ಬಂಟ್ವಾಳ, ಸೆಪ್ಟೆಂಬರ್ 24, 2026 (ಕರಾವಳಿ ಟೈಮ್ಸ್) : ತಾಲೂಕಿನ ಕಾವಳಮೂಡೂರು ಗ್ರಾಮದ ಪಂಜಾಡಿ ಎಂಬಲ್ಲಿ ತೋಡಿನಿಂದ ಅಕ್ರಮ ಮರಳು ಸಂಗ್ರಹ ಪ್ರಕರಣ ಬೇಧಿಸಿದ ಪೂಂಜಾಲಕಟ್ಟೆ ಪೊಲೀಸರು ಮರಳನ್ನು ವಶಪಡಿಸಿಕೊಂಡ ಘಟನೆ ಸೆ 23 ರಂದು ಸಂಜೆ ವೇಳೆ ನಡೆದಿದೆ.
ಪೂಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್ಸೈ ರಾಜೇಶ ಕೆ ವಿ ಅವರು ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳ ಜೊತೆ ಈ ಕಾರ್ಯಾಚರಣೆ ನಡೆಸಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೆ, ಸರಕಾರಕ್ಕೆ ಯಾವುದೇ ರಾಜಸ್ವ ಪಾವತಿಸದೆ ಈ ಮರಳು ಸಂಗ್ರಹ ನಡೆಯುತ್ತಿದ್ದು, ಪಂಜಾಡಿ ಎಂಬಲ್ಲಿ ರಸ್ತೆಯ ಬದಿಯಲ್ಲಿ ಸುಮಾರು 50 ಗೋಣಿ ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಮರಳನ್ನು ಅಲ್ಲಿಂದ ಸುಮಾರು 100 ಮೀಟರ್ ಮುಂದಕ್ಕೆ ಸದ್ರಿ ತೋಡಿನಲ್ಲಿ 3-4 ಮಂದಿ ಸೇರಿ ಮರಳು ರಾಶಿ ಹಾಕುತ್ತಿರುವುದು ಕಂಡು ಬಂದಿದೆ. ಪೊಲೀಸರು ತೆರಳುತ್ತಿದ್ದಂತೆ ಆರೋಪಿಗಳು ಓಡಿಹೋಗಿದ್ದು, ಅಲ್ಲಿದ್ದ ಸುಮಾರು 20 ಬುಟ್ಟಿಯಷ್ಟಿದ್ದ ಮರಳು ಹಾಗೂ ಇತರ ಸಾಮಾಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಮರಳಿನ ಮೌಲ್ಯ ಸುಮಾರು 8 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment