ಬಂಟ್ವಾಳ, ಸೆಪ್ಟೆಂಬರ್ 22, 2026 (ಕರಾವಳಿ ಟೈಮ್ಸ್) : ಕಾರ್ಕಳ ಸಮೀಪದ ಸಾಣೂರು ಬಳಿ ಸೆ 20 ರಂದು ಭೀಕರ ಅಪಘಾತಕ್ಕೊಳಗಾಗಿ ಪವಾಡ ಸದೃಶವಾಗಿ ಪಾರಾಗಿ, ಸಣ್ಣಪುಟ್ಟ ಗಾಯಗಳಿಗಾಗಿ ಮಂಗಳೂರು ನಗರದ ಯೇನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಚಿವ, ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡ ಬಿ ರಮಾನಾಥ ರೈ ಅವರು ಗುಣಮುಖರಾಗಿದ್ದು, ಸೆ 22 ರಂದು ಅಪರಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ. ಮುಂದಿನ ಕನಿಷ್ಠ ಒಂದು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದು, ಮಾಜಿ ಸಚಿವರ ಎಲ್ಲಾ ಖಾಸಗಿ ಕಾರ್ಯಕ್ರಮಗಳನ್ನೂ ಮುಂದೂಡಲಾಗಿದೆ.
ಅಪಘಾತದಿಂದ ಕಾಲಿಗೆ ತೀವ್ರ ತರದ ಗಾಯಗಳಾಗಿದ್ದ ರೈ ಅವರ ಆಪ್ತ ಸಹಾಯಕ ಡೆಂಝಿಲ್ ನೊರೊನ್ಹಾ ಅವರಿಗೆ ಸೆ 22 ರಂದು ಸರ್ಜರಿ ನಡೆಸಲಾಗಿದ್ದು, ಇನ್ನೂ ಕೆಲವು ದಿನ ಚಿಕಿತ್ಸೆ ಮುಂದುವರಿಯಲಿದೆ. ಗಾಯಗೊಂಡಿದ್ದ ಕಾರು ಚಾಲಕ ಅಭಿಷೇಕ್ ಹಾಗೂ ಮತ್ತೋರ್ವ ಆಪ್ತ ಸಹಾಯಕ ಚರಣ್ ಅವರು ಪೂರ್ಣ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಮರುದಿನವೇ ಬಿಡುಗಡೆಗೊಂಡಿದ್ದಾರೆ.
ಮಾಜಿ ಸಚಿವರ ಅಪಘಾತದ ಸುದ್ದಿ ತಿಳಿದು ಕಳೆದೆರಡು-ಮೂರು ದಿನಗಳಿಂದ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಹಾಗೂ ವಿರೋಧ ಪಕ್ಷದ ನಾಯಕರ ಸಹಿತ, ಕುಟುಂಬಿಕರು, ಬಂಧು-ಬಳಗ, ಅಭಿಮಾನಿಗಳು, ಹಿತೈಷಿಗಳು ಹಾಗೂ ಸಾರ್ವಜನಿಕರು ಆಸ್ಪತ್ರೆಗೆ ಭೇಟಿ ರೈ ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲು ಹಾರೈಸಿದ್ದಾರೆ.
ವಿರೋಧ ಪಕ್ಷದ ಪ್ರಮುಖರಾದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ನಿಕಟಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಯು ರಾಜೇಶ್ ನಾಯಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಕುಂಪಲ, ಕಿಯೋನಿಸ್ಕ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಸಹಿತ ಹಲವು ಮುಖಂಡರು ಭೇಟಿ ನೀಡಿ ಮಾಜಿ ಸಚಿವರ ಶೀಘ್ರ ಚೇತರಿಕೆಗಾಗಿ ಹಾರೈಸಿ ಪಕ್ಷದ ಬೇಧ ಮರೆತು ಮಾನವೀಯತೆ ಸಂದೇಶ ಸಾರಿದ್ದಾರೆ.
ಈ ಮಧ್ಯೆ ಕೆಲ ವಿಘ್ನ ಸಂತೋಷಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಅಪಘಾತಕ್ಕೀಡಾಗಿ ಮಾಜಿ ಸಚಿವರ ಬಗ್ಗೆ ಕೆಲವೊಂದು ನೀಚ ಸಂದೇಶಗಳೊಂದಿಗೆ ಎಂದಿನ ಮನೋ ವಿಕೃತಿ ಮೆರೆದಿರುವುದು ಕಂಡು ಬಂದಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಾನವೀಯತೆಗೆ ಸವಾಲಾಗಿರುವ ಇಂತಹ ವಿಘ್ನ ಸಂತೋಷಿಗಳ ವಿರುದ್ದ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿರುವ ನೆಟ್ಟಿಗರು, ಬಿಜೆಪಿ ನಾಯಕರನ್ನಾದರೂ ಮಾದರಿಯಾಗಿಟ್ಟುಕೊಂಡು ಮನುಷ್ಯ ಜೀವಿಯಾಗಿ ಜನಿಸಿದ್ದಕಾದರೂ ತಮ್ಮ ಮಾನಸಿಕ ವಿಕೃತಿಗೆ ಕೊನೆ ಹಾಡಲಿ ಎಂದು ಸಲಹೆ ನೀಡಿದ್ದಾರೆ.






















0 comments:
Post a Comment