ಮಂಗಳೂರು, ಸೆಪ್ಟೆಂಬರ್ 22, 2026 (ಕರಾವಳಿ ಟೈಮ್ಸ್) : ಬಜ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣವೊಂದರಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಪೊಲೀಸ್ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರನ್ನು ಲೋಕಾಯುಕ್ತ ಪೊಲೀಸರು ಸೆ 21 ರಂದು ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ.
ಪ್ರಕರಣದಲ್ಲಿ ಅಮಾನತ್ತುಪಡಿಸಲಾಗಿದ್ದ ಹಣವನ್ನು ಬಿಡುಗಡೆ ಮಾಡಲು ಬಜ್ಪೆ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರು 25 ಸಾವಿರ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, 15 ಸಾವಿರ ರೂಪಾಯಿ ಹಣವನ್ನು ಮುಂಚಿತವಾಗಿ ಪಡೆದುಕೊಂಡಿದ್ದರು. ಹೆಚ್ಚುವರಿಯಾಗಿ 5 ಸಾವಿರ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸೆಪ್ಟೆಂಬರ್ 21 ರಂದು ದೂರುದಾರರಿಂದ 5 ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುವ ವೇಳೆ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದಾರೆ. ಇನ್ಸ್ ಪೆಕ್ಟರ್ ಅವರನ್ನು ವಶಕ್ಕೆ ಪಡೆದುಕೊಂಡಿರುವ ಲೋಕಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.













0 comments:
Post a Comment