ಮಂಗಳೂರು, ಸೆಪ್ಟೆಂಬರ್ 21, 2026 (ಕರಾವಳಿ ಟೈಮ್ಸ್) : ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಬಿ ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಖಾಸಗಿ ಬಸ್ ನಡುವೆ ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು ಬಳಿ ಸೆ 20 ರಂದು ಭೀಕರ ಅಪಘಾತ ಸಂಭವಿಸಿದ್ದು, ಪವಾಡಸದೃಶವಾಗಿ ರಮಾನಾಥ ರೈ ಹಾಗೂ ಜೊತೆಗಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಭಾನುವಾರ ಬೆಳಿಗ್ಗೆ ಸ್ಥಳೀಯ ಕಾರ್ಯಕ್ರಮಗಳೆಲ್ಲವನ್ನು ಮುಗಿಸಿಕೊಂಡು ರೈಗಳು ಮಧ್ಯಾಹ್ನದ ಬಳಿಕ ಆತ್ಮೀಯರೊಬ್ಬರ ಎಂಗೇಜ್ ಮೆಂಟ್ ಕಾರ್ಯಕ್ರಮಕ್ಕಾಗಿ ಕಾರ್ಕಳದತ್ತ ತೆರಳುತ್ತಿದ್ದ ವೇಳೆ ಕಾರ್ಕಳದಿಂದ ಮೂಡಬಿದ್ರೆ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸು ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ.
ರಮಾನಾಥ ರೈ ಅವರು ಸಂಚರಿಸುತ್ತಿದ್ದ ಇನ್ನೋವಾ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಅಪಘಾತದ ಭೀಕರತೆಗೆ ಸಾಕ್ಷಿ ಹೇಳುತ್ತಿತ್ತು. ಆದರೆ ರೈಗಳು ಯಾವುದೇ ಗಾಯಗಳಿಲ್ಲದೆ ಪವಾಡಸದೃಸವಾಗಿ ಅಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದ ರೈಗಳ ಆಪ್ತ ಸಹಾಯಕ ಡೆಂಝಿಲ್ ಸಹಿತ ಗನ್ ಮ್ಯಾನ್ ಹಾಗೂ ಚಾಲಕ ಎಲ್ಲರೂ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದಿಂದ ಕಾರಿನೊಳಗೆ ಸಿಲುಕಿದ್ದ ರೈಗಳನ್ನು ತಕ್ಷಣ ಸ್ಥಳೀಯರು ಹೊರಕ್ಕೆ ತೆಗೆದು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಂಗಳೂರು-ಕೊಡಿಯಾಲ್ ಬೈಲಿನ ಯೇನಪೋಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರೈಗಳನ್ನು ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸುತ್ತಲೇ ಶಾಸಕರಾದ ಯು ರಾಜೇಶ್ ನಾಯಕ್, ಐವನ್ ಡಿಸೋಜ, ಡಾ ಇಫ್ತಿಕಾರ್ ಅಲಿ ಸಹಿತ ಹಲವು ಮಂದಿ ಗಣ್ಯರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಆಸ್ಪತ್ರೆಯತ್ತ ಧಾವಿಸಿ ಯೋಗಕ್ಷೇಮ ವಿಚಾರಿಸುತ್ತಿದ್ದ ದೃಶ್ಯ ಕಂಡು ಬಂತು.
ಅಧಿಕಾರ ಇಲ್ಲದಿದ್ದರೂ ದಿನದ ಬಹುತೇಕ ಸಮಯಗಳಲ್ಲಿ ಜನರ ಸಮಸ್ಯೆಗಳನ್ನೇ ಆಲಿಸಿಕೊಂಡು, ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ಸದಾ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ರಮಾನಾಥ ರೈ ಅವರಿಗೆ ಸಮಾಜದ ಎಲ್ಲ ವರ್ಗದ ಜನರ ಪ್ರಾರ್ಥನೆ-ಆಶೀರ್ವಾದವೇ ಶ್ರೀ ರಕ್ಷೆಯಾಗಿ ಅವರನ್ನು ಅಪಘಾತದ ಭೀಕರತೆಯ ನಡುವೆಯೂ ದೇವರು ಅವರನ್ನು ಸುರಕ್ಷಿತವಾಗಿ ಕಾಪಾಡಿದ್ದಾರೆ ಎಂದು ನೆರೆದಿದ್ದ ಅಪಾರ ಸಂಖ್ಯೆಯ ಜನ ಅಭಿಪ್ರಾಯಪಟ್ಟಿದ್ದಾರೆ.


















0 comments:
Post a Comment