56 ವರ್ಷಗಳ ಸುದೀರ್ಘ ಅನುಭವಕ್ಕಾಗಿ ಪಕ್ಷ ಸಂಘಟಿಸುವ ಹೊಣೆ ನೀಡಿ : ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಲ್ಲಡ್ಕ ಪದ್ಮನಾಭ ರೈ ಉಮೇದುವಾರಿಕೆ ಸಲ್ಲಿಕೆ - Karavali Times 56 ವರ್ಷಗಳ ಸುದೀರ್ಘ ಅನುಭವಕ್ಕಾಗಿ ಪಕ್ಷ ಸಂಘಟಿಸುವ ಹೊಣೆ ನೀಡಿ : ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಲ್ಲಡ್ಕ ಪದ್ಮನಾಭ ರೈ ಉಮೇದುವಾರಿಕೆ ಸಲ್ಲಿಕೆ - Karavali Times

728x90

13 August 2026

56 ವರ್ಷಗಳ ಸುದೀರ್ಘ ಅನುಭವಕ್ಕಾಗಿ ಪಕ್ಷ ಸಂಘಟಿಸುವ ಹೊಣೆ ನೀಡಿ : ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಲ್ಲಡ್ಕ ಪದ್ಮನಾಭ ರೈ ಉಮೇದುವಾರಿಕೆ ಸಲ್ಲಿಕೆ

ಬಂಟ್ವಾಳ, ಆಗಸ್ಟ್ 13, 2026 (ಕರಾವಳಿ ಟೈಮ್ಸ್) : ಹಿರಿಯ ಕಾಂಗ್ರೆಸಿಗ, ಸುಮಾರು 56 ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೆ ಪದ್ಮನಾಭ ರೈ ಕಲ್ಲಡ್ಕ ಅವರು ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಅವಕಾಶ ನೀಡುವಂತೆ ಕೋರಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಎಐಸಿಸಿ ವೀಕ್ಷಕರ ಮೂಲಕ ಸೃಜನ್ ಅಭಿಯಾನದ ಮೂಲಕ ನಡೆಯುತ್ತಿರುವ ಅಭಿಪ್ರಾಯ ಸಂಗ್ರಹಕ್ಕಾಗಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಆಗಸ್ಟ್ 11 ರಂದು ಆಗಮಿಸಿದ ವೀಕ್ಷಕರ ಮುಂದೆ ತಮ್ಮ ಉಮೇದುವಾರಿಕೆ ಸಲ್ಲಿಸಿರುವ ಕೆ ಪದ್ಮನಾಭ ರೈ ಅವರು, ಪಕ್ಷದಲ್ಲಿ ಅವಕಾಶವಿದ್ದಾಗಲೂ, ಅವಕಾಶ ಇಲ್ಲದಿದ್ದಾಗಲೂ, ಯಾವುದೇ ನಿರೀಕ್ಷೆಯಿಲ್ಲದೆ ಪಕ್ಷದ ತತ್ವ, ಸಿದ್ಧಾಂತ ಮತ್ತು ಸಂಘಟನೆಯ ಮೇಲೆ ನಂಬಿಕೆ ಇಟ್ಟುಕೊಂಡು ಪ್ರಾಮಾಣಿಕವಾಗಿ ದುಡಿದಿದ್ದೇನೆ ಎಂದು ಮನವರಿಕೆ ಮಾಡಿಕೊಂಡಿದ್ದಾರೆ. 

ಸುದೀರ್ಘ ರಾಜಕೀಯ ಜೀವನ ಸವೆಸಿರುವ ಪದ್ಮನಾಭ ರೈ ಅವರು ಮಂಡಲ ಪಂಚಾಯತ್ ಸದಸ್ಯರಾಗಿ, ಗ್ರಾಮ ಪಂಚಾಯತ್ ಸದಸ್ಯರಾಗಿ, ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯರಾಗಿ, ತಾಲೂಕು ಪಂಚಾಯತ್ ಸದಸ್ಯರಾಗಿ,ಅದ್ಯಕ್ಷರಾಗಿ ಎ.ಪಿ.ಎಂ.ಸಿ. ಸದಸ್ಯ ಹಾಗೂ ಅಧ್ಯಕ್ಷರಾಗಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವಿ ರಾಜಕಾರಣಿಯಾಗಿದ್ದು, ಎಲ್ಲಾ ಜವಾಬ್ದಾರಿಗಳನ್ನು ಪಕ್ಷದ ಸಂಘಟನೆಗೆ ಹಾಗೂ ಜನಸೇವೆಗೆ ನ್ಯಾಯ ದೊರಕಿಸುವ ರೀತಿಯಲ್ಲಿ ಪ್ರಾಮಾಣಿಕವಾಗಿ ನಿರ್ವಹಿಸಿ ಪಕ್ಷದ ನಾಯಕರ ಶ್ಲಾಘನೆಗೆ ಪಾತ್ರರಾದವರು. 

ರಾಜಕೀಯ ಅಲ್ಲದೆ ಅಂತರಾಷ್ಟ್ರೀಯ ಸಾಮಾಜಿಕ ಸಂಸ್ಥೆಯಾಗಿರುವ ರೋಟರಿ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಹಾಗೂ ವಿವಿಧ ಜವಾಬ್ದಾರಿಗಳಲ್ಲಿ ಸೇವೆ ಸಲ್ಲಿಸುತ್ತಾ, ಸಮಾಜದ ಅಗತ್ಯಗಳಿಗೆ ಸ್ಪಂದಿಸುತ್ತಾ ಬಂದವರು. ಅಲ್ಲದೆ ಸಹಾಯ-ಸಹಕಾರ ಕೇಳಿ ಬಂದವರಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಇಂದಿನವರೆಗೂ ನಿರಂತರವಾಗಿ ಸ್ಪಂದಿಸುತ್ತಾ ಬಂದಿರುವ ಗುಣ ಪದ್ಮನಾಭ ರೈ ಅವರದ್ದು. 

ಬಿ.ಎಸ್ಸಿ ಪದವಿ ಜೊತೆಗೆ ರಾಜ್ಯಶಾಸ್ತ್ರ ವಿಭಾಗದಲ್ಲಿ ಮೈಸೂರು ಮುಕ್ತ ವಿವಿಯಿಂದ ಎಂಎ ಸ್ನಾತಕೋತ್ತರ ಪದವಿಯನ್ನೂ ಪೂರೈಸಿ ಉನ್ನತ ಶಿಕ್ಷಣ ಪಡೆದಿರುವ ಕೆ ಪದ್ಮನಾಭ ರೈ ಅವರು ಪಕ್ಷದಲ್ಲಿ ಸವೆಸಿದ ಸುದೀರ್ಘ ಪಯಣದ ಮೆಲಕನ್ನು ವೀಕ್ಷಕರ ಮುಂದಿಟ್ಟು ಇದೀಗ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಪದ್ಮನಾಭ ರೈ ಅವರು ಅರ್ಜಿ ಸಲ್ಲಿಸಿದ್ದಾರೆ. ನನ್ನ 56 ವರ್ಷಗಳ ಪಕ್ಷದ ಅನುಭವ, ಸಂಘಟನಾ ಹಿನ್ನೆಲೆ ಹಾಗೂ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ, ವೀಕ್ಷಕರ ಮುಂದೆ ಪಕ್ಷದ ಎಲ್ಲ ನಾಯಕರು ಹಾಗೂ ಕಾರ್ಯಕರ್ತರುಗಳು ತಮ್ಮ ಪರವಾಗಿ ಅಭಿಪ್ರಾಯವನ್ನು ದಾಖಲಿಸುವಂತೆ ಅವರು ಕೋರಿಕೊಂಡಿದ್ದಾರೆ. 

ಪಕ್ಷದ ಸಂಘಟನೆ ಇನ್ನಷ್ಟು ಬಲಿಷ್ಠವಾಗಬೇಕು, ಕಾರ್ಯಕರ್ತರ ಧ್ವನಿಗೆ ಹೆಚ್ಚಿನ ಆದ್ಯತೆ ದೊರೆಯಬೇಕು ಹಾಗೂ ಕಾಂಗ್ರೆಸ್ ಪಕ್ಷವು ಜಿಲ್ಲೆಯಲ್ಲಿ ಮತ್ತಷ್ಟು ಸದೃಢವಾಗಿ ಬೆಳೆಯಬೇಕು ಎಂಬ ಆಶಯದೊಂದಿಗೆ ಅವರು ಈ ಜವಾಬ್ದಾರಿಯನ್ನು ನಿಭಾಯಿಸುವ ವಿಶ್ವಾಸದೊಂದಿಗೆ ಪಕ್ಷದ ನಾಯಕತ್ವದ ಮುಂದೆ ಮನವಿ ಸಲ್ಲಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: 56 ವರ್ಷಗಳ ಸುದೀರ್ಘ ಅನುಭವಕ್ಕಾಗಿ ಪಕ್ಷ ಸಂಘಟಿಸುವ ಹೊಣೆ ನೀಡಿ : ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಲ್ಲಡ್ಕ ಪದ್ಮನಾಭ ರೈ ಉಮೇದುವಾರಿಕೆ ಸಲ್ಲಿಕೆ Rating: 5 Reviewed By: karavali Times
Scroll to Top