ಮಂಗಳೂರು, ಸೆಪ್ಟೆಂಬರ್ 06, 2026 (ಕರಾವಳಿ ಟೈಮ್ಸ್) : ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ವಿಶೇಷ ಒತ್ತು ನೀಡಿದ್ದು, ನದಿ ಪ್ರವಾಸೋದ್ಯಮ, ಕ್ರೂಸ್, ಹೌಸ್ ಬೋಟ್, ಬೀಚ್ ಪ್ರವಾಸೋದ್ಯಮ, ವಾಟರ್ ಸ್ಪೋರ್ಟ್ಸ್ ಹಾಗೂ ಸ್ಥಳೀಯ ಸಮುದಾಯ ಆಧಾರಿತ ಪ್ರವಾಸೋದ್ಯಮವನ್ನು ಪರಸ್ಪರ ಜೋಡಿಸುವ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಮಂಗಳೂರಿನ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನೇತ್ರಾವತಿ ನದಿ, ತಣ್ಣೀರು ಬಾವಿ ಬ್ಲೂ ಫ್ಲ್ಯಾಗ್ ಬೀಚ್, ಕರಾವಳಿ ಪ್ರದೇಶಗಳು ಹಾಗೂ ನ್ಯೂ ಮಂಗಳೂರು ಬಂದರಿನ ಪ್ರವಾಸೋದ್ಯಮ ಸಾಮರ್ಥ್ಯದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ನೇತ್ರಾವತಿಯಲ್ಲಿ ರಿವರ್ ಕ್ರೂಸ್, ಹೌಸ್ ಬೋಟ್ :
ನೇತ್ರಾವತಿ ನದಿಯಲ್ಲಿ ರಿವರ್ ಕ್ರೂಸ್ ಹಾಗೂ ಹೌಸ್ ಬೋಟ್ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗುತ್ತಿದೆ. ಈ ಯೋಜನೆಗಳಲ್ಲಿ ಸ್ಥಳೀಯ ಮೀನುಗಾರರು ಮತ್ತು ಕರಾವಳಿ ಸಮುದಾಯದ ಜನರನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ಅವರಿಗೆ ಹೊಸ ಉದ್ಯೋಗ ಮತ್ತು ಆದಾಯದ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ.
ಕ್ರೂಸ್ ಹಡಗುಗಳಲ್ಲಿ ಮಂಗಳೂರಿಗೆ ಬರುವ ಪ್ರವಾಸಿಗರು ಕರಾವಳಿಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಕ್ರೂಸ್ ಸಂಪರ್ಕಿತ ಪ್ರವಾಸಿ ವಲಯಗಳು ಮತ್ತು ಅಗತ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸುವುದಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಂಗಳೂರು-ಗೋವಾ ಕ್ರೂಸ್ ಪ್ರವಾಸೋದ್ಯಮ :
ನ್ಯೂ ಮಂಗಳೂರು ಬಂದರಿನ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೆಚ್ಚಿನ ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರೂಸ್ ಹಡಗುಗಳನ್ನು ಆಕರ್ಷಿಸುವ ಕುರಿತು ಚರ್ಚಿಸಲಾಗಿದೆ.
ಮಂಗಳೂರು-ಕಾರವಾರ-ಗೋವಾ ವಲಯದಲ್ಲಿ ದೇಶೀಯ ಕ್ರೂಸ್ ಸೇವೆಗಳನ್ನು ಉತ್ತೇಜಿಸಲು ಖಾಸಗಿ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪಾಲ್ಗೊಳ್ಳುವಿಕೆಯನ್ನು ಪೆÇ್ರೀತ್ಸಾಹಿಸಲಾಗುವುದು.
ಕರಾವಳಿ ಪ್ರವಾಸೋದ್ಯಮಕ್ಕೆ ಅಗತ್ಯವಿರುವ ಜೆಟ್ಟಿ ಹಾಗೂ ಇತರೆ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಅನುಮತಿಗಳಿಗಾಗಿ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ.
ಬ್ಲೂ ಫ್ಲ್ಯಾಗ್ ಬೀಚ್ ಗಳಲ್ಲಿ ಗುಣಮಟ್ಟದ ಸೌಲಭ್ಯ :
ತಣ್ಣೀರು ಬಾವಿ ಬ್ಲೂ ಫ್ಲ್ಯಾಗ್ ಬೀಚ್ ಸೇರಿದಂತೆ ಪ್ರಮುಖ ಬೀಚ್ ಗಳಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಗುಣಮಟ್ಟದ ಮೂಲ ಸೌಕರ್ಯ, ಆಹಾರ ಮಳಿಗೆಗಳು, ಶ್ಯಾಕ್ ಗಳು, ಸ್ವಚ್ಛತಾ ವ್ಯವಸ್ಥೆ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ತಾತ್ಕಾಲಿಕ ಹಾಗೂ ಅಸಂಘಟಿತ ವ್ಯವಸ್ಥೆಗಳ ಬದಲಿಗೆ, ಏಕರೂಪದ ಗುಣಮಟ್ಟ ಮತ್ತು ಸ್ವಚ್ಛತೆಯನ್ನು ಖಚಿತಪಡಿಸುವ ಮಾದರಿಯನ್ನು ರೂಪಿಸಲಾಗುವುದು.
ತಣ್ಣೀರು ಬಾವಿ ಬ್ಲೂ ಫ್ಲ್ಯಾಗ್ ಬೀಚಿನ ಮೊದಲ ಹಂತದ ಮೂಲ ಸೌಕರ್ಯ ಕಾಮಗಾರಿಗಳನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಸಿ ಆರ್ ಝಡ್ ಅಡೆತಡೆಗಳಿಗೆ ಪರಿಹಾರ :
ಕರಾವಳಿಯಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗೆ ಕೋಸ್ಟಲ್ ರೆಗ್ಯುಲೇಷನ್ ಝೋನ್ (ಸಿ ಆರ್ ಝಡ್) ನಿಯಮಗಳು ಪ್ರಮುಖ ಸವಾಲಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು.
ನೆರೆಯ ರಾಜ್ಯಗಳು ಇಂತಹ ನಿಯಮಗಳಡಿ ಹೇಗೆ ಮೂಲ ಸೌಕರ್ಯ ಅಭಿವೃದ್ಧಿಪಡಿಸಿವೆ ಎಂಬುದನ್ನು ಅಧ್ಯಯನ ಮಾಡಿ, ಅಗತ್ಯ ಅನುಮತಿಗಳು ಮತ್ತು ಸ್ಪಷ್ಟೀಕರಣಗಳಿಗಾಗಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಾಗುವುದು.
ವಾಟರ್ ಸ್ಪೋರ್ಟ್ಸ್ ಗೆ ಮೊದಲು ಮೂಲ ಸೌಕರ್ಯ :
ವಾಟರ್ ಸ್ಪೋರ್ಟ್ಸ್, ಸಾಹಸ ಪ್ರವಾಸೋದ್ಯಮ ಹಾಗೂ ಕರಾವಳಿ ಉತ್ಸವಗಳನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಮುನ್ನ, ರಸ್ತೆ ಸಂಪರ್ಕ, ಪ್ರವೇಶ ಮಾರ್ಗ, ಸುರಕ್ಷತೆ ಹಾಗೂ ಪ್ರವಾಸಿಗರಿಗೆ ಅಗತ್ಯವಿರುವ ಮೂಲ ಸೌಕರ್ಯವನ್ನು ಬಲಪಡಿಸಬೇಕಾಗಿದೆ.
ಮೂಲ ಸೌಕರ್ಯವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿದ ನಂತರ ಖಾಸಗಿ ಹೂಡಿಕೆ ಮತ್ತು ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಸಾಧ್ಯವಾಗಲಿದೆ.
ಹೋಂಸ್ಟೇ ಹೆಸರಿನಲ್ಲಿ ವಾಣಿಜ್ಯ ಲಾಡ್ಜ್ ಗಳಿಗೆ ಅವಕಾಶವಿಲ್ಲ :
ಪ್ರವಾಸಿಗರಿಗೆ ಸ್ಥಳೀಯ ಜೀವನಶೈಲಿ ಮತ್ತು ಸಂಸ್ಕೃತಿಯ ಅನುಭವ ನೀಡುವ ನೈಜ ಹೋಂಸ್ಟೇ ವ್ಯವಸ್ಥೆಯನ್ನು ಪೆÇ್ರೀತ್ಸಾಹಿಸಲಾಗುವುದು. ಆದರೆ ಹೋಂಸ್ಟೇ ಹೆಸರಿನಲ್ಲಿ ದೊಡ್ಡ ಪ್ರಮಾಣದ ವಾಣಿಜ್ಯ ಲಾಡ್ಜ್ ಅಥವಾ ಹೋಟೆಲ್ ಚಟುವಟಿಕೆ ನಡೆಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ. ಹೋಂಸ್ಟೇ ಮತ್ತು ವಾಣಿಜ್ಯ ವಸತಿ ವ್ಯವಸ್ಥೆಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಜಾರಿಗೊಳಿಸಿ, ನಿಗದಿತ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು.
ಕ್ಯಾಸಿನೋ ಪ್ರವಾಸೋದ್ಯಮಕ್ಕೆ ಅವಕಾಶವಿಲ್ಲ :
ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಕ್ಯಾಸಿನೋ ಸಂಸ್ಕೃತಿಯನ್ನು ಉತ್ತೇಜಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ನಮ್ಮ ಉದ್ದೇಶ ಕರಾವಳಿಯನ್ನು ಕ್ಯಾಸಿನೋ ಕೇಂದ್ರವನ್ನಾಗಿಸುವುದಲ್ಲ. ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಸುವ, ಮೀನುಗಾರರು ಮತ್ತು ಕರಾವಳಿ ಸಮುದಾಯಕ್ಕೆ ನೇರವಾಗಿ ಆದಾಯ ತರುವ, ಪರಿಸರವನ್ನು ಸಂರಕ್ಷಿಸುವ ಮತ್ತು ಪ್ರವಾಸಿಗರಿಗೆ ಉತ್ತಮ ಅನುಭವ ನೀಡುವ ಸುಸ್ಥಿರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿ. ಸಮುದ್ರ, ನದಿ, ಬೀಚ್ ಮತ್ತು ಬಂದರು ಈ ಎಲ್ಲ ಸಂಪನ್ಮೂಲಗಳನ್ನು ಸಮಗ್ರವಾಗಿ ಬಳಸಿಕೊಂಡು ಮಂಗಳೂರನ್ನು ಪ್ರಮುಖ ಕರಾವಳಿ ಮತ್ತು ಕ್ರೂಸ್ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜಾರ್ಜ್ ಹೇಳಿದರು.
ಕರಾವಳಿ-ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿಗೆ ಸಿದ್ಧಪಡಿಸಿರುವ ಪ್ರತ್ಯೇಕ ನೀತಿಯಡಿ ರಿವರ್ ಕ್ರೂಸ್, ಹೌಸ್ ಬೋಟ್, ಬೀಚ್ ಮತ್ತು ಕರಾವಳಿ ಪ್ರವಾಸೋದ್ಯಮ ಯೋಜನೆಗಳನ್ನು ಹೆಚ್ಚು ಸಮಾವೇಶಾತ್ಮಕ ದೃಷ್ಟಿಕೋನದಲ್ಲಿ ಜಾರಿಗೆ ತರಲಾಗುವುದು. ವಿಶೇಷವಾಗಿ ಮೀನುಗಾರರು ಮತ್ತು ಕರಾವಳಿ ಸಮುದಾಯಗಳ ಜೀವನೋಪಾಯವನ್ನು ಪ್ರವಾಸೋದ್ಯಮ ಬೆಳವಣಿಗೆಯೊಂದಿಗೆ ನೇರವಾಗಿ ಜೋಡಿಸುವುದು ಪ್ರಮುಖ ಉದ್ದೇಶವಾಗಿದೆ. ಸ್ಥಳೀಯರಿಗೆ ಉದ್ಯೋಗ, ಆದಾಯ ಮತ್ತು ಸಣ್ಣ ಉದ್ಯಮಾವಕಾಶಗಳನ್ನು ಸೃಷ್ಟಿಸುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಲಾಗುವುದು. ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ, ಸುರಕ್ಷತೆ ಮತ್ತು ಉತ್ತಮ ಅನುಭವವನ್ನು ಖಚಿತಪಡಿಸುತ್ತಲೇ ಪರಿಸರದ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ಪ್ರವಾಸೋದ್ಯ ಇಲಾಖೆಯ ಕಾರ್ಯದರ್ಶಿ ಡಾ ರಾಂಪ್ರಸಾತ್ ಮನೋಹರ್ ಹೇಳಿದರು.
















0 comments:
Post a Comment