ಮಂಗಳೂರು, ಆಗಸ್ಟ್ 07, 2026 (ಕರಾವಳಿ ಟೈಮ್ಸ್) : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ದೆಯ ಮೇಲೆ ಹಲ್ಲೆ ನಡೆಸಿ ದರೋಡೆಗೈದ ಪ್ರಕರಣ ಬೇಧಿಸಿದ ಪೊಲೀಸರು ಮೂರೇ ದಿನಗಳ ಒಳಗೆ ಚಿನ್ನಾಭರಣ ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರು-ಉರ್ವ ಮಟದಕಣಿ, ಕೋರ್ದಬ್ಬು ದೇವಸ್ಥಾನದ ಬಳಿ ನಿವಾಸಿ ಕುಮಾರ್ ಎಂಬವರ ಪುತ್ರ ಬಾಲಸುಬ್ರಮಣ್ಯ (49) ಹಾಗೂ ಮಣ್ಣಗುಡ್ಡ ಬೊಕ್ಕಪಟ್ಣ ಚರ್ಚ್ ಬಳಿಯ ಗಣೇಶ್ ಕೃಪಾ ನಿಲಯ ನಿವಾಸಿ ಮಾಣಿಕ್ಯ ಎಂಬವರ ಪುತ್ರ ಅಟೋ ರಿಕ್ಷಾ ಮಾಲಿಕ ಶ್ಯಾಮ್ ಕುಮಾರ್ (33) ಎಂದು ಹೆಸರಿಸಲಾಗಿದೆ.
ಆಗಸ್ಟ್ 3 ರಂದು ಮಧ್ಯಾಹ್ನ ಸುಮಾರು 1.15 ಗಂಟೆಗೆ 76 ವರ್ಷದ ವೃದ್ಧ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿದ್ದ ಸಂದರ್ಭದಲ್ಲಿ, ಮನೆಯ ಬಾಗಿಲನ್ನು ಯಾರೋ ಬಡಿಯುತ್ತಿರುವುದನ್ನು ಗಮನಿಸಿ ಬಾಗಿಲು ತೆರೆದಾಗ, ಮನೆಯ ಮೆಟ್ಟಿಲಿನ ಬಳಿ ಇಬ್ಬರು ವ್ಯಕ್ತಿಗಳು ನಿಂತುಕೊಂಡಿದ್ದು, ಮನೆ ಬಾಗಿಲನ್ನು ತೆಗೆದು ಅವರನ್ನು ವಿಚಾರಿಸುತ್ತಿದ್ದಾಗಲೇ ಮನೆ ಬಾಡಿಗೆಗೆ ಎಂದು ಮಾಡನಾಡುತ್ತಾ ಆರೋಪಿಗಳು ಬಾಗಿಲನ್ನು ಬಲವಂತವಾಗಿ ದೂಡಿ, ಮನೆಯೊಳಗೆ ನುಗ್ಗಿ ವೃದ್ಧ ಮಹಿಳೆಯನ್ನು ಕೆಳಕ್ಕೆ ಬೀಳಿಸಿ, ಅವರ ಮೇಲೆ ಹಲ್ಲೆ ನಡೆಸಿ, ಆಕೆಯ ಬಳಿಯಿದ್ದ ಒಂದು ಚಿನ್ನದ ಸರ ಹಾಗೂ ಬಳೆಯನ್ನು ಬಲವಂತವಾಗಿ ದೋಚಿಕೊಂಡು ಪರಾರಿಯಾಗಿರುತ್ತಾರೆ.
ಸುಲಿಗೆ ಮಾಡಲಾದ ಚಿನ್ನಾಭರಣಗಳ ಒಟ್ಟು ತೂಕ 24 ಗ್ರಾಂ ಆಗಿದ್ದು, ಅಂದಾಜು ಮೌಲ್ಯ 3 ಲಕ್ಷ ಆಗಿರುತ್ತದೆ. ಈ ಬಗ್ಗೆ ಕೊಣಾಜೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡವು ನಡೆಸಿದ ತನಿಖೆಯ ಸಂದರ್ಭದಲ್ಲಿ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಆಗಸ್ಟ್ 7 ರಂದು ಮರೋಳಿ ಎಂಬಲ್ಲಿ ಇಬ್ಬರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಸುಲಿಗೆ ಮಾಡಲಾದ ಸಂಪೂರ್ಣ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಸ್ವಾಧೀನ ಪಡಿಸಲಾಗಿದೆ. ಪ್ರಕರಣ ವರದಿಯಾದ ಕೇವಲ 3 ದಿನಗಳೊಳಗಾಗಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಮಂಗಳೂರು ನಗರ ಪೆÇಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿಗಳ ಪೈಕಿ ಆರೋಪಿ ಬಾಲ ಸುಬ್ರಮಣ್ಯ ವಿರುದ್ಧ ಈ ಹಿಂದೆ ಬಜಪೆ ಪೆÇಲೀಸ್ ಠಾಣೆಯಲ್ಲಿ 2 ಸುಲಿಗೆ ಪ್ರಕರಣಗಳು, ಮುಲ್ಕಿ ಪೆÇಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ, ಮಂಗಳೂರು ಪೂರ್ವ ಪೆÇಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ, ಮಂಗಳೂರು ಉತ್ತರ ಪೆÇಲೀಸ್ ಠಾಣೆಯಲ್ಲಿ 1 ಕಳವು ಪ್ರಕರಣ ಹಾಗೂ ಮಂಗಳೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ ದಾಖಲಾಗಿರುತ್ತವೆ. ಬಂದಿತರಿಬ್ಬರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪತ್ತೆ ಕಾರ್ಯವು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೆÇಲೀಸ್ ಆಯುಕ್ತೆ ಶ್ರೀಮತಿ ವಿಜಯ ಕ್ರಾಂತಿ ಅವರ ನೇತೃತ್ವದಲ್ಲಿ ನಡೆದಿದ್ದು, ಉಳ್ಳಾಲ ಪೆÇಲೀಸ್ ಠಾಣಾ ಇನ್ಸ್ ಪೆಕ್ಟರ್ ವಿರೂಪಾಕ್ಷ ಸ್ವಾಮಿ ಹಾಗೂ ಕೊಣಾಜೆ ಪೆÇಲೀಸ್ ಠಾಣಾ ಪಿಎಸ್ಸೈಗಳಾದ ನಾಗರಾಜ್ ಮತ್ತು ಪುನೀತ್ ಗಾಂವಕರ್, ಪೆÇಲೀಸ್ ಸಿಬ್ಬಂದಿಗಳಾದ ಎಎಸ್ಸೈ ಸೃಜನ್ ಶೆಟ್ಟಿ, ಎಚ್.ಸಿ.ಗಳಾದ ಇಸಾಕ್, ಸುನೀಲ್, ಶೈಲೇಂದ್ರ ಹಾಗೂ ಬಸವನಗೌಡ ಮತ್ತು ಇತರರು ಪಾಲ್ಗೊಂಡಿದ್ದರು.
ಇಂತಹ ಅಪರಾಧಗಳನ್ನು ತಡೆಗಟ್ಟಲು, ಅಪರಿಚಿತರು ಬಂದಾಗ ಎಚ್ಚೆತ್ತುಕೊಳ್ಳದೇ ಬಾಗಿಲು ತೆಗೆಯುವುದು, ಒಂಟಿ ಮಹಿಳೆಯರು ಇದ್ದಾಗ ಮನೆಯ ಆವರಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸೂಚಿಸಿದ್ದಾರೆ.











0 comments:
Post a Comment