ಮಂಗಳೂರು, ಸೆಪ್ಟೆಂಬರ್ 08, 2026 (ಕರಾವಳಿ ಟೈಮ್ಸ್) : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕೈದಿಗಳು ನಿಷೇಧಿತ ಮೊಬೈಲ್ ಪೊನ್‍ಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸೆ 8 ರಂದು ರಾತ್ರಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2026, ಕಲಂ 323 ಬಿ ಎನ್ ಎಸ್ ಹಾಗೂ ಕಲಂ 42 ಕರ್ನಾಟಕ ಕಾರಾಗೃಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಅನಿರೀಕ್ಷಿತವಾಗಿ ದಾಳಿ ನಡೆಸಿ ವಿವಿಧ ಕಡೆ ತಪಾಸಣೆ ನಡೆಸಿದಾಗ, ಎ-ಬ್ಲಾಕ್‍ನಲ್ಲಿದ್ದ ಕೈದಿಗಳ ಪೈಕಿ ರಿಫಾತ್ ಅಲಿ, ಇಬ್ರಾಹಿಂ ಖಲೀಲ್, ಅಸ್ಫಾಕ್ ಅಲಿಯಾಸ್ ಜುಟ್ಟು ಅಸ್ಫಕ್, ಅರ್ಷದ್, ದಾವೂದ್ ಫರ್ವೇಜ್, ನಝರತ್ ಅಲಿ, ಶಿಫಾನ್, ಅಬ್ದುಲ್ ಸಾದಿಕ್, ಅರ್ಫಾಝ್ ಎಂಬವರು ಅಕ್ರಮವಾಗಿ 10 ಮೊಬೈಲ್ ಸ್ಮಾರ್ಟ್ ಪೊನ್ ಗಳನ್ನು ಬಚ್ಚಿಟ್ಟುಕೊಂಡಿದ್ದನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಪೈಕಿ ರಿಫಾತ್ ಅಲಿ, ಇಬ್ರಾಹಿಂ ಖಲೀಲ್, ಅಸ್ಫಾಕ್ ಅಲಿಯಾಸ್ ಜುಟ್ಟು ಅಸ್ಫಕ್, ಅರ್ಷದ್ ಎಂಬವರು ಇತ್ತೇಚೆಗೆ ತೊಕ್ಕೊಟ್ಟು ಬಳಿ ನಡೆದ ಅರೀಫ್ ಕೊಲೆ ಪ್ರಕರಣದ ಆರೋಪಿಗಳಾಗಿರುತ್ತಾರೆ. ದಾವೂದ್ ಫರ್ವೇಜ್, ನಝರತ್ ಅಲಿ, ಶಿಫಾನ್ ಹಾಗೂ ಅಬ್ದುಲ್ ಸಾದಿಕ್ ಎಂಬವರು ಎನ್.ಡಿ.ಪಿ.ಎಸ್ ಡ್ರಗ್ ಪೆಡ್ಲರ್ ಆರೋಪಿಗಳಾಗಿರುತ್ತಾರೆ. ಅರ್ಫಾಝ್ ಎಂಬಾತನು ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾದ ಕೋಕಾ ಪ್ರಕರಣದ ಆರೋಪಿಯಾಗಿರುತ್ತಾನೆ.
ವಶಪಡಿಸಿಕೊಂಡಿರುವ ಮೊಬೈಲ್ ಪೊನ್ ಗಳನ್ನು ಅವುಗಳ ಬಳಕೆ ಮತ್ತು ಪೂರೈಕೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಇತರ ಮಾಹಿತಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.











0 comments:
Post a Comment