ಬಂಟ್ವಾಳ, ಸೆಪ್ಟೆಂಬರ್ 07, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡು ಬಸ್ ಸ್ಟಾಂಡ್ ಹಿಂದುಗಡೆಯ ಶೃತಿ ಪೈ ಎಂಬವರ ಮನೆಗೆ ಯಾರೂ ಇಲ್ಲದ ವೇಳೆ ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳು ಹಾಗೂ ನಗದು ಹಣವನ್ನು ಕಳವುಗೈದ ಘಟನೆ ಸೆ 6 ರಂದು ಬೆಳಕಿಗೆ ಬಂದಿದೆ.
ಈ ಬಗ್ಗೆ ಶೃತಿ ಪೈ ಅವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ಇವರು ತನ್ನ ಅತ್ತೆಯ ಜೊತೆ ವಾಸವಾಗಿದ್ದು, ಒಂದು ತಿಂಗಳ ಹಿಂದೆ ಗಂಡ ಮೃತರಾಗಿದ್ದರಿಂದ ಚೇತರಿಸಿಕೊಳ್ಳದೆ ಇದ್ದು, ಅತ್ತೆಯನ್ನು ತಾಯಿ ಮನೆಯಾದ ಗೋವಾ ರಾಜ್ಯದ ಮಡಗಾವ್ ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದರು. ಸೆ 4 ರಂದು ಸಂಜೆ 5 ಗಂಟೆಗೆ ಮಡಗಾವ್ ನಿಂದ ಬಂದು ಬಟ್ಟೆ ತೆಗೆದುಕೊಂಡು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಯಾದ ಮಂಗಳೂರಿಗೆ ಹೋಗಿ ಅಲ್ಲಿಯೇ ಇದ್ದವರು ಸೆ 6 ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನಿಂದ ಮನೆಗೆ ಬಂದಾಗ, ಮನೆಯ ಮುಂದಿನ ಬಾಗಿಲು ತೆರೆದಿದ್ದು, ಒಳಗೆ ಹೋಗಿ ನೋಡಿದಾಗ ಮನೆಯ ಮೂರು ರೂಮಿನ ಬೀಗ ಮುರಿದಿದ್ದು, ಗಾಡ್ರೇಜಿನಲ್ಲಿದ್ದ ಬಟ್ಟೆ ಮತ್ತು ಮನೆಯ ದಾಖಲೆಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡು ಬಂದಿದೆ. ಗಾಡ್ರೇಜಿನಲ್ಲಿಟ್ಟ ಹಣ, ಚಿನ್ನ ಮತ್ತು ಬೆಳ್ಳಿ ಕಾಣೆಯಾಗಿತ್ತು. ಹಣ ಮತ್ತು ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ.
50 ಸಾವಿರ ರೂಪಾಯಿ ನಗದು ಹಣ, ಸುಮಾರು 96 ಸಾವಿರ ರೂಪಾಯಿ ಮೌಲ್ಯದ ಅವರ ಅತ್ತೆ ಧರಿಸುತ್ತಿದ್ದ 8 ಗ್ರಾಂ ತೂಕದ ನವಿಲು ಚಿತ್ರ ಇರುವ 2 ಬೆಂಡೊಲೆ, 96 ಸಾವಿರ ರೂಪಾಯಿ ಮೌಲ್ಯದ 8 ಗ್ರಾಂ ತೂಕರ 1 ಏರಿಯಲ್ ಚೈನ್ ಮತ್ತು 58 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿಯ ವಸ್ತುಗಳು ಸೇರಿದಂತೆ ಒಟ್ಟು 3 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ಕಳವಾಗಿದೆ ಎಂದವರು ಪೊಲೀಸರಿಗೆ ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment