ಗುರು ಎಂದರೆ ಕೇವಲ ಪಾಠ ಹೇಳುವವರಲ್ಲ.. ಬದುಕು ಕಲಿಸಿದವರು... - Karavali Times ಗುರು ಎಂದರೆ ಕೇವಲ ಪಾಠ ಹೇಳುವವರಲ್ಲ.. ಬದುಕು ಕಲಿಸಿದವರು... - Karavali Times

728x90

4 September 2026

ಗುರು ಎಂದರೆ ಕೇವಲ ಪಾಠ ಹೇಳುವವರಲ್ಲ.. ಬದುಕು ಕಲಿಸಿದವರು...

- ಡಿ.ಎಸ್.ಐ.ಬಿ ಪಾಣೆಮಂಗಳೂರು

ಶಿಕ್ಷಕರ ದಿನಾಚರಣೆ ಪ್ರಯುಕ್ತ ಕರಾವಳಿ ಟೈಮ್ಸ್ ವಿಶೇಷ ಲೇಖನ

ಶಾಲೆಯ ಆ ಹಳೆಯ ಕಟ್ಟಡ, ತರಗತಿಯ ನಾಲ್ಕು ಗೋಡೆಗಳು, ಕಪ್ಪು ಹಲಗೆ, ಕೈಯಲ್ಲಿ ಸೀಮೆ ಸುಣ್ಣ ಹಿಡಿದು ಪಾಠ ಮಾಡುತ್ತಿದ್ದ ಶಿಕ್ಷಕರು, ಅವರ ಮುಂದೆ ಕುಳಿತು ಕಲಿಯುತ್ತಿದ್ದ ನಾವು, ಇವೆಲ್ಲವೂ ಜೀವನದಲ್ಲಿ ಎಂದಿಗೂ ಮರೆಯಲಾಗದ ಸುಂದರ ನೆನಪುಗಳು. ಕಾಲ ಎಷ್ಟೇ ಬದಲಾಗಲಿ, ನಾವು ಎಷ್ಟೇ ದೊಡ್ಡವರಾಗಲಿ, ಬಾಲ್ಯದ ಶಾಲಾ ದಿನಗಳನ್ನು ನೆನಪಿಸಿಕೊಂಡಾಗ ಮನಸ್ಸು ಮತ್ತೆ ಅದೇ ತರಗತಿಗೆ ಹೋಗುತ್ತದೆ. ಆ ನೆನಪುಗಳ ನಡುವೆ ಎಲ್ಲಕ್ಕಿಂತ ಸ್ಪಷ್ಟವಾಗಿ ಕಾಣಿಸುವುದು ನಮ್ಮನ್ನು ರೂಪಿಸಿದ ಶಿಕ್ಷಕರ ಮುಖ.

ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸುತ್ತೇವೆ. ಹೂವು, ಉಡುಗೊರೆ, ಶುಭಾಶಯ ಮತ್ತು ಸನ್ಮಾನಗಳ ಮೂಲಕ ಶಿಕ್ಷಕರಿಗೆ ಗೌರವ ಸಲ್ಲಿಸುತ್ತೇವೆ. ಆದರೆ ಶಿಕ್ಷಕರಿಗೆ ನಿಜವಾಗಿ ಸಂತೋಷ ನೀಡುವುದು ಇವೆಲ್ಲಕ್ಕಿಂತ ದೊಡ್ಡದು, ತಮ್ಮ ವಿದ್ಯಾರ್ಥಿಗಳು ಒಳ್ಳೆಯ ವ್ಯಕ್ತಿಗಳಾಗಿ ಬೆಳೆದು, ಸಮಾಜದಲ್ಲಿ ಗೌರವದಿಂದ ಬದುಕುತ್ತಿರುವುದನ್ನು ನೋಡುವುದೇ ಶಿಕ್ಷಕರಿಗೆ ಸಿಗುವ ಅತ್ಯಂತ ದೊಡ್ಡ ಸಂತೋಷ.

ನಾನು ಕೂಡ ಒಬ್ಬ ಹಳೆಯ ವಿದ್ಯಾರ್ಥಿ. ಶಾಲೆಯಿಂದ ಹೊರಬಂದು ವರ್ಷಗಳು ಕಳೆದಿರಬಹುದು. ಜೀವನ ನಮ್ಮನ್ನು ಬೇರೆ ಬೇರೆ ದಾರಿಗಳಲ್ಲಿ ಕರೆದೊಯ್ದಿರಬಹುದು. ಆದರೆ ಒಮ್ಮೆ ನಮ್ಮ ಶಾಲೆಯ ಕಡೆಗೆ ಹೆಜ್ಜೆ ಇಟ್ಟಾಗ, ಮನಸ್ಸು ಮತ್ತೆ ಅದೇ ಹಳೆಯ ದಿನಗಳಿಗೆ ಮರಳುತ್ತದೆ. ನಾವು ಕುಳಿತಿದ್ದ ಬೆಂಚುಗಳು, ಓಡಾಡಿದ ಶಾಲೆಯ ಆವರಣ, ಸ್ನೇಹಿತರ ಜೊತೆ ಕಳೆದ ಕ್ಷಣಗಳು, ಪರೀಕ್ಷೆಯ ದಿನಗಳ ಆತಂಕ, ಶಿಕ್ಷಕರ ಗದರಿಕೆ ಎಲ್ಲವೂ ಕಣ್ಣ ಮುಂದೆ ಬರುತ್ತವೆ. ಆಗ ಶಿಕ್ಷಕರು ನಮ್ಮನ್ನು ಗದರಿಸಿದಾಗ ಕೆಲವೊಮ್ಮೆ ಬೇಸರವಾಗುತ್ತಿತ್ತು. ಗೃಹಪಾಠ ಮಾಡದಿದ್ದಾಗ ಬೈಯಿಸಿಕೊಂಡಿದ್ದೇವೆ. ತಪ್ಪು ಮಾಡಿದಾಗ ಶಿಕ್ಷೆ ಅನುಭವಿಸಿದ್ದೇವೆ. ಆದರೆ ಇಂದು ಹಿಂದಿರುಗಿ ನೋಡಿದಾಗ ಅರ್ಥವಾಗುತ್ತದೆ ಆ ಗದರಿಕೆಯಲ್ಲಿ ಕೋಪಕ್ಕಿಂತ ಕಾಳಜಿ ಹೆಚ್ಚಿತ್ತು. ಆ ಶಿಕ್ಷೆಯ ಹಿಂದೆ ನಮ್ಮ ಭವಿಷ್ಯದ ಬಗ್ಗೆ ಚಿಂತನೆ ಇತ್ತು. ನಮ್ಮ ತಪ್ಪನ್ನು ತಿದ್ದಿದ ಪ್ರತಿಯೊಂದು ಮಾತು, ನಮ್ಮನ್ನು ಪೆÇ್ರೀತ್ಸಾಹಿಸಿದ ಪ್ರತಿಯೊಂದು ಪದ, ನಮ್ಮ ಮೇಲೆ ಇಟ್ಟಿದ್ದ ಪ್ರತಿಯೊಂದು ನಂಬಿಕೆ ಇಂದು ಜೀವನದ ಅಮೂಲ್ಯ ಪಾಠಗಳಾಗಿವೆ.

ಶಿಕ್ಷಕರು ನಮಗೆ ಕೇವಲ ಪಾಠಪುಸ್ತಕದ ವಿಷಯಗಳನ್ನು ಕಲಿಸಲಿಲ್ಲ. ಜೀವನವನ್ನು ಹೇಗೆ ಎದುರಿಸಬೇಕು ಎಂಬುದನ್ನೂ ಕಲಿಸಿದರು. ಸೋತಾಗ ಮತ್ತೆ ಪ್ರಯತ್ನಿಸುವ ಧೈರ್ಯ, ಗೆದ್ದಾಗ ಅಹಂಕಾರಪಡದ ಗುಣ, ಹಿರಿಯರನ್ನು ಗೌರವಿಸುವ ಸಂಸ್ಕಾರ, ಕಷ್ಟದಲ್ಲಿರುವವರಿಗೆ ನೆರವಾಗುವ ಮನಸ್ಸು, ತಪ್ಪಾದಾಗ ಒಪ್ಪಿಕೊಳ್ಳುವ ಪ್ರಾಮಾಣಿಕತೆ ಇವೆಲ್ಲವೂ ಶಿಕ್ಷಣದ ಭಾಗವೆಂದು ತಿಳಿಸಿಕೊಟ್ಟವರು ಶಿಕ್ಷಕರು.

ಶಾಲೆ ಮುಗಿದ ನಂತರ ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಬಂಧ ಮುಗಿಯುವುದಿಲ್ಲ. ವಾಸ್ತವವಾಗಿ, ವಿದ್ಯಾರ್ಥಿ ದೊಡ್ಡವನಾದ ಮೇಲೆ ಆ ಸಂಬಂಧದ ನಿಜವಾದ ಅರ್ಥ ತಿಳಿಯುತ್ತದೆ. ಬಾಲ್ಯದಲ್ಲಿ ಶಿಕ್ಷಕರು ಹೇಳಿದ ಕೆಲವು ಮಾತುಗಳು ಆಗ ಅರ್ಥವಾಗದೇ ಇರಬಹುದು. ಆದರೆ ಬದುಕಿನಲ್ಲಿ ಒಂದು ಸಂದರ್ಭ ಬಂದಾಗ, “ನಮ್ಮ ಸರ್ ಆಗಲೇ ಈ ಮಾತು ಹೇಳಿದ್ದರು” ಎಂದು ನೆನಪಾಗುತ್ತದೆ. ಆಗ ಶಿಕ್ಷಕರು ನಮಗೆ ಎಷ್ಟು ದೂರದೃಷ್ಟಿಯಿಂದ ಕಲಿಸಿದ್ದರು ಎಂಬುದು ಅರಿವಾಗುತ್ತದೆ. ಒಬ್ಬ ಹಳೆಯ ವಿದ್ಯಾರ್ಥಿ ತನ್ನ ಶಿಕ್ಷಕರನ್ನು ವರ್ಷಗಳ ನಂತರ ಭೇಟಿಯಾಗಿ, “ಸರ್, ನೀವು ನನಗೆ ಕಲಿಸಿದ ಮಾತು ಇನ್ನೂ ನೆನಪಿದೆ” ಎಂದು ಹೇಳಿದರೆ, ಆ ಕ್ಷಣದಲ್ಲಿ ಶಿಕ್ಷಕರ ಮುಖದಲ್ಲಿ ಮೂಡುವ ಸಂತೋಷವನ್ನು ಯಾವುದೇ ಪ್ರಶಸ್ತಿ ನೀಡಲಾರದು. ವಿದ್ಯಾರ್ಥಿಯ ಯಶಸ್ಸಿನಲ್ಲಿ ತನ್ನ ಅಳಿಲು ಸೇವೆಯಾದರೂ ಇದೆ ಎಂದು ತಿಳಿದಾಗ ಶಿಕ್ಷಕನ ಬದುಕಿಗೆ ಅರ್ಥ ಸಿಗುತ್ತದೆ. ಆದ್ದರಿಂದ ಹಳೆಯ ವಿದ್ಯಾರ್ಥಿಗಳಿಗೂ ಒಂದು ಜವಾಬ್ದಾರಿ ಇದೆ. ನಾವು ಬೆಳೆದ ಶಾಲೆಯನ್ನು ಮರೆಯಬಾರದು. ನಮ್ಮನ್ನು ಬೆಳೆಸಿದ ಶಿಕ್ಷಕರನ್ನು ಮರೆಯಬಾರದು. ಸಾಧ್ಯವಾದಾಗ ಶಾಲೆಗೆ ಭೇಟಿ ನೀಡಬೇಕು. ಶಿಕ್ಷಕರ ಆರೋಗ್ಯ ವಿಚಾರಿಸಬೇಕು. ಇಂದಿನ ವಿದ್ಯಾರ್ಥಿಗಳೊಂದಿಗೆ ನಮ್ಮ ಅನುಭವ ಹಂಚಿಕೊಳ್ಳಬೇಕು. ಸಾಧ್ಯವಾದಷ್ಟು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಬೇಕು. ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು. ನಾವು ಪಡೆದ ಶಿಕ್ಷಣದ ಬೆಳಕನ್ನು ಮತ್ತೊಬ್ಬರ ಬದುಕಿಗೂ ತಲುಪಿಸುವುದು ನಮ್ಮ ಶಿಕ್ಷಕರಿಗೆ ಸಲ್ಲಿಸುವ ಅತ್ಯಂತ ಸುಂದರ ಗೌರವ.

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಳಿಗೆ ಹೆಚ್ಚಿನ ಮಹತ್ವ ಸಿಕ್ಕಿದೆ. ಉತ್ತಮ ಅಂಕ ಪಡೆಯುವುದು ಮುಖ್ಯವೇ ಸರಿ. ಆದರೆ ಜೀವನದಲ್ಲಿ ಅಂಕಗಳಿಗಿಂತ ವ್ಯಕ್ತಿತ್ವ ಮುಖ್ಯ. ದೊಡ್ಡ ಹುದ್ದೆಗಿಂತ ದೊಡ್ಡ ಮನಸ್ಸು ಮುಖ್ಯ. ಹಣಕ್ಕಿಂತ ಮಾನವೀಯತೆ ಮುಖ್ಯ. ಶಿಕ್ಷಣದ ಅಂತಿಮ ಗುರಿ ಕೇವಲ ಒಳ್ಳೆಯ ಉದ್ಯೋಗ ಪಡೆಯುವುದಲ್ಲ; ಒಳ್ಳೆಯ ಮನುಷ್ಯನಾಗಿ ಬದುಕುವುದಾಗಿದೆ.

ಇಂದಿನ ವಿದ್ಯಾರ್ಥಿಗಳ ಮುಂದೆ ಅವಕಾಶಗಳೂ ಹೆಚ್ಚಿವೆ, ಸವಾಲುಗಳೂ ಹೆಚ್ಚಿವೆ. ಮೊಬೈಲ್, ಸಾಮಾಜಿಕ ಜಾಲತಾಣ ಮತ್ತು ತಂತ್ರಜ್ಞಾನ ಅವರ ಬದುಕಿನ ಭಾಗವಾಗಿದೆ. ಈ ಸಂದರ್ಭದಲ್ಲಿ ಶಿಕ್ಷಕರ ಜವಾಬ್ದಾರಿ ಇನ್ನಷ್ಟು ಮಹತ್ವದ್ದಾಗಿದೆ. ಪುಸ್ತಕದ ಜ್ಞಾನ ನೀಡುವುದರ ಜೊತೆಗೆ ಸರಿ-ತಪ್ಪನ್ನು ಗುರುತಿಸುವ ವಿವೇಕ, ಯಶಸ್ಸನ್ನು ಎದುರಿಸುವ ವಿನಯ ಮತ್ತು ಸಮಾಜದ ಬಗ್ಗೆ ಕಾಳಜಿ ಬೆಳೆಸುವ ಕೆಲಸವೂ ಶಿಕ್ಷಕರಿಂದ ಆಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೇ ರೀತಿಯವನಲ್ಲ. ಕೆಲವರು ಓದಿನಲ್ಲಿ ಮುಂದೆ ಇರಬಹುದು, ಕೆಲವರು ಕ್ರೀಡೆಯಲ್ಲಿ, ಕೆಲವರು ಕಲೆಯಲ್ಲಿ, ಇನ್ನೂ ಕೆಲವರು ತಮ್ಮದೇ ಆದ ಪ್ರತಿಭೆಯಲ್ಲಿ ಮಿಂಚಬಹುದು. ಒಬ್ಬ ಒಳ್ಳೆಯ ಶಿಕ್ಷಕ ವಿದ್ಯಾರ್ಥಿಯ ಅಂಕಗಳನ್ನು ಮಾತ್ರ ನೋಡುವುದಿಲ್ಲ; ಅವನೊಳಗಿನ ಸಾಮರ್ಥ್ಯವನ್ನು ಗುರುತಿಸುತ್ತಾನೆ. ಕೆಲವೊಮ್ಮೆ ವಿದ್ಯಾರ್ಥಿಗೆ ತನ್ನ ಮೇಲೆ ನಂಬಿಕೆ ಇಲ್ಲದಿದ್ದರೂ, “ನಿ£್ನಂದ ಸಾಧ್ಯ” ಎಂದು ಹೇಳುವ ಮೊದಲ ವ್ಯಕ್ತಿ ಶಿಕ್ಷಕರಾಗಿರುತ್ತಾರೆ. ಆ ಒಂದು ಮಾತು ವಿದ್ಯಾರ್ಥಿಯ ಬದುಕನ್ನೇ ಬದಲಾಯಿಸಬಹುದು.

ಇಂದು ಶಿಕ್ಷಕರ ದಿನದಂದು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿಯುತ್ತದೆ. ಹಳೆಯ ಫೆÇೀಟೋಗಳನ್ನು ಹಂಚಿಕೊಂಡು, “ಹ್ಯಾಪಿ ಟೀಚರ್ಸ್ ಡೇ” ಎಂದು ಬರೆಯುವುದು ಸುಲಭ. ಆದರೆ ನಮ್ಮ ಶಿಕ್ಷಕರಿಗೆ ಒಂದು ಕರೆ ಮಾಡಿ “ಸರ್, ನೀವು ಹೇಗಿದ್ದೀರಿ?” ಎಂದು ಕೇಳುವುದು, ಅವರ ಆರೋಗ್ಯ ವಿಚಾರಿಸುವುದು, ನಮ್ಮ ಜೀವನದಲ್ಲಿ ಅವರು ಬೀರಿದ ಪ್ರಭಾವವನ್ನು ಹೇಳುವುದು ಇನ್ನಷ್ಟು ಅರ್ಥಪೂರ್ಣ. ನಾವು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ, ನಮ್ಮ ಮೊದಲ ಹೆಜ್ಜೆ ಎಲ್ಲಿ ಇತ್ತು ಎಂಬುದನ್ನು ಮರೆಯಬಾರದು. ನಾವು ಇಂದು ಏನಾಗಿದ್ದೇವೆ ಎಂಬುದರಲ್ಲಿ ನಮ್ಮ ತಂದೆ-ತಾಯಿಯ ಪಾತ್ರ ಎಷ್ಟು ಮಹತ್ವದ್ದೋ, ನಮ್ಮ ಶಿಕ್ಷಕರ ಪಾತ್ರವೂ ಅಷ್ಟೇ ಅಮೂಲ್ಯ. ಅಕ್ಷರ ಕಲಿಸಿದ ಕೈಗಳು ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿವೆ.

ಒಬ್ಬ ಹಳೆಯ ವಿದ್ಯಾರ್ಥಿಯಾಗಿ ನನ್ನ ಶಿಕ್ಷಕರಿಗೆ ನಾನು ಹೇಳಬೇಕೆನಿಸುವ ಮಾತು ಒಂದೇ ನಿಮ್ಮಿಂದ ಕಲಿತ ಪ್ರತಿಯೊಂದು ಪಾಠವೂ ಇಂದು ನೆನಪಿರದಿರಬಹುದು. ನೀವು ಹೇಳಿದ ಪ್ರತಿಯೊಂದು ಪದವೂ ನೆನಪಿರದಿರಬಹುದು. ಆದರೆ ನೀವು ನಮ್ಮ ಮೇಲೆ ಇಟ್ಟಿದ್ದ ನಂಬಿಕೆ, ನಮ್ಮ ತಪ್ಪುಗಳನ್ನು ತಿದ್ದಿದ ರೀತಿ, ನಾವು ಮುಂದೆ ಬರಬೇಕು ಎಂಬ ನಿಮ್ಮ ಆಶಯ ಮಾತ್ರ ಎಂದಿಗೂ ಮರೆಯಲಾಗದು. ನಮ್ಮ ಯಶಸ್ಸನ್ನು ನೋಡಿ ಶಿಕ್ಷಕರು ಹೆಮ್ಮೆಪಡಬೇಕು. “ಈ ವಿದ್ಯಾರ್ಥಿಗೆ ನಾವು ಕಲಿಸಿದ್ದೆವು” ಎಂದು ಸಂತೋಷದಿಂದ ಹೇಳುವ ಅವಕಾಶ ಅವರಿಗೆ ಸಿಗಬೇಕು. ಅದೇ ನಮ್ಮ ಬದುಕಿನ ದೊಡ್ಡ ಸಾಧನೆ. ಶಿಕ್ಷಕರನ್ನು ಗೌರವಿಸುವುದು ಎಂದರೆ ಅವರ ಮುಂದೆ ತಲೆಬಾಗುವುದಷ್ಟೇ ಅಲ್ಲ; ಅವರು ಕಲಿಸಿದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಇನ್ನೊಬ್ಬರ ಬದುಕಿಗೆ ಬೆಳಕಾಗುವುದಾಗಿದೆ. ಒಬ್ಬ ವಿದ್ಯಾರ್ಥಿ ಒಳ್ಳೆಯ ವ್ಯಕ್ತಿಯಾಗಿದ್ದರೆ, ಅದರ ಹಿಂದೆ ಒಬ್ಬ ಶಿಕ್ಷಕರ ಪಾಠವಿರುತ್ತದೆ. ಒಬ್ಬ ವಿದ್ಯಾರ್ಥಿ ಮತ್ತೊಬ್ಬರಿಗೆ ಸಹಾಯ ಮಾಡಿದರೆ, ಅದರ ಹಿಂದೆ ಒಬ್ಬ ಶಿಕ್ಷಕ ಕಲಿಸಿದ ಮಾನವೀಯತೆಯಿರುತ್ತದೆ. ಒಬ್ಬ ಹಳೆಯ ವಿದ್ಯಾರ್ಥಿ ತನ್ನ ಶಿಕ್ಷಕರನ್ನು ವರ್ಷಗಳ ನಂತರವೂ ಪ್ರೀತಿಯಿಂದ ನೆನಪಿಸಿಕೊಂಡರೆ, ಆ ಶಿಕ್ಷಕರ ಬದುಕಿನ ಪಾಠ ಯಶಸ್ವಿಯಾಗಿದೆ ಎಂದರ್ಥ.

ಶಾಲೆಯ ಗಂಟೆ ನಿಂತಿರಬಹುದು. ತರಗತಿ ಮುಗಿದಿರಬಹುದು. ಪುಸ್ತಕದ ಪುಟಗಳು ಹಳೆಯದಾಗಿರಬಹುದು. ಶಿಕ್ಷಕರು ನಿವೃತ್ತರಾಗಿರಬಹುದು. ವಿದ್ಯಾರ್ಥಿಗಳು ಬೇರೆ ಬೇರೆ ದಾರಿಗಳಲ್ಲಿ ಸಾಗಿರಬಹುದು. ಆದರೆ ಒಬ್ಬ ಒಳ್ಳೆಯ ಶಿಕ್ಷಕ ಬರೆದ ಪಾಠವು ವಿದ್ಯಾರ್ಥಿಯ ಜೀವನದಲ್ಲಿ ಎಂದಿಗೂ ಮುಗಿಯುವುದಿಲ್ಲ.

ನಮ್ಮ ಜೀವನದಲ್ಲಿ ಅನೇಕ ಜನರು ಬರುತ್ತಾರೆ, ಹೋಗುತ್ತಾರೆ. ಕೆಲವರು ನೆನಪಿನಲ್ಲಿ ಉಳಿಯುತ್ತಾರೆ. ಆದರೆ ನಮ್ಮನ್ನು ರೂಪಿಸಿದ ಶಿಕ್ಷಕರು ನಮ್ಮ ವ್ಯಕ್ತಿತ್ವದ ಒಂದು ಭಾಗವಾಗಿಯೇ ಉಳಿಯುತ್ತಾರೆ. ಅವರ ಮಾತುಗಳು ನಮ್ಮ ನಿರ್ಧಾರಗಳಲ್ಲಿ, ಅವರ ಬುದ್ಧಿವಾದ ನಮ್ಮ ನಡೆಗಳಲ್ಲಿ, ಅವರ ಆಶೀರ್ವಾದ ನಮ್ಮ ಯಶಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ.

ಆದ್ದರಿಂದ ಈ ಶಿಕ್ಷಕರ ದಿನದಂದು, ನನ್ನ ಎಲ್ಲಾ ಶಿಕ್ಷಕರಿಗೂ ಹೃದಯಪೂರ್ವಕ ನಮನ. ನೀವು ಕಲಿಸಿದ ಅಕ್ಷರಗಳು ನಮ್ಮ ಕೈಯಲ್ಲಿ ಬರಹವಾಗಿ ಉಳಿದಿಲ್ಲ; ನಮ್ಮ ಬದುಕಿನ ದಾರಿಯಾಗಿ ಉಳಿದಿವೆ. ನೀವು ನೀಡಿದ ಶಿಕ್ಷಣ ಕೇವಲ ಪರೀಕ್ಷೆಯ ಉತ್ತರವಾಗಿರಲಿಲ್ಲ; ಅದು ಜೀವನದ ಉತ್ತರ ಹುಡುಕುವ ಶಕ್ತಿಯಾಯಿತು. ಗುರು ಎಂದರೆ ಕೇವಲ ಪಾಠ ಹೇಳುವವರಲ್ಲ; ವಿದ್ಯಾರ್ಥಿಯೊಳಗಿನ ಸಾಮರ್ಥ್ಯವನ್ನು ಗುರುತಿಸಿ, ಅವನ ಬದುಕಿಗೆ ದಾರಿ ತೋರಿಸುವ ಶಿಲ್ಪಿ.

ನಾವು ಇಂದು ಎಲ್ಲೇ ಇದ್ದರೂ, ಎಷ್ಟೇ ಎತ್ತರದಲ್ಲಿದ್ದರೂ, ನಮ್ಮನ್ನು ಮೊದಲ ಬಾರಿಗೆ “ನೀನು ಸಾಧಿಸಬಹುದು” ಎಂದು ನಂಬಿದ ಆ ಗುರುಗಳನ್ನು ಮರೆಯದಿರೋಣ. ನಮ್ಮ ಯಶಸ್ಸಿನಲ್ಲಿ ಶಿಕ್ಷಕರ ಹೆಮ್ಮೆ ಇರಲಿ; ನಮ್ಮ ಬದುಕಿನಲ್ಲಿ ಶಿಕ್ಷಕರ ಪಾಠ ಇರಲಿ.

ಶಿಕ್ಷಕರ ದಿನದಂದು ನಮ್ಮ ಬದುಕಿಗೆ ಬೆಳಕು ನೀಡಿದ ಪ್ರತಿಯೊಬ್ಬ ಶಿಕ್ಷಕರಿಗೂ ಹೃದಯಪೂರ್ವಕ ಗೌರವ ಮತ್ತು ಕೃತಜ್ಞತೆಯ ನಮನ.

  • Blogger Comments
  • Facebook Comments

0 comments:

Post a Comment

Item Reviewed: ಗುರು ಎಂದರೆ ಕೇವಲ ಪಾಠ ಹೇಳುವವರಲ್ಲ.. ಬದುಕು ಕಲಿಸಿದವರು... Rating: 5 Reviewed By: karavali Times
Scroll to Top