ಬಂಟ್ವಾಳ, ಆಗಸ್ಟ್ 13, 2026 (ಕರಾವಳಿ ಟೈಮ್ಸ್) : ಕಾರಿನಲ್ಲಿ ಎಂಡಿಎಂಎ ಹಾಗೂ ಗಾಂಜಾ ಸಾಗಾಟ ನಡೆಸುತ್ತಿದ್ದ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರು, ಮಾಲು ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಆಲಂಪುರಿ ಸಾಲುಮರದ ತಿಮ್ಮಕ್ಕ ರಾಷ್ಟ್ರೀಯ ಉದ್ಯಾನಬನ ಬಳಿ ಆಗಸ್ಟ್ 12 ರಂದು ಸಂಜೆ ವೇಳೆ ನಡೆದಿದೆ.
ಬಂಧಿತ ಆರೋಪಿಗಳನ್ನು ಮಂಗಳೂರು ನಿವಾಸಿಗಳಾದ ನಾಸಿರ್ ಹುಸೇನ್ (37), ಮೊಹಮ್ಮದ್ ಅಫ್ರೀದಿ (24) ಹಾಗೂ ಗೋಳ್ತಮಜಲು ಗ್ರಾಮದ ನಿವಾಸಿ ಮಹಮ್ಮದ್ ಜುನೈದ್ (38) ಎಂದು ಹೆಸರಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ರನ್ನಗೌಡ ಎಸ್ ಪಾಟೀಲ್ ಅವರಿಗೆ ಬೆಳ್ತಂಗಡಿ-ಪೂಂಜಾಲಕಟ್ಟೆ- ಬಂಟ್ವಾಳ ಮಾರ್ಗವಾಗಿ ಕೆಎ 19 ಎಂಎಫ್ 1227 ನೋಂದಣಿ ಸಂಖ್ಯೆಯ ಸ್ವಿಪ್ಟ್ ಕಾರಿನಲ್ಲಿ ಮೂರು ಅಪರಿಚಿತ ವ್ಯಕ್ತಿಗಳು ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ಮತ್ತು ಗಾಂಜಾದೊಂದಿಗೆ ಬಂಟ್ವಾಳ ಕಡೆಗೆ ಬರುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಕಾರನ್ನು ನಿಲ್ಲಿಸಿ ಪೊಲೀಸರು ಪರಿಶೀಲನೆ ನಡೆಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಗಳು ಬೆಂಗಳೂರಿನಿಂದ ಅಪರಿಚಿತ ವ್ಯಕ್ತಿಯೊಬ್ಬರಿಂದ ಎಂಡಿಎಂಎ ಮತ್ತು ಗಾಂಜಾವನ್ನು ಖರೀದಿಸಿ ಶೇಖರಿಸಿಟ್ಟು ಗಿರಾಕಿಗಳಿಗೆ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿರುತ್ತಾರೆ. ಅವರನ್ನು ಶೋಧಿಸಿದಾಗ 22,570/- ರೂಪಾಯಿ ಮೌಲ್ಯದ 22.57 ಗ್ರಾಂ ಎಂಡಿಎಂಎ, ಹಾಗೂ 1,517/- ರೂಪಾಯಿ ಮೌಲ್ಯದ 30.34 ಗ್ರಾಂ ತೂಕದ ಗಾಂಜಾ ಮತ್ತು 41,225/- ರೂಪಾಯಿ ನಗದು ಹಣ, 2.22 ಲಕ್ಷ ರೂಪಾಯಿ ಮೌಲ್ಯದ ವಾಹನ, ಮೊಬೈಲ್ ಮೊದಲಾದ ಸೊತ್ತುಗಳ ಸಹಿತ ಒಟ್ಟು 2,87,312/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭ ಕೆ.ವಿ, ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ರನ್ನ ಗೌಡ ಎಸ್ ಪಾಟೀಲ್, ಹಾಗೂ ಪ್ರೊ. ಪಿ.ಎಸ್.ಐ ರವರಾದ ಶಿವರಾಮ್, ಫಕೀರಪ್ಪ ಮತ್ತು ಸಿಬ್ಬಂದಿಯವರಾದ ಉದಯ ರೈ, ರಾಧಾಕೃಷ್ಣ ಕೆ , ಪ್ರವೀಣ್ ರೈ, ಪ್ರಶಾಂತ್, ಲೋಕೇಶ್, ವಿವೇಕ್ ರೈ, ಕುಮಾರ್, ಬಸವರಾಜ್, ಶ್ರೀಧರ್, ಧನ್ಯಶ್ರೀ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿರುತ್ತಾರೆ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್, ಸಂಪತ್ ರವರು ಕಾರ್ಯಾಚರಣೆಗೆ ಸಹಕರಿಸಿರುತ್ತಾರೆ.













0 comments:
Post a Comment