ಬಂಟ್ವಾಳ ತಾಲೂಕಾಡಳಿತ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ
ಬಂಟ್ವಾಳ, ಆಗಸ್ಟ್ 15, 2026 (ಕರಾವಳಿ ಟೈಮ್ಸ್) : ಸ್ವಾತಂತ್ರ್ಯ ಎಂಬುದು ಸ್ವೇಚ್ಛಾಚಾರವಲ್ಲ, ಪರಕೀಯರಿಂದ ಮುಕ್ತಿ ಮಾತ್ರವಲ್ಲ. ಬಲಿಷ್ಠ ಭಾರತ ಕಟ್ಟಲು ಜವಾಬ್ದಾರಿಯುತ ನಾಗರಿಕರಾಗಿ ತಮ್ಮದೇ ಕೊಡುಗೆ ಕೊಡುವಂತಹ ಸ್ವಾತಂತ್ರ್ಯ ನಮ್ಮದಾಗಬೇಕು ಎಂದು ಬಂಟ್ವಾಳ ತಾಲೂಕು ತಹಶೀಲ್ದಾರ್ ಜಿ ಮಂಜುನಾಥ್ ಅಭಿಪ್ರಾಯಪಟ್ಟರು.
ಬಂಟ್ವಾಳ ತಾಲೂಕಾಡಳಿತ ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಬಿ ಸಿ ರೋಡಿನ ಮಿನಿ ವಿಧಾನಸೌಧದ ಮುಂಭಾಗ ದೇಶದ 80ನೇ ಸ್ವಾತಂತ್ರ್ಯೋತ್ಸವ ಆಚರಣೆಯ ಸಂದರ್ಭ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಬಳಿಕ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಮಾತನಾಡಿ, ಆಧುನಿಕ ತಂತ್ರಜ್ಞಾನಗಳ ಪರಿಣಾಮದಿಂದಾಗಿ ಇಂದು ಜಗತ್ತು ಸಣ್ಣದಾಗುತ್ತಿದೆ. ಇಡೀ ಜಗತ್ತು ವ್ಯಕ್ತಿಯ ಮುಷ್ಠಿಯೊಳಗೆ ಬಂಧಿಯಾಗಿದೆ. ಆದರೆ ಮನುಷ್ಯ ಸಂಬಂಧಗಳು, ಮಾನವೀಯತೆ ಎಂಬುದು ದೂರವಾಗ್ತಾ ಇದೆ ಎಂದು ವಿಷಾದಿಸಿದರಲ್ಲದೆ ಇವತ್ತು ಎಲ್ಲ ರಂಗಗಳಲ್ಲೂ ಅವಕಾಶಗಳು ವಿಸ್ತಾರವಾಗುತ್ತಿದ್ದು, ಸ್ಪರ್ಧಾತ್ಮಕ ವ್ಯವಸ್ಥೆ ಇದೆ. ವಿದ್ಯಾರ್ಥಿಗಳು ಸ್ಪರ್ಧಾ ಜಗತ್ತಿನೊಂದಿಗೆ ಹೊಂದಿಕೊಂಡು ಭವಿಷ್ಯನ್ನು ಕಂಡುಕೊಳ್ಳಬೇಕು ಎಂದು ಕರೆ ನೀಡಿದರು.
ಸಜಿಪಮೂಡ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ರಿತ್ವಿಕ್ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಬಂಟ್ವಾಳ ನಗರಾಭಿವೃದ್ದಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ ಪೂಜಾರಿ ಸಹಿತ ತಾಲೂಕಿನ ವಿವಿಧ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಮೊದಲಾದವರು ಭಾಗವಹಿಸಿದ್ದರು.
ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪ್ಪ ಬಿ ಎಲ್ ವಂದಿಸಿದರು. ನೆತ್ರಕೆರೆ ಶಾಲಾ ಶಿಕ್ಷಕ ಅವಿನಾಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಪೊಲೀಸ್ ಇಲಾಖೆ, ಗೃಹರಕ್ಷಕ ಸಿಬ್ಬಂದಿ, ವಿವಿಧ ಶಾಲಾ ಎನ್ ಸಿ ಸಿ, ಸ್ಕೌಟ್ಸ್, ಗೈಡ್ಸ್ ಮೊದಲಾದ ತಂಡಗಳಿಂದ ಆಕರ್ಷಕ ಪಥ ಸಂಚಲನ ಹಾಗೂ ಧ್ವಜ ವಂದನೆ ನಡೆಯಿತು.













































0 comments:
Post a Comment