ಮುಲ್ಕಿ, ಆಗಸ್ಟ್ 20, 2026 (ಕರಾವಳಿ ಟೈಮ್ಸ್) : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆರೋಪಿಯಿಂದ ಕಳುವಾದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಕೊಡಗು ಜಿಲ್ಲೆಯ, ಮಡಿಕೇರಿ ತಾಲೂಕಿನ, ಅಯ್ಯಂಗೇರಿ ಅಂಚೆ ವ್ಯಾಪ್ತಿಯ, ಸಣ್ಣಪುಲಿಕೊಟ್ಟ ಗ್ರಾಮದ ಕುಬೇರಂಗಡಿ-ಅಜ್ಜಿಮಡ ನಿವಾಸಿ ದಿವಂಗತ ಗೋಪಾಲ ಎಂಬವರ ಪುತ್ರ ರವಿಕುಮಾರ್ ಅಲಿಯಾಸ್ ರವಿ ಎಚ್ ಜಿ (20) ಎಂದು ಹೆಸರಿಸಲಾಗಿದೆ.
ಆಗಸ್ಟ್ 18 ರಂದು ಮಧ್ಯ ರಾತ್ರಿ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಮೌಳೇಶ್ವರ ದೇವಸ್ಥಾನದ ಮಾಡಿನ ಮೇಲೆ ಹಾಕಿರುವ ಜಾಲರಿ ಮೂಲಕ ಒಳಪ್ರವೇಶಿಸಿ ಸಿಸಿ ಟಿವಿ ಕ್ಯಾಮರಾವನ್ನು ತಿರುಗಿಸಿದ ಆರೋಪಿ ಕಾಣಿಕೆ ಡಬ್ಬಿಯ ಬೀಗ ಮುರಿದು ಕಳ್ಳತನ ಮಾಡಿದ್ದ. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಮುಲ್ಕಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನಿಂದ 2195/- ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮುಲ್ಕಿ ಠಾಣಾ ಪಿಎಸ್ಸೈ ಹಾಗೂ ತಂಡ ಈ ಕಾರ್ಯಾಚರಣೆ ನಡೆಸಿದೆ. ಈತನ ವಿರುದ್ದ ನೆಲಮಂಗಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.











0 comments:
Post a Comment