ಪ್ರಜಾಸೇವಾ ಆಂದೋಲನದಿಂದ ಸಾರ್ವಜನಿಕ ದೂರುಗಳಿಗೆ ತ್ವರಿತ ಸ್ಪಂದನೆ : ಸಚಿವ ಖಾದರ್ - Karavali Times ಪ್ರಜಾಸೇವಾ ಆಂದೋಲನದಿಂದ ಸಾರ್ವಜನಿಕ ದೂರುಗಳಿಗೆ ತ್ವರಿತ ಸ್ಪಂದನೆ : ಸಚಿವ ಖಾದರ್ - Karavali Times

728x90

5 September 2026

ಪ್ರಜಾಸೇವಾ ಆಂದೋಲನದಿಂದ ಸಾರ್ವಜನಿಕ ದೂರುಗಳಿಗೆ ತ್ವರಿತ ಸ್ಪಂದನೆ : ಸಚಿವ ಖಾದರ್

ಮಂಗಳೂರು, ಸೆಪ್ಟೆಂಬರ್ 05, 2026 (ಕರಾವಳಿ ಟೈಮ್ಸ್) : ಪ್ರತಿಯೊಬ್ಬ ಪ್ರಜೆಯ ಅಹವಾಲನ್ನು  ಆಲಿಸಿ ಅದಕ್ಕೆ ತ್ವರಿತವಾಗಿ ಪರಿಹಾರ ಒದಗಿಸಬೇಕು ಎಂಬ ಆಶಯದಿಂದ ಪ್ರಜಾಸೇವಾ ಇಲಾಖೆಯನ್ನು ರಾಜ್ಯ ಸರಕಾರ ಕಾರ್ಯಾರಂಭ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಯು.ಟಿ ಖಾದರ್ ಹೇಳಿದರು. 

ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಪುತ್ತೂರು ಪುರಭವನದಲ್ಲಿ ಸೆ 5 ರಂದು ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರದ ಪ್ರತಿಯೊಂದು ಯೋಜನೆಯ ಅನುಕೂಲತೆಯನ್ನು ಪ್ರತಿಯೊಬ್ಬ ನಾಗರಿಕರಿಗೆ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿ ಜನರ ಅಹವಾಲನ್ನು ಆಲಿಸಲು ಮತ್ತು ಅದಕ್ಕೆ ಸೂಕ್ತ ಪರಿಹಾರ ಒದಗಿಸಲು ಪ್ರಜಾ ಸೇವಾ ಇಲಾಖೆಯನ್ನು ರಚಿಸಲಾಗಿದೆ. ಸಾರ್ವಜನಿಕರ ಅರ್ಜಿಗಳನ್ನು ನಿಯಮ ಬದ್ಧವಾಗಿ ಪರಿಶೀಲಿಸಿ, ವಿಲೇವಾರಿ ಮಾಡುವುದು ಪ್ರಜಾಸೇವಾ ಆಂದೋಲನದ ಉದ್ದೇಶವಾಗಿದೆ ಎಂದರು. 

ಹಲವಾರು ವರ್ಷಗಳು ಕಳೆದರೂ ಪರಿಹಾರ ಕಾಣದ ಸಮಸ್ಯೆಗಳಿವೆ. ಪ್ರಜಾ ಸೇವೆಯಲ್ಲಿ ಬಂದ ಅರ್ಜಿಗಳನ್ನು ಪರಿಗಣಿಸಿ ಕಾನೂನು ವ್ಯಾಪ್ತಿಯಲ್ಲಿ ಪರಿಹಾರ ಒದಗಿಸಬೇಕು. ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ತಾಳ್ಮೆ ಮತ್ತು ಸಹನೆಯಿಂದ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಜನರ ಸೇವೆಗೆ ಮುಂದಾಗಲು ಸಚಿವ ಯು.ಟಿ. ಖಾದರ್ ಅಧಿಕಾರಿಗಳಿಗೆ  ಕರೆ ನೀಡಿದರು.

ದೇಶದಲ್ಲಿ ಮೊದಲ ಬಾರಿಗೆ ಸಾರ್ವಜನಿಕರ ಸಮಸ್ಯೆ ಮತ್ತು ಅಹವಾಲುಗಳನ್ನು ಆಲಿಸಲು ಪ್ರತ್ಯೇಕ ಇಲಾಖೆಯನ್ನು ರೂಪಿಸಲಾಗಿದೆ. ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಹಲವಾರು ಮಹತ್ತರ ಅಭಿವೃದ್ಧಿ ಯೋಜನೆಗಳು ಜಾರಿಗೆ ಬಂದಿದೆ. ಪ್ರಜಾ ಸೇವೆ ಆಂದೋಲನದಲ್ಲಿ ಬರುವ ಪ್ರತಿಯೊಂದು ಅರ್ಜಿಯನ್ನು ಕೂಡ ರಾಜ್ಯ ಸರ್ಕಾರವು ಗಂಭೀರವಾಗಿ ಪರಿಶೀಲಿಸಲಿದೆ ಎಂದು ಯು.ಟಿ ಖಾದರ್ ತಿಳಿಸಿದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಜಿಲ್ಲಾ ಪಂಚಾಯತ್ ಮಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಜಿಲ್ಲಾ ಎಸ್ಪಿ ಡಾ. ಅರುಣ್ ಕೆ, ಡಿಸಿಪಿ ರವಿಶಂಕರ್, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಪುತ್ತೂರು ತಹಶಿಲ್ದಾರ್ ಎಸ್.ಬಿ ಕೂಡಲಗಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮತ್ತಿತರರು ಮೊದಲಾದವರು ಭಾಗವಹಿಸಿದ್ದರು. 

ಪ್ರಜಾ ಸೇವೆ ಆಂದೋಲನ ಉದ್ಘಾಟನೆಯ ದಿನ ಇಂದು ಪುತ್ತೂರು ಪುರಭವನದಲ್ಲಿ ಸಾರ್ವಜನಿಕರ ಅಹವಾಲುಗಳು ಹರಿದು ಬಂತು. ಇಲಾಖಾವಾರು ಕೌಂಟರುಗಳನ್ನು ತೆರೆದು ಅರ್ಜಿ ಸ್ವೀಕರಿಸಲಾಯಿತು. ಮುಖ್ಯವಾಗಿ ಜಮೀನು ಮಂಜೂರಾತಿ, ಪ್ಲಾಟಿಂಗ್, ಹಕ್ಕು ಪತ್ರ, ಸರ್ವೆ ಸೇರಿದಂತೆ ಕಂದಾಯ ಇಲಾಖೆಯ ಹಲವಾರು ಸಮಸ್ಯೆಗಳು, ಕೋವಿ ಲೈಸೆನ್ಸ್, ಬಸ್ ಮಂಜೂರಾತಿ, ಶಾಲೆಗೆ ಶಿಕ್ಷಕರನ್ನು ಒದಗಿಸುವುದು ಸೇರಿದಂತೆ ಸಾರ್ವಜನಿಕರು ಸಮಸ್ಯೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಮುಂದಿಟ್ಟರು.

ಜಮೀನು ಪ್ಲಾಟಿಂಗ್ ಮಾಡಿ ಆರ್ ಟಿ ಸಿ ಒದಗಿಸಲು ಕಂದಾಯ ಇಲಾಖೆಯು ಹಂತ ಹಂತವಾಗಿ ಶ್ರಮಿಸುತ್ತಿದ್ದು, ಕಾಲ ಮಿತಿಯಲ್ಲಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಪಹಣಿ ಪತ್ರ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದರು.

ಕೋವಿ ಲೈಸೆನ್ಸ್ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಹ ರೈತರಿಗೆ ಲೈಸೆನ್ಸ್ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಎಸ್ಪಿ ತಿಳಿಸಿದರು. 

ಇದೇ ಸಂದರ್ಭ ಜಮೀನು ಮಂಜೂರಾತಿ ಅರ್ಹ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಪಹಣಿ ಪತ್ರ ವಿತರಿಸಿದರು. ಕಳೆದ 20-30 ವರ್ಷಗಳಿಂದ ಬಾಕಿ ಇದ್ದ ಈ ಸಮಸ್ಯೆಗಳನ್ನು ಪರಿಹರಿಸಿ ಪತ್ರ ಒದಗಿಸಿರುವುದು ಸಂತೋಷದ ವಿಚಾರ ಎಂದು ಯು.ಟಿ ಖಾದರ್ ತಿಳಿಸಿದರು.

ಪುತ್ತೂರಿನಲ್ಲಿ ಇಂದು ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ  ಸಾರ್ವಜನಿಕರಿಂದ ಒಟ್ಟು 163 ಅರ್ಜಿಗಳು ಸ್ವೀಕೃತಗೊಂಡಿವೆ. ಈ ಪೈಕಿ ಕಂದಾಯ ಇಲಾಖೆ (61) ಗ್ರಾಮೀಣಾಭಿವೃದ್ಧಿ ಇಲಾಖೆ (22), ಗೃಹ ಇಲಾಖೆ (13) ಅರ್ಜಿಗಳು ಪ್ರಮುಖವಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪ್ರಜಾಸೇವಾ ಆಂದೋಲನದಿಂದ ಸಾರ್ವಜನಿಕ ದೂರುಗಳಿಗೆ ತ್ವರಿತ ಸ್ಪಂದನೆ : ಸಚಿವ ಖಾದರ್ Rating: 5 Reviewed By: karavali Times
Scroll to Top