ಬಂಟ್ವಾಳ, ಅಕ್ಟೋಬರ್ 28, 2026 (ಕರಾವಳಿ ಟೈಮ್ಸ್) : ತಾಲೂಕಿನ ಫರಂಗಿಪೇಟೆ ಜಂಕ್ಷನ್ನಿನಲ್ಲಿ 2020 ರಲ್ಲಿ ಸ್ಟುಡಿಯೋಗೆ ನುಗ್ಗಿ ಮಾಲಕನ ಕೊಲೆ ನಡೆಸಲು ಯತ್ನಿಸಿದ ನಾಲ್ವರು ಆರೋಪಿಗಳಿಗೆ ನ್ಯಾಯಾಲಯ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಶಿಕ್ಷೆಗೊಳಗಾದ ಅಪರಾಧಿಗಳನ್ನು ಮಹಮ್ಮದ್ ಸೈಫುದ್ದೀನ್, ಮಹಮ್ಮದ್ ಅರ್ಷದ್, ಅಬ್ದುಲ್ ರಹಿಮಾನ್ ಯಾನೆ ಮುನ್ನಿ, ಹಾಗೂ ಮಹಮ್ಮದ್ ಸವಾದ್ ಎಂದು ಹೆಸರಿಸಲಾಗಿದೆ. 2020 ರ ಅಕ್ಟೋಬರ್ 28 ರಂದು ಸಂಜೆ ವೇಳೆ ಫರಂಗಿಪೇಟೆ ಎಂಬಲ್ಲಿ ಸ್ಟುಡಿಯೋ ಮಾಲಿಕ ದಿನೇಶ್ ಎಂಬವರು ತನ್ನ ಸ್ಟುಡಿಯೋದಲ್ಲಿದ್ದಾಗ ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳು ಸ್ಟುಡಿಯೋಗೆ ಬಂದು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಈ ಬಗ್ಗೆ ಅಪರಾಧ ಕ್ರಮಾಂಕ 103/2020 ಕಲಂ 307, 324, 326, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಅಂದಿನ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಪ್ರಸನ್ನ ಎಂ ಎಸ್ ಅವರು ಆರೋಪಿಗಳನ್ನು ದಸ್ತಗಿರಿ ಮಾಡಿ ಅವರ ವಿರುದ್ದ ನ್ಯಾಯಾಲಯಕ್ಕೆ ದೊಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಾಧೀಶ ಜಗದೀಶ್ ವಿ ಎನ್ ಅವರು ಅಕ್ಟೋಬರ್ 28 ರಂದು ನಾಲ್ವರು ಆರೋಪಿಗಳಿಗೂ 7 ವರ್ಷ ಜೈಲು ಶಿಕ್ಷೆ ಮತ್ತು 88 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ಜ್ಯೋತಿ ನಾಯಕ್ ಅವರು ವಾದಿಸಿದ್ದಾರೆ.














0 comments:
Post a Comment