ಬಂಟ್ವಾಳ, ಸೆಪ್ಟೆಂಬರ್ 24, 2026 (ಕರಾವಳಿ ಟೈಮ್ಸ್) : ಅರ್ಕುಳ ಯಶಸ್ವಿ ಹಾಲ್ ಬಳಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ ಘಟನೆ ಸೆ 23 ರಂದು ನಡೆದಿದೆ.
ಬಂಧಿತ ಆರೋಪಿಯನ್ನು ಮೇರಮಜಲು ಗ್ರಾಮದ ನಾಲದ ಹೌಸ್ ವೈಶಾಲಿ ನಿಲಯ ನಿವಾಸಿ ಅಮ್ಮು ಪೂಜಾರಿ ಅವರ ಪುತ್ರ ಸುಭಾಶ್ (36) ಎಂದು ಹೆಸರಿಸಲಾಗಿದೆ. ಮಂಗಳೂರು ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದ್ದು, ಆರೋಪಿಯ ಬಳಿ ಇದ್ದ 1.15 ಲಕ್ಷ ರೂಪಾಯಿ ಮೌಲ್ಯದ 23.20 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯ ವಿರುದ್ದ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಜಾಲದ ಹಿಂದಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ತನಿಖೆ ಪ್ರಗತಿಯಲ್ಲಿದೆ. ಆರೋಪಿ ಮೇಲೆ ಈ ಹಿಂದೆ ಮಂಗಳೂರು ಪೂರ್ವ ಪೆÇಲೀಸ್ ಠಾಣೆಯಲ್ಲೂ ಎನ್ ಡಿ ಪಿ ಎಸ್ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರು ಹಾಗೂ ಪ್ರಮುಖವಾಗಿ ವಿದ್ಯಾರ್ಥಿಗಳು ಇಂತಹ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸೂಚಿಸಿದ್ದಾರೆ.














0 comments:
Post a Comment