ಬಂಟ್ವಾಳ, ಸೆಪ್ಟೆಂಬರ್ 16, 2026 (ಕರಾವಳಿ ಟೈಮ್ಸ್) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಬಂಟ್ವಾಳ ತಾಲೂಕು ಹಾಗೂ ಬಡಗಬೆಳ್ಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು.
ಬಡಗಬೆಳ್ಳೂರು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚೈತ್ರ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕ ಕೇಶವ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ಕೃಷಿ ಅಧಿಕಾರಿ ಭಾಸ್ಕರ್ ಅವರು, ಪರಿಸರ ಸಂರಕ್ಷಣೆ ಮಾಡಬೇಕು. ತಮ್ಮ ಪರಿಸರದ ಸುತ್ತಮುತ್ತಲಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಪೂರ್ವಜರು ನಮಗೆ ನೀಡಿರುವ ಪರಿಸರವನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದ್ದು. ಪರಿಸರ ಎಂದರೆ ಕೇವಲ ಗಿಡ ನಾಟಿ ಮಾತ್ರವಲ್ಲ. ಭೂಮಿ ಮೇಲೆ ಇರುವ ಪ್ರಾಣಿ ಪಕ್ಷಿಗಳಿಂದ ಹಿಡಿದು ಎಲ್ಲವೂ ಪರಿಸರವೇ. ಹುಟ್ಟು ಹಬ್ಬ ಆಚರಿಸುವ ಪ್ರತಿಯೊಬ್ಬ ವಿದ್ಯಾರ್ಥಿ ಕೂಡಾ ತಮ್ಮ ಹುಟ್ಟಿದ ದಿನದ ಸಂಭ್ರಮದಂದು ಒಂದು ಗಿಡ ನಾಟಿ ಮಾಡಿ ಇದರ ಬಗ್ಗೆ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡರೆ ಪರಿಸರವನ್ನು ಉಳಿಸಿದಂತಾಗುತ್ತದೆ ಎಂದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಉಷಾ, ಒಕ್ಕೂಟದ ಉಪಾಧ್ಯಕ್ಷೆ ಕವಿತಾ, ಸೇವಾ ಪ್ರತಿನಿಧಿ ಸರಿತಾ ಮೊದಲಾದವರು ಭಾಗವಹಿಸಿದ್ದರು. ಇದೇ ವೇಳೆ ಶಾಲಾ ಮಕ್ಕಳಿಗೆ ಪರಿಸರದ ಬಗ್ಗೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಶಾಲಾ ಶಿಕ್ಷಕರಾದ ಶ್ರೀಮತಿ ದಿವ್ಯಶ್ರೀ ಸ್ವಾಗತಿಸಿ, ಶ್ರೀಮತಿ ಕಮಲಾ ವಂದಿಸಿದರು. ಮೇಲ್ವಿಚಾರಕಿ ರೂಪಾ ಜೆ ರೈ ಕಾರ್ಯಕ್ರಮ ನಿರೂಪಿಸಿದರು.
















0 comments:
Post a Comment