ನವದೆಹಲಿ, ಸೆಪ್ಟೆಂಬರ್ 08, 2026 (ಕರಾವಳಿ ಟೈಮ್ಸ್) : ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ದದ ಕಾರ್ಮೋಡ ಹಾಗೂ ಹಾರ್ಮುಜ್ ಜಲಸಂಧಿಯ ದಿಗ್ಭಂಧನ ಕಾರಣದಿಂದ ಉಂಟಾಗಿದ್ದ ಗ್ಯಾಸ್ ಪೂರೈಕೆ ವ್ಯತ್ಯಯದಿಂದ ದೇಶದಲ್ಲಿ ವಿಧಿಸಲಾಗಿದ್ದ ನಗರ-ಗ್ರಾಮಾಂತರ ಅಡುಗೆ ಅನಿಲ ಬುಕ್ಕಿಂಗ್ ಅಂತರವನ್ನು ಇದೀಗ ಕೇಂದ್ರ ಸರಕಾರ ತೆಗೆದು ಹಾಕಿದ್ದು, ಇನ್ನು ಮುಂದೆ ದೇಶದಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಿಗೂ ಏಕರೂಪ ಬುಕ್ಕಿಂಗ್ ನಿಯಮ ಜಾರಿಗೆ ಬರಲಿದ್ದು, 25 ದಿನಗಳಲ್ಲೇ ಎಲ್ಲರಿಗೂ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮಧ್ಯಪ್ರಾಚ್ಯ ಯುದ್ದದ ಕಾವು ಒಂದಷ್ಟು ಕಡಿಮೆಯಾಗಿ ಪರಿಸ್ಥಿತಿ ಸುಧಾರಿಸಿದ ಹಿನ್ನಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಇಂಡಿಯನ್ ಆಯಿಲ್, ಬಿಪಿಸಿಎಲ್ ಮತ್ತು ಎಚ್‍ಪಿಸಿಎಲ್ ತೈಲ ಮಾರಾಟ ಕಂಪೆನಿಗಳಿಗೆ ಈ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ಅಧಿಕೃತ ಆದೇಶ ಹೊರಡಿಸಿದೆ.
2026 ರ ಮಾರ್ಚ್ ತಿಂಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಹಾಗೂ ಇರಾನ್ ನಡುವೆ ಉಂಟಾಗಿದ್ದ ಯುದ್ಧದ ಪರಿಣಾಮ ಹಾಗೂ ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದಾಗಿ ಜಾಗತಿಕವಾಗಿ ಇಂಧನ ಸರಬರಾಜಿನಲ್ಲಿ ಭಾರಿ ವ್ಯತ್ಯಯ ಉಂಟಾಗಿತ್ತು. ಹಾಗಾಗಿ, ದೇಶದಲ್ಲಿ ಎಲ್‍ಪಿಜಿ ಸಿಲಿಂಡರ್‍ಗಳ ಅಕ್ರಮ ದಾಸ್ತಾನು ಮತ್ತು ದುರ್ಬಳಕೆಯನ್ನು ತಡೆಯಲು ಸರ್ಕಾರ ಕಠಿಣ ನಿಯಮ ಜಾರಿಗೆ ತಂದಿತ್ತು. ಈ ವೇಳೆ ನಗರ ಪ್ರದೇಶಗಳಲ್ಲಿ ಬುಕಿಂಗ್ ಅವಧಿಯನ್ನು 25 ದಿನಗಳಿಗೆ ಹಾಗೂ ಗ್ರಾಮೀಣ ಭಾಗಗಳಲ್ಲಿ 45 ದಿನಗಳಿಗೆ ನಿಗದಿಪಡಿಸಲಾಗಿತ್ತು. ಸರಕಾರದ ಈ ನಿಯಮದಿಂದಾಗಿ ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ಉಜ್ವಲ ಯೋಜನೆಯ ಫಲಾನುಭವಿಗಳು ತೀವ್ರ ಸಂಕಷ್ಟ ಎದುರಿಸಿದ್ದರು. ಪ್ರಸ್ತುತ ದೇಶದಲ್ಲಿ ಎಲ್‍ಪಿಜಿ ಪೂರೈಕೆ ಪರಿಸ್ಥಿತಿ ಸಂಪೂರ್ಣ ಸುಧಾರಿಸಿದೆ ಮತ್ತು ಸಿಲಿಂಡರ್ ರಿಫಿಲ್ ಬಾಕಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಹಾಗಾಗಿ ಸರ್ಕಾರವು ಗ್ರಾಮೀಣ ಪ್ರದೇಶದ ನಿಯಮವನ್ನು ಸಡಿಲಗೊಳಿಸಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಅವರು, ಇನ್ನು ಮುಂದೆ ನಗರ ಅಥವಾ ಗ್ರಾಮೀಣ ಎಂಬ ಭೇದವಿಲ್ಲದೆ, ದೇಶದ ಯಾವುದೇ ಭಾಗದ ದೇಶೀಯ ಎಲ್‍ಪಿಜಿ ಗ್ರಾಹಕರು ಕೇವಲ 25 ದಿನಗಳ ಅಂತರದಲ್ಲೇ ಮತ್ತೊಂದು ಸಿಲಿಂಡರ್ ಮರು ಬುಕಿಂಗ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.











0 comments:
Post a Comment