ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ
ಮಂಗಳೂರು, ಆಗಸ್ಟ್ 15, 2026 (ಕರಾವಳಿ ಟೈಮ್ಸ್) : ಕರ್ನಾಟಕದ ಸರ್ವಾಂಗೀಣ ಪ್ರಗತಿಯ ಹಾದಿಯಲ್ಲಿ ರಾಜ್ಯ ಸರಕಾರ ದಿಟ್ಟ ಹೆಜ್ಜೆಯಿಟ್ಟಿದ್ದು, ಸರ್ವರ ಬಾಳಿನಲ್ಲೂ ನೆಮ್ಮದಿ, ಸಂತೋಷವನ್ನು ತರುವ ಮೂಲಕ ಸ್ವಾತಂತ್ರ್ಯದ ನೈಜ ಆಶಯಗಳನ್ನು ಈಡೇರಿಸಿದ ತೃಪ್ತಿ ನಮ್ಮಲ್ಲಿದೆ ಎಂದು ರಾಜ್ಯ ಆರೋಗ್ಯ ಕುಟುಂಬ ಕಲ್ಯಾಣ, ಹಜ್ ಮತ್ತು ವಕ್ಫ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಡಾ ಯು ಟಿ ಖಾದರ್ ಹೇಳಿದರು.
ನಗರದ ನೆಹರು ಮೈದಾನದಲ್ಲಿ ನಡೆದ ದೇಶದ 80ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ನಾಡಿನ ಜನತೆಗೆ ಸಂದೇಶ ನೀಡಿದ ಅವರು, ಪರಿಶಿಷ್ಠ ಜನಾಂಗ, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ವಿಶೇಷವಾಗಿ ಹಿರಿಯ ನಾಗರೀಕರು, ಅಂಗವಿಕಲರು ಮತ್ತು ಕಾರ್ಮಿಕರ ಕಲ್ಯಾಣಕ್ಕಾಗಿ ಸರಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದರು.
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಸ್ವಾತಂತ್ರ್ಯೋತ್ತರ ಭಾರತದ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಸರಕಾರದ ಈ ಯೋಜನೆಗಳು ಜನಸಾಮಾನ್ಯರ ಜೀವನದಲ್ಲಿ ನೆಮ್ಮದಿ ನೀಡಿ, ಅವರ ಆರ್ಥಿಕ ಸಂಕಟಗಳಿಗೆ ತುಸು ಪರಿಹಾರ ನೀಡಿದೆ ಎಂಬುದು ಸಾರ್ಥಕತೆ ಮೂಡಿಸಿದೆ ಎಂದ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಸರಕಾರವು ಪೂರಕವಾಗಿ ಸ್ಪಂದಿಸುತ್ತಾ ಬಂದಿದೆ. ಹಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರಕಾರವು ಅನುಮೋದನೆ ನೀಡಿದ್ದು, ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಬಲಪಡಿಸಿ, ಉತ್ತಮ ನಾಗರಿಕ ಸೌಲಭ್ಯಗಳನ್ನು ನೀಡಲು ಆದ್ಯತೆ ನೀಡಲಾಗಿದೆ ಎಂದರು.
ಬ್ರಿಟಿಷರ ಆಡಳಿತವನ್ನು ಅಹಿಂಸಾ ಮಾರ್ಗದಿಂದಲೇ ಕಿತ್ತೊಗೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಭಗತ್ ಸಿಂಗ್, ಸುಭಾಶ್ಚಂದ್ರ ಭೋಸ್ ಸೇರಿದಂತೆ ಅಸಂಖ್ಯಾತ ಮಹನೀಯರು ದೇಶಕ್ಕಾಗಿ ಮಾಡಿದ ತ್ಯಾಗ-ಬಲಿದಾನ ಮತ್ತು ಅವರ ಆದರ್ಶಗಳು ನಮಗೆಲ್ಲರಿಗೂ ಸ್ಪೂರ್ತಿಯಾಗಿವೆ. ಅವರೆಲ್ಲರನ್ನೂ ಸ್ಮರಿಸಿ ನಮಿಸುವುದು ನಮ್ಮ ಆದ್ಯ ಕರ್ತವ್ಯ. ಇದೊಂದು ಸಂಭ್ರಮದ ದಿನವಷ್ಟೇ ಅಲ್ಲದೇ, ಆತ್ಮಾವಲೋಕನದ ದಿನವೂ ಆಗಿದೆ ಎಂದು ಖಾದರ್, ಪರಕೀಯರ ದಾಸ್ಯದಿಂದ ಮುಕ್ತಿಗೊಂಡ ಬಳಿಕ 1947ರಲ್ಲಿ ಈ ದೇಶದ ಪ್ರಥಮ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪಂಡಿತ್ ಜವಹರ್ ಲಾಲ್ ನೆಹರೂ ಅವರು ಈ ದೇಶದ ವಿಕಾಸಕ್ಕೆ ಮಹತ್ತರ ಮುನ್ನುಡಿ ಬರೆದರು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕೊಟ್ಟ ಮಹತ್ವವು ಈ ದೇಶದ ನಾಗರೀಕರನ್ನು ಪರಿಪೂರ್ಣ ಮಾನವ ಸಂಪನ್ಮೂಲವನ್ನಾಗಿಸಿತು. ಕೃಷಿ-ಕೈಗಾರಿಕಾ ಕ್ಷೇತ್ರದಲ್ಲಿ ಭಾರತ ದೇಶವನ್ನು ಸ್ವಾವಲಂಬಿಯನ್ನಾಗಿಸಲು ಸಾಧ್ಯವಾಯಿತು ಎಂದರು.
ನೂರು ಕೋಟಿಗೂ ಮೀರಿದ ಜನಸಂಖ್ಯೆಯ ಹಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಕ್ಕೂಟ ವ್ಯವಸ್ಥೆ ಭಾರತದ್ದು. ಪ್ರತಿಯೊಂದು ರಾಜ್ಯವೂ ತನ್ನದೇ ಆದ ಭಾಷೆ, ಸಂಸ್ಕೃತಿ ಮತ್ತು ಜೀವನ ವಿಧಾನ ಹೊಂದಿದೆ. ಆದರೂ ಈ ಎಲ್ಲಾ ಭಾಷೆ ಮತ್ತು ಸಂಸ್ಕೃತಿಯನ್ನು ಭಾರತೀಯತೆ ಎನ್ನುವ ಒಂದು ಬಂಧ ಹಿಡಿದಿಟ್ಟಿದೆ. ದೇಶದಲ್ಲಿ ಯಾವುದೇ ದುಷ್ಟ ಶಕ್ತಿಗಳು ತಲೆ ಎತ್ತದಂತೆ ಮಾಡುವುದರ ಜತೆಗೆ ಸರ್ವ ಧರ್ಮಗಳನ್ನು ಗೌರವಿಸಿ ಯಾವುದೇ ಹಿಂಸಾ ಚಟುವಟಿಕೆಗಳಿಗೆ ಅವಕಾಶ ಕೊಡದೇ ಸರ್ವ ಧರ್ಮ ಸಮನ್ವಯ ಭಾವ ಬೆಳೆಸಿಕೊಂಡು ಹೋಗಲು ನಾವುಗಳೆಲ್ಲರೂ ಇಂದು ಪ್ರತಿಜ್ಞೆ ಮಾಡಬೇಕಾಗಿದೆ ಎಂದು ಕರೆ ನೀಡಿದ ಸಚಿವ ಖಾದರ್, ದೇಶದ ನಾಗರಿಕರಾಗಿ ಭವ್ಯ ಪರಂಪರೆ, ಸಂಸ್ಕೃತಿ ಇವುಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುವತ್ತ ನಾವೆಲ್ಲರೂ ಯೋಚಿಸಬೇಕಾಗಿದೆ. ಸ್ನೇಹ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಿಸಿ ದೇಶದ ಒಗ್ಗಟ್ಟು ಮತ್ತು ಐಕ್ಯತೆಯನ್ನು ಕಾಪಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವ ದಿಕ್ಕಿನಲ್ಲಿ ನಾವು ಒಟ್ಟಾಗಿ ಶ್ರಮಿಸೋಣ. ಈ ಭಾವನೆಯನ್ನು ಇಂದಿನ ಪೀಳಿಗೆಯಲ್ಲೂ ಮೂಡಿಸುವ ಪ್ರಯತ್ನ ಆಗಬೇಕಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ಜಿಲ್ಲಾಧಿಕಾರಿ ಕಚೇರಿಯ 3ನೇ ಮಹಡಿಯಲ್ಲಿ ನಿರ್ಮಿಸುವ ಸಲುವಾಗಿ 5 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಪುನೀತ್ ಹೃದಯ ಜ್ಯೋತಿ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 2,520 ರೋಗಿಗಳು ಚಿಕಿತ್ಸಾ ಸೌಲಭ್ಯವನ್ನು ಪಡೆಯುತ್ತಿದ್ದು, ಯಶಸ್ವಿಯಾಗಿ ಕಾರ್ಯಕ್ರಮ ನಡೆಯುತ್ತಿದೆ ಎಂದ ಸಚಿವರು, ಜಿಲ್ಲೆಯಲ್ಲಿ ಒಟ್ಟು 9 ಡಯಾಲಿಸಿಸ್ ಕೇಂದ್ರಗಳಿದ್ದು 823 ಮಂದಿ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆಯುತ್ತಿದ್ದಾರೆ ಎಂದರು.
ನೇತ್ರಾವತಿ ನದಿಗೆ ಅಡ್ಡವಾಗಿ ಕೋಟೆಪುರ-ಬೋಳಾರ ಮಧ್ಯೆ ಸೇತುವೆ ನಿರ್ಮಾಣ ಕಾಮಗಾರಿಯು 200 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಹಾಗೂ ಸಜಿಪನಡು ಮತ್ತು ತುಂಬೆ ಮಧ್ಯೆ ಸೇತುವೆ ನಿರ್ಮಾಣಕ್ಕೆ 60 ಕೋಟಿ ರೂಪಾಯಿ ಮಂಜೂರಾಗಿದ್ದು, ಪ್ರಸ್ತುತ 2 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದ ಅವರು, ಗುರುವಾಯನಕೆರೆ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲು 13 ಕೋಟಿ ಮಂಜೂರುಗೊಂಡಿದ್ದು, ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ. ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಗೂ ಪುತ್ತೂರಿನಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
2026-27ನೇ ಸಾಲಿನಲ್ಲಿ ಉಳ್ಳಾಲ ತಾಲೂಕಿನ ಕಲ್ಲರಕೋಡಿ ಮತ್ತು ವಿಟ್ಲದಲ್ಲಿ ಹೊಸದಾಗಿ ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಕಲ್ಲಾಪುವಿನಲ್ಲಿ ಅಲ್ಪಸಂಖ್ಯಾತರ ಮಹಿಳಾ ಪದವಿಪೂರ್ವ ಕಾಲೇಜು ಪ್ರಾರಂಭಿಸಲಾಗಿದೆ ಎಂದ ಸಚಿವರು, ಕಳೆದ ಕೆಲವು ವರ್ಷಗಳಿಂದ ಮಂಗಳೂರು ನಗರ ಮತ್ತು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿದ್ದು, ಜನತೆ ಶಾಂತಿ ಮತ್ತು ನೆಮ್ಮದಿಯಿಂದ ಬದುಕುತ್ತಿರುವುದು ಸಂತೋಷಕರವಾಗಿದೆ. ಸಮಾಜ ವಿರೋಧಿ ಶಕ್ತಿಗಳು, ಮಾಫಿಯಾಗಳು, ಡ್ರಗ್ಸ್ ಜಾಲಗಳು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ರಾಜ್ಯ ಸರಕಾರವು ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದು, ಇಂತಹ ಚಟುವಟಿಕೆಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಲು ಸರಕಾರವು ಪೆÇಲೀಸರಿಗೆ ಮುಕ್ತ ಅಧಿಕಾರವನ್ನು ನೀಡಿದೆ ಎಂದರು.
ಈ ಸಂದರ್ಭ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ಅಪರ ಜಿಲ್ಲಾಧಿಕಾರಿ ರಾಜು, ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಜಿಲ್ಲಾ ಎಸ್ಪಿ ಡಾ ಅರುಣ್, ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ನರ್ವಾಡೆ, ಮನಪಾ ಆಯುಕ್ತ ರಾಹುಲ್ ರತ್ನಂ ಪಾಂಡೆ ಮೊದಲಾದವರು ಭಾಗವಹಿಸಿದ್ದರು.




























0 comments:
Post a Comment