ಬಂಟ್ವಾಳ, ಸೆಪ್ಟೆಂಬರ್ 05, 2026 (ಕರಾವಳಿ ಟೈಮ್ಸ್) : ರಾಜ್ಯ ಸರಕಾರದ ವಿನೂತನ ಪ್ರಜಾಸೇವಾ ಕಾರ್ಯಕ್ರಮ ಸೆ 5 ರಂದು ರಾಜ್ಯಾದ್ಯಂತ ಉದ್ಘಾಟನೆಗೊಂಡಿದ್ದು, ಬಂಟ್ವಾಳದಲ್ಲಿ ಹೋಬಳಿ ಮಟ್ಟದ ಕಾರ್ಯಕ್ರಮ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸರ್ವಮಂಗಳ ಸಭಾಂಗಣದಲ್ಲಿ ಸೆ 5 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರನ್ನು ಭೇಟಿಯಾದ ಪಾಣೆಮಂಗಳೂರು ನಾಗರಿಕರು ಹಲವು ವರ್ಷಗಳಿಂದ ನಾದುರಸ್ತಿಯಲ್ಲಿರುವ ಪಾಣೆಮಂಗಳೂರು ಪೇಟೆಯಿಂದ ಮೆಲ್ಕಾರ್ ವರೆಗಿನ ರಸ್ತೆಯನ್ನು ಸಂಚಾರ ಯೋಗ್ಯವಾಗಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಸಂದರ್ಭ ಸ್ಥಳದಲ್ಲೇ ಮನವಿಗೆ ಸ್ಪಂದಿಸಿದ ಶಾಸಕರು ಸ್ಥಳೀಯರ ಮನವಿಯನ್ನು ಪುರಸ್ಕರಿಸಿ ರಸ್ತೆಗೆ ತಕ್ಷಣ ಕಾಯಕಲ್ಪ ಒದಗಿಸಿಕೊಡುವಂತೆ ಪಿಡಬ್ಲ್ಯುಡಿ ಅಧಿಕಾರಿ ಅರುಣ್ ಪ್ರಕಾಶ್ ಡಿಸೋಜ ಅವರಿಗೆ ಸೂಚಿಸಿದರು.
ಇದೇ ವೇಳೆ ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಬಿ ಉಮ್ಮರ್ ಅವರು ಕುಕ್ಕಾಜೆ-ಸಜಿಪಮೂಡ-ಬೊಳ್ಳಾಯಿ-ಪಣೋಲಿಬೈಲು-ಕಾರಾಜೆ-ಮಾರ್ನಬೈಲು-ಮೆಲ್ಕಾರ್-ಬಿ ಸಿ ರೋಡು ಮಾರ್ಗವಾಗಿ ಮಂಗಳೂರಿಗೆ ಕನಿಷ್ಠ ಎರಡು ಸರಕಾರಿ ಬಸ್ ಸೇವೆಯನ್ನು ಒದಗಿಸುವಂತೆ ಶಾಸಕರಿಗೆ ಮನವಿ ಮಾಡಿದರು. ಈ ಮಾರ್ಗವಾಗಿ ಬಸ್ ಸೇವೆ ಒದಗಿಸುವಂತೆ 2024ರಿಂದ ನಿರಂತರ ಮನವಿ ಮಾಡಲಾಗುತ್ತಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಈ ಬಗ್ಗೆ ಈಗಾಗಲೇ ಮಂಚಿ, ಸಜಿಪಮುನ್ನೂರು, ಸಜಿಪಮೂಡ, ಕೊಳ್ನಾಡು ಹಾಗೂ ಸಾಲೆತ್ತೂರು ಗ್ರಾಮ ಪಂಚಾಯತಿಗಳು ನಿರ್ಣಯಗಳನ್ನೂ ಕೈಗೊಂಡಿದೆ. ಈಗಲಾದರೂ ನಮ್ಮ ಮನವಿಗೆ ಸ್ಪಂದಿಸುವಂತೆ ಉಮ್ಮರ್ ಅವರು ಶಾಸಕರಿಗೆ ಕೋರಿದರು. ಇದಕ್ಕೂ ಸ್ಪಂದಿಸಿದ ಶಾಸಕರು ಮನವಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆ ಎಸ್ ಆರ್ ಟಿ ಸಿ ಅಧಿಕಾರಿಗೆ ಸೂಚಿಸಿದರು.
ಇದಲ್ಲದೆ ಮಳೆಹಾನಿ, ಪ್ಲಾಟಿಂಗ್, ರೇಶನ್ ಕಾರ್ಡ್, ಮನೆ ನಿವೇಶನ, ಸರಕಾರಿ ಬಸ್ ಸೇವೆ, ತಡೆಗೋಡೆ ನಿರ್ಮಾಣ, ಅಡುಗೆ ಅನಿಲ ವಿತರಣೆಯಲ್ಲಿ ಗೊಂದಲ ಮೊದಲಾದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಎಲ್ಲ ಅಹವಾಲುಗಳನ್ನು ಖುದ್ದು ಶಾಸಕರು ಉಪಸ್ಥಿತರಿದ್ದು ಆಲಿಸಿದರಲ್ಲದೆ ಸೂಕ್ತ ಪರಿಹಾರ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ರಾಜೇಶ್ ನಾಯಕ್, ಅಧಿಕಾರಿಗಳು ವಿಳಂಬ ಮಾಡದೆ ಜನರ ಕೆಲಸ ಮಾಡಿಕೊಟ್ಟರೆ ಜನ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಬರುವುದಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜನರ ಕೆಲಸಗಳನ್ನು ಸಮಯದ ಮಿತಿಯೊಳಗೆ ಮಾಡಿಕೊಡಿ ಎಂದು ಸೂಚಿಸಿದರು. ಜನರ ಸಮಯದ ಬೆಲೆಯನ್ನೂ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪ್ರಜಾಸೇವಾ ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರ ನೀಡಿ ಜನ ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ತಹಶೀಲ್ದಾರ್ ಜಿ ಮಂಜುನಾಥ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಉಪತಹಶೀಹಲ್ದಾರರುಗಳಾದ ದಿವಾಕರ ಮುಗುಳಿಯ, ನರೇಂದ್ರನಾಥ್ ಮಿತ್ತೂರು, ನವೀನ್ ಬೆಂಜನಪದವು, ಆಸಿಫ್ ಇಕ್ಬಾಲ್, ಆರ್ ಐ ಗಳಾದ ರವಿ ಎಂ ಎನ್, ವಿಜಯ್ ಆರ್, ಆಹಾರ ಇಲಾಖಾ ಶಿರಸ್ತೇದಾರ್ ಶಿವಪ್ರಸಾದ್ ಕಾರ್ಕಳ, ಕೆ ಎಸ್ ಆರ್ ಟಿ ಸಿ ಡಿಪೋ ಮ್ಯಾನೇಜರ್ ಇಸ್ಮಾಯಿಲ್, ಪಿಡಬ್ಲುಡಿ ಇಂಜಿನಿಯರ್ ಅರುಣ್ ಪ್ರಕಾಶ್ ಡಿಸೋಜ ಸಹಿತ ವಿವಿಧ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.


















0 comments:
Post a Comment