ಮಂಗಳೂರು, ಆಗಸ್ಟ್ 05, 2026 (ಕರಾವಳಿ ಟೈಮ್ಸ್) : ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿರುವುದು ವರದಿಯಾಗಿದೆ.
ನಗರದ ಗುಜ್ಜರಕೆರೆ ಚಹಾ ಅಂಗಡಿಯ ಸಮೀಪ ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳ ಮೇಲೆ ದ್ವಿತೀಯ ವರ್ಷದ ಸುಮಾರು 6 ಮಂದಿ ವಿದ್ಯಾರ್ಥಿಗಳ ತಂಡ ಹಲ್ಲೆ ನಡೆಸಿದೆ ಎಂದು ಗಾಯಾಳು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಐವರನ್ನು ಬಂಧಿಸಿದ್ದು, ಮತ್ತೋರ್ವನಿಗಾಗಿ ಬಲೆ ಬೀಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಗಾಯಾಳುಗಳು ಮತ್ತೋರ್ವ ಶಂಕಿತನನ್ನು ಗುರುತಿಸಬೇಕಿರುವುದರಿಂದ, ಆರನೇ ಆರೋಪಿಯ ಬಗ್ಗೆ ತಿಳಿದುಬರಬೇಕಿದೆ.
ಬಂಧಿತ ಐವರೂ ದ್ವಿತೀಯ ವರ್ಷದ ಲಾಜಿಸ್ಟಿಕ್ಸ್ ಡಿಪೆÇ್ಲಮಾ ವಿದ್ಯಾರ್ಥಿಗಳಾಗಿದ್ದಾರೆ. ಗಾಯಗೊಂಡಿರುವ ಇಬ್ಬರಲ್ಲಿ ಒಬ್ಬರು ಬಿಬಿಎ ವ್ಯಾಸಂಗ ಮಾಡುತ್ತಿದ್ದು, ಮತ್ತೊಬ್ಬರು ಹಾಸ್ಪಿಟಲ್ ಮ್ಯಾನೇಜ್ ಮೆಂಟ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಹಾಗೂ ಗಾಯಾಳುಗಳೆಲ್ಲರೂ ಕೇರಳ ಮೂಲದವರಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಗಾಯಾಳುಗಳು ಶೂ ಧರಿಸಬಾರದು ಎಂದು ಒತ್ತಾಯಿಸಿ, ನಂತರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳು ಘಟನೆಯಲ್ಲಿ ಕೇವಲ ಐವರು ಮಾತ್ರ ಭಾಗಿಯಾಗಿದ್ದರು ಎಂದು ಹೇಳುತ್ತಿದ್ದರೆ, ಗಾಯಾಳುಗಳು ಆರು ಮಂದಿ ಹಲ್ಲೆ ನಡೆಸಿದ್ದರು ಎಂದು ತಿಳಿಸಿದ್ದಾರೆ. ಗಾಯಾಳು ವಿದ್ಯಾರ್ಥಿಗಳು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಗಾಯಾಳುಗಳು ಆರೋಪಿಗಳನ್ನು ಗುರುತಿಸಿದ ನಂತರ ಘಟನೆಯಲ್ಲಿ ಭಾಗಿಯಾಗಿದ್ದವರ ನಿಖರ ಸಂಖ್ಯೆ ಗೊತ್ತಾಗಲಿದೆ. ಈಗಾಗಲೇ ಗುರುತಿಸಲ್ಪಟ್ಟಿರುವ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಕಿರಿಯ ವಿದ್ಯಾರ್ಥಿಗಳು ಗಾಯಗೊಂಡಿದ್ದರಿಂದ ಆರೋಪಿಗಳ ವಿರುದ್ದ ಹಲ್ಲೆ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ಡ್ರೆಸ್ ಕೋಡ್ ಹೇರಲು ಪ್ರಯತ್ನಿಸಿರುವುದು ತನಿಖೆಯಿಂದ ತಿಳಿದು ಬಂದಿರುವ ಹಿನ್ನಲೆಯಲ್ಲಿ ಅವರ ವಿರುದ್ದ ರ್ಯಾಗಿಂಗ್ ಸಂಬಂಧಿ ಸೆಕ್ಷನ್ ಗಳನ್ನು ಸೇರಿಸಲು ಹಾಗೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.











0 comments:
Post a Comment