್ತಿನ ಅತ್ಯಂತ ಮೇರು ಸಾಹಿತ್ಯ ಕೃತಿ ಕೊನೆವರೆಗೂ ಸವಾಲಾಗಿಯೇ ಉಳಿದಿತ್ತು ಎಂಬುದು ಇಂದಿಗೂ ಪ್ರಸ್ತುತ. 

ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಅವರ ಜನ್ಮದಿಂದ ಪುಳಕಿತಗೊಂಡ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಆ ಪ್ರವಾದಿಯವರನ್ನು ಸ್ಮರಿಸಿಕೊಳ್ಳುವುದರಿಂದ, ಮೌಲಿದ್ ಪಾರಾಯಣದಂತಹ ವ್ಯಕ್ತಿತ್ವ ಬಣ್ಣನೆಯಿಂದ, ಬಡ-ಬಗ್ಗರಿಗೆ ಅನ್ನ-ಪಾನೀಯಾದಿಗಳನ್ನು ದಾನವಾಗಿ ನೀಡುವುದರಿಂದ, ಚಿಣ್ಣರಿಂದ ಪ್ರವಾದಿ ಗುಣಗಾನವನ್ನು ಮಾಡಿಸಿ ಅದನ್ನು ಕೇಳುವುದರಿಂದ ನಿಸ್ಸಂಶಯವಾಗಿಯೂ ಪುಣ್ಯ ಸಂಪಾದನೆ ಸಾಧ್ಯವಿದೆ. ಅದು ಪ್ರವಾದಿ ಪ್ರೇಮದ ಒಂದು ಭಾಗದಲ್ಲಿ ಒಳಪಡುತ್ತದೆ ಎಂಬುದರಲ್ಲಿ ಎರಡು ಮಾತು ಬೇಕಾಗಿಲ್ಲ. ಅಂದ ಮಾತ್ರಕ್ಕೆ ಪ್ರವಾದಿ ಪ್ರೇಮವು ಕೇವಲ ರಬೀವುಲ್ ಅವ್ವಲ್ 12 ರಂದು ಆಚರಿಸುವ ಸಂಭ್ರಮಾಚರಣೆಗೆ ಮಾತ್ರ ಸೀಮಿತಗೊಳ್ಳಬಾರದು. ಜೀವನದ ಎಲ್ಲಾ ಮಜಲುಗಳಲ್ಲಿ ಅನುಸರಿಬೇಕಾದ ರೀತಿ-ನೀತಿಗಳನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಅವರು ಹದಿನಾಲ್ಕು ಶತಮಾನಗಳ ಹಿಂದೆ ಮಾನವ ಕುಲ ಕೋಟಿಗೆ ತೋರಿಸಿಕೊಟ್ಟಿದ್ದಾರೆ. ಅವುಗಳನ್ನು ಯಥಾಪ್ರಕಾರ ಜೀವನದಲ್ಲಿ ಪಾಲಿಸಿಕೊಂಡು ನೆಬಿ ಚರ್ಯೆಗಳಿಗೆ ಒತ್ತು ಕೊಟ್ಟಾಗ ಅದು ನಿಜವಾದ ಪ್ರವಾದಿ ಪ್ರೇಮವಾಗುವುದು. ಪ್ರವಾದಿಯವರು ಕಲಿಸಿಕೊಟ್ಟ ನೆಬಿ ಚರ್ಯೆಗಳಿಗೆ ಪ್ರಾಧಾನ್ಯತೆಯನ್ನು ನೀಡುವುದರ ಜೊತೆಗೆ ಆ ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಅವರ ಅಸಾಧಾರಣ ವ್ಯಕ್ತಿತ್ವವನ್ನು ಅರಿತುಕೊಂಡು ಆ ಬಗ್ಗೆ ಸ್ಪಷ್ಟ ವಿಶ್ವಾಸ ತಾಳುವುದೂ ಕೂಡಾ ಅಷ್ಟೇ ಮುಖ್ಯ. 

ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಲ್ಲಮ್ ಯಾವತ್ತೂ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಅವರದು ಅಸಾಧಾರಣ ವ್ಯಕ್ತಿತ್ವ ಎಂಬುದರಲ್ಲಿ ಯಾವುದೇ ಸಂಶಯ ಬೇಕಾಗಿಲ್ಲ. ವರ್ತಮಾನದಲ್ಲಿ ಸಂಭವಿಸುತ್ತಿರುವ ಹಾಗೂ ಭವಿಷ್ಯದಲ್ಲಿ ಸಂಭವಿಸಲಿಕ್ಕಿರುವ ಸಕಲ ಘಟನೆಗಳನ್ನು ಕಣ್ಣಾರೆ ಕಂಡವರಂತೆ ಸವಿಸ್ತಾರವಾಗಿ ವಿವರಿಸಿ ಹೇಳುವುದು ಒಬ್ಬ ಸಾಮಾನ್ಯ ಮನುಷ್ಯನಿಂದ ಸಾಧ್ಯವಿಲ್ಲ ಎನ್ನುವಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಹದಿನಾಲ್ಕು ಶತಮಾನಗಳ ಹಿಂದೆ ಇಂದಿನ ವರ್ತಮಾನದಲ್ಲಿ ನಡೆಯುತ್ತಿರುವ, ಮುಂದೆ ಭವಿಷ್ಯದಲ್ಲಿ ನಡೆಯಬಹುದಾದ ಎಲ್ಲವನ್ನೂ ಮಾನವ ಕೋಟಿಯ ಮುಂದೆ ಸ್ಪಷ್ಟವಾಗಿ ಸಾರಿ ಹೋಗಿದ್ದಾರೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಉಗುಳು ಹಾಗೂ ಬೆವರಿಗೆ ವಿಶೇಷ ಸುಗಂಧ ಪರಿಮಳವಿತ್ತು. ಅವುಗಳನ್ನು ನೆಲಕ್ಕೆ ಬೀಳಲು ಒಪ್ಪದೆ ಬಾಟ್ಲಿಗಳಲ್ಲಿ ಶೇಖರಿಸಿ ಸುಗಂಧ ದ್ರವ್ಯವಾಗಿ ಉಪಯೋಗಿಸುತ್ತಿದ್ದ ಚರಿತ್ರೆಗಳು ಪವಿತ್ರ ಇಸ್ಲಾಮೀ ಇತಿಹಾಸದಲ್ಲಿ ಸಾಕಷ್ಟು ಲಭ್ಯವಿದೆ. 

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಲ್ಲಮ್ ಹೇಳುತ್ತಾರೆ : “ತನ್ನ ನೆರೆಕರೆಯವನು ಅನ್ಯ ಧರ್ಮೀಯ ಎಂಬ ಒಂದೇ ಒಂದು ಕಾರಣಕ್ಕೆ ಆತನ ಸಂಕಷ್ಟದಲ್ಲಿ ಸ್ಪಂದಿಸಲು ಸಾಧ್ಯವಾಗದಿದ್ದರೆ ಆತ ನಮ್ಮವನಲ್ಲ” ಎಂದು. ಅಂದರೆ ಸತ್ಯ ವಿಶ್ವಾಸಿಯಾದ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಆತನ ಧರ್ಮದಿಂದ ಅಳೆಯದೆ ಆತನೂ ಓರ್ವ ಮಾನವ ಎಂಬ ಅಳತೆಗೋಲಿನಿಂದ ಮಾತ್ರ ಅಳೆಯಲು ಪವಿತ್ರ ಇಸ್ಲಾಂ ನಿರ್ದೇಶಿಸುತ್ತದೆ. 

ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮಾನವನೂ ಕೂಡಾ ತನಗೆ ಇಷ್ಟವಾದ ಧರ್ಮವನ್ನು ಸ್ವೀಕರಿಸಲು ಸ್ವತಂತ್ರನಾಗಿರುತ್ತಾನೆ ಎಂಬುದನ್ನು “ಲಕುಂ ದೀನುಕುಂ ವಲಿಯ ದೀನ್ (ಅವರವರ ಧರ್ಮ ಅವರವರಿಗೆ)” ಎಂಬ ವಚನದ ಮೂಲಕ ಪವಿತ್ರ ಕುರ್-ಆನ್ ಜಗತ್ತಿನ ಮುಂದೆ ಸ್ಪಷ್ಟವಾಗಿ ಸಾರಿದೆ. ಹೀಗಿರುತ್ತಾ ಧಾರ್ಮಿಕ ಏಕ ಸ್ವಾಮ್ಯವನ್ನು ಈ ಜಗತ್ತಿನಲ್ಲಿ ಸಾಧಿಸ ಹೊರಡುವುದು ಖಂಡಿತಾ ಸಾಧುವಲ್ಲ. ಮಾತ್ರವಲ್ಲ ಕೋಮು ಆಧಾರದಲ್ಲಿ ಜನರನ್ನು ವಿಭಜಿಸಿ ಕೋಮು ಕಲಹಗಳನ್ನು ಸೃಷ್ಟಿಸುವುದನ್ನು ಪವಿತ್ರ ಇಸ್ಲಾಂ ಯಾವತ್ತೂ ಒಪ್ಪುವುದಿಲ್ಲ. ಅಲ್ಲದೆ ಕೋಮುವಾದದ ಬಗ್ಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಹೇಳುತ್ತಾರೆ : “ಒಬ್ಬ ತಪ್ಪು ಮಾಡಿದಾಗ ಆತ ತನ್ನ ಸಮುದಾಯದವ ಎಂದು ಆತನ ತಪ್ಪನ್ನು ಸಮರ್ಥಿಸುವುದಾದರೆ, ಅಥವಾ ಆತನಿಗೆ ಸಹಾಯವನ್ನು ಮಾಡುವುದಾದರೆ ಅದು ಕೋಮುವಾದವಾಗುತ್ತದೆ. ಕೋಮುವಾದವನ್ನು ಸಮಾಜದಲ್ಲಿ ಪ್ರಚುರಪಡಿಸುವವನು, ಕೋಮುವಾದವನ್ನು ಬೆಂಬಲಿಸುವವನು, ಅದಕ್ಕೆ ಸಹಾಯ ಮಾಡುವವನು, ಅದಕ್ಕಾಗಿ ಜೀವ ತೆರುವವನು ನನ್ನವನಲ್ಲ” ಎಂದು ಪ್ರವಾದಿಗಳು ಎಚ್ಚರಿಸುವಾಗ ಪವಿತ್ರ ಇಸ್ಲಾಮ್ ಧರ್ಮ ಸೌಹಾರ್ದತೆಗೆ, ಕೋಮು ಸಾಮರಸ್ಯಕ್ಕೆ ಅದೆಷ್ಟು ಒತ್ತು ಕೊಟ್ಟಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. 

ಲೋಕ ಮುಸ್ಲಿಮರ ಪಾಲಿಗೆ ಸರ್ವಸ್ವವೂ ಆಗಿರುವ ಹಬೀಬ್ ಮುತ್ತು ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ತಂಙಳ್ ಅವರ ಜನನದಿಂದ ಪುಳಕಿತಗೊಂಡ ರಬೀವುಲ್ ಅವ್ವಲ್ ತಿಂಗಳು ಈಗಾಗಲೇ ಮುಸ್ಲಿಂ ಉಮ್ಮತ್ತನ್ನು ಸ್ವಾಗತಿಸಿದೆ. ತಿಂಗಳು ಪೂರ್ತಿ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ತಂಙಳ್ ಅವರ ಮದ್ ಹ್ ಹೇಳೋದು, ಕೇಳೋದು, ಓದುವುದು, ವಿದ್ಯಾರ್ಥಿ ಸಮೂಹಕ್ಕೆ ಲೋಕ ನಾಯಕ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ತಂಙಳ್ ಅವರ ಗುಣಗಾನ ಹೇಳಲು ಪ್ರೇರೇಪಿಸುವ ಇತ್ಯಾದಿ ಕಾರ್ಯಗಳನ್ನು ನಿರಂತರವಾಗಿ ನಡೆಸುವುದರ ಜೊತೆಗೆ ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ತಂಙಳ್ ಅವರ ಸುನ್ನತ್ ಗಳನ್ನು ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಲು ಪೂರಕ ವಾತಾವರಣ ನಿರ್ಮಿಸಿಕೊಳ್ಳುವುದೂ ಅಷ್ಟೆ ಪ್ರಾಮುಖ್ಯತೆ ಪಡೆಯುವಂತಾಗಬೇಕು. ಈ ಮಧ್ಯೆ ಮದ್ರಸ ಮೊದಲಾದೆಡೆ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ತಂಙಳ್ ಅವರ ಮದ್ ಹ್ ಹೆಸರಿನಲ್ಲಿ ಕೆಲವೊಂದು ಆಧುನಿಕ ರೀತಿಯ ಆಭಾಸಕರ ಕಾರ್ಯಕ್ರಗಳಾದ ಸ್ಕೌಟ್ಸ್ ಗೈಡ್ಸ್ ಮೊದಲಾದ ರೀತಿಯ ಕಾರ್ಯಕ್ರಮಗಳಿಗೆ ಡಿಜೆ ಶೈಲಿಯ ಹಾಡುಗಾರಿಕೆ ಅಳವಡಿಸೋದು, ಫ್ಲವರ್ ಶೋ ಮೊದಲಾದ ರೀತಿಯ ಅನಗತ್ಯ ಕಾರ್ಯಕ್ರಮಗಳನ್ನು ಪ್ರತಿ ಮೊಹಲ್ಲಾಗಳಲ್ಲಿರುವ ಧಾರ್ಮಿಕ ನೇತಾರರು ಸಂಪೂರ್ಣವಾಗಿ ನಿಷೇಧಿಸಿ ವಿದ್ಯಾರ್ಥಿಗಳ ನೇರ ಬಾಯಿ ಮೂಲಕ ನೆಬಿ ಮದ್ ಹ್ ಹೇಳಿಸುವ ಮೂಲಕ ನೆಬಿ ದಿನಾಚರಣೆಗೆ ಮೆರುಗು ನೀಡುವ ಅಗತ್ಯತೆ ಕೂಡಾ ಇದೆ. ಮಸೀದಿ-ಮದ್ರಸಗಳು ಆಡಂಬರಕ್ಕೆ ಒತ್ತು ನೀಡದೆ ನೈಜ ನೆಬಿ ಮದ್ ಹ್ ಗಳಿಗೆ, ಪ್ರವಾದಿ ಪ್ರೇಮಕ್ಕೆ ಒತ್ತು ನೀಡುವ ಕಾರ್ಯಕ್ರಮಗಳು ನಡೆಯುವ ನಿಟ್ಟಿನಲ್ಲಿ ಜವಾಬ್ದಾರಿಯುತ ಉಲಮಾ-ಉಮರಾಗಳು ಕಾರ್ಯಪ್ರವೃತ್ತರಾಗಬೇಕಿದೆ.... ಮಿಲಾದ್ ಕಾರ್ಯಕ್ರಮಗಳು ಪ್ರವಾದಿ ಪ್ರೇಮ ಹೃದಯದಿಂದ ಪುಟಿದೇಳುವಂತಿರಲಿ.. ಇಸ್ಲಾಮೀ ಚೌಕಟ್ಟು ಮೀರದಂತಿರಲಿ... ಈ ನಿಟ್ಟಿನಲ್ಲಿ ಕಾರ್ಯಕ್ರಮಗಳು ನಡೆಸುವ ತೀರ್ಮಾನವಾಗಲಿ ಎಂಬುದೇ ಪ್ರವಾದಿ ಜನ್ಮದಿನದ ಸಂದೇಶ.

  • Blogger Comments
  • Facebook Comments

0 comments:

Post a Comment

Item Reviewed: ಪುಣ್ಯ ರಬೀವ್ ಮುಸ್ಲಿಂ ಉಮ್ಮತ್ತನ್ನು ಮತ್ತೆ ಸ್ವಾಗತಿಸಿದೆ : ಸತ್ಯ ವಿಶ್ವಾಸಿ ಪ್ರವಾದಿ ಪ್ರೇಮದಿಂದ ಪುಳಕಿತಗೊಳ್ಳದೆ ಇರಲು ಸಾಧ್ಯವೇ ಇಲ್ಲ. ಪ್ರವಾದಿ ಪ್ರೇಮದ ಹೆಸರಿನಲ್ಲಿ ಆಡಂಬರ ರಾರಾಜಿಸದೆ ಪ್ರವಾದಿಗಳ ಜೀವನ ಮಾದರಿಯಾಗಿರುವ ಸರಳತೆ, ಲಾಲಿತ್ಯ ಮೇಳೈಸಲಿ Rating: 5 Reviewed By: karavali Times
Scroll to Top