ಅಪಘಾತದಿಂದ ಚೇರಿಕೆ ಬಳಿಕ ಪಕ್ಷದ ಪರ ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಸಚಿವರು
ಬಂಟ್ವಾಳ, ಅಕ್ಟೋಬರ್ 01, 2026 (ಕರಾವಳಿ ಟೈಮ್ಸ್) : ಗಾಂಧೀಜಿ ಅವರ ಆಶಯದಂತೆ ಈ ದೇಶದಲ್ಲಿ ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಶೋಷಿತರ ಪರವಾಗಿ ಕಾಂಗ್ರೆಸ್ ಪಕ್ಷವು ನಿರಂತರವಾಗಿ ಬೆನ್ನುಲಾಗಿ ನಿಂತಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ (ಗ್ರಾಮಾಂತರ) ಇದರ ಆಶ್ರಯದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ, ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಅಕ್ಟೋಬರ್ 2 ರಂದು ನರಿಕೊಂಬು ಗ್ರಾಮದ ನಿನ್ನಿಪಡ್ಪುವಿನಲ್ಲಿ ಗಾಂಧಿ ಜಯಂತಿ ಅಂಗವಾಗಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕ್ರಮಗಳೂ ಯಾವತ್ತೂ ಬಡವರ ಪರವಾಗಿದೆ. ಕಾಂಗ್ರೆಸ್ ಎಂದಿಗೂ ಬಡವರಿಗೆ ತೊಂದರೆ ನೀಡಿಲ್ಲ ಎಂದರು. ಕಳೆದ ಸೆ 20 ರಂದು ಕಾರ್ಕಳದ ಸಾಣೂರಿನಲ್ಲಿ ನಡೆದ ಭೀಕರ ಅಪಘಾತದ ಬಳಿಕ ಚೇರಿಸಿಕೊಂಡ ರೈಗಳು ಇದೇ ಮೊದಲ ಬಾರಿಗೆ ಪಕ್ಷದ ಪರ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ಸಾಹದಿಂದ ಮಾತನಾಡಿದರು.
ಪ್ರಸ್ತುತ ರಾಜ್ಯ ಸರಕಾರ ಪರಿಶಿಷ್ಟ ಜಾತಿ-ಪಂಗಡಗಳ ಅಭಿವೃದ್ದಿಗೆ ಸಂಬಂಧಪಟ್ಟಂತೆ ಸಮಾಜ ಕಲ್ಯಾಣ ಇಲಾಖಾ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಹಲವು ಕ್ರಮಗಳನ್ನು ಪ್ರಕಟಿಸಲಾಗಿದೆ. ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮದ ಸಾಲ ಮನ್ನಾ ಘೋಷಿಸಲಾಗಿದೆ. ಪರಿಶಿಷ್ಟ ಸಮುದಾಯದ ಅಲೇರಿ ಮೂಲಸ್ಥಾನ ಅಭಿವೃದ್ಧಿಗೆ 10 ಕೋಟಿ ರೂಪಾಯಿಗಳ ಅನುದಾನ ನೀಡುವ ಘೋಷಣೆಯೂ ಆಗಿದೆ. ಡಿ ಸಿ ಮನ್ನಾ ಜಮೀನು ಮಂಜೂರಾತಿಗೂ ಶೀಘ್ರ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಸರಕಾರದ ಈ ಎಲ್ಲಾ ಘೋಷಣೆಗಳೂ ಕೆಲವೇ ತಿಂಗಳುಗಳ ಅಂತರದಲ್ಲಿ ಜಾರಿಗೆ ಬರಲಿದೆ ಎಂಬ ವಿಶ್ವಾಸವಿದೆ ಎಂದವರು ಇದೇ ವೇಳೆ ಹೇಳಿದರು.
ಗಾಂಧೀಜಿ ಅವರ ಜನ್ಮ ಜಯಂತಿಯಂದು ಪರಿಸರ ಸ್ವಚ್ಛಗೊಳಿಸುವುದರ ಜೊತೆಗೆ ಪ್ರತಿಯೊಬ್ಬರೂ ಅವರವರ ಮನಸ್ಸಿನ, ಹೃದಯದ ಕಲ್ಮಶಗಳನ್ನು ಶುದ್ದೀಕರಿಸುವ ಮೂಲಕ ಸಮಾಜದಲ್ಲಿ ಸೌಹಾರ್ದದ, ಶಾಂತಿಯ ವಾತಾವರಣ ನಿರ್ಮಿಸಿದಾಗ ಗಾಂಧಿ ಅವರ ಆಶಯ ಕಾರ್ಯರೂಪಕ್ಕೆ ಬರಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ (ಗ್ರಾಮಾಂತರ) ಜಿಲ್ಲಾಧ್ಯಕ್ಷ ಎಚ್ ಮುಹಮ್ಮದ್ ಅಲಿ ಮಾತನಾಡಿ, ಅಭಿವೃದ್ದಿಗೆ ಪರ್ಯಾಯ ಪದವೇ ರಮಾನಾಥ ರೈಗಳು. ಅವರ ಅಭಿವೃದ್ದಿ ಕನಿಷ್ಠ ಕೂಲಿ ಎಂಬ ನೆಲೆಯಲ್ಲಿ ಕ್ಷೇತ್ರದ ಜನ ಮತ ನೀಡಿದರೂ ಅವರ ಯಾವುದೇ ಕಾರಣಕ್ಕೂ ಎರಡು ಬಾರಿ ಸೋಲಬಾರದಿತ್ತು. ಆದರೆ ರೈಗಳು ಸೋತ ನಂತರ ಜನತೆಗೆ ಗೊತ್ತಾಗಿದೆ ಸೋತದ್ದು ರೈಗಳಲ್ಲ, ಜನಗಳು ಎಂದು. ಆದರೆ ರೈಗಳು ಸೋತರೂ ಜನರ ಮಧ್ಯೆಯಿಂದ ದೂರವಾಗಿಲ್ಲ. ಜನಸೇವೆ ಮಾಡಿದರೆ ಜನ ಕೈಬಿಟ್ಟರೂ ದೇವರು ಯಾವತ್ತೂ ಕೈಬಿಡುವುದಿಲ್ಲ ಎಂಬುದಕ್ಕೆ ಇತ್ತೀಚೆಗೆ ನಡೆದ ಅಪಘಾತ ಘಟನೆಯೇ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಂಚಾಲಕ ಇಕ್ಬಾಲ್ ಮಂಚಿ, ಪ್ರಮುಖರಾದ ಕೆ ಪದ್ಮನಾಭ ರೈ, ಬಿ ಎಂ ಅಬ್ಬಾಸ್ ಅಲಿ, ಬೇಬಿ ಕುಂದರ್, ಜಯಂತಿ ಪೂಜಾರಿ, ಐಡಾ ಸುರೇಶ್, ಆಲ್ಬರ್ಟ್ ಮೆನೇಜಸ್, ಆಲ್ಫೋನ್ಸ್ ಮೆನೇಜಸ್, ಪ್ರಸಾದ್ ಗಾಣಿಗ, ಚಿತ್ತರಂಜನ್ ಶೆಟ್ಟಿ, ಅಬ್ದುಲ್ ರಝಾಕ್ ಸುರಿಬೈಲು, ಮೋಹನ್ ಚೆಂಡ್ತಿಮಾರ್, ಫ್ರಾನ್ಸಿಸ್ ಮೊಂತೆರೋ ಕುಳಾಲು, ದಿವಾಕರ ಆಚಾರ್ಯ ಕೊಳ್ನಾಡು, ಪಿ ಟಿ ಇಬ್ರಾಹಿಂ ಸಾಲೆತ್ತೂರು, ಮುಹಮ್ಮದ್ ನಂದಾವರ, ಸಿರಾಜ್ ಮದಕ, ಸಮದ್ ಕೈಕಂಬ, ಶಫೀಕ್ ಗೂಡಿನಬಳಿ, ಉಮೇಶ್ ನೆಲ್ಲಿಗುಡ್ಡೆ, ಸಿದ್ದೀಕ್ ಸರವು, ಫ್ರಾನ್ಸಿಸ್ ಕೊಳ್ನಾಡು, ಲಾರೆನ್ಸ್ ಮೆನೇಜಸ್, ಆನಂದ ಶಂಭೂರು, ಕೃಷ್ಣಪ್ಪ ಪೂಜಾರಿ ನಾಟಿ, ರವೀಂದ್ರ ಸಪಲ್ಯ, ರಿಯಾಝ್ ನೆಹರುನಗರ, ವಿಶ್ವನಾಥ ಕೊಡಂಗೆಕೋಡಿ, ದಿವಾಕರ, ಲಕ್ಷ್ಮಣ ಕಲ್ಯಾಣಗ್ರಹಾರ, ದಿವಾಕರ ಏಳಬೆ, ಅರುಣ್ ಶೆಟ್ಟಿ, ಲಾರೆನ್ಸ್ ಮೆನೇಜಸ್, ಶೇಖರ ಅಂತರ, ಮೋನಪ್ಪ ನಿನ್ನಿಪಡ್ಪು, ಹರೀಶ್ ಕೆದ್ದೇಳು ಸಹಿತ ಸ್ಥಳೀಯ ಪ್ರಮುಖರು ಭಾಗವಹಿಸಿದ್ದರು.
ಬಂಟ್ವಾಳ ವಿಧಾನಸಭಾ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎ ಬಿ ಅಬ್ದುಲ್ಲ ವಂದಿಸಿದರು.


























0 comments:
Post a Comment