ರೈಲ್ವೆ ಮೈಸೂರು ವಿಭಾಗದಲ್ಲಿ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ : ಸ್ವಚ್ಛತಾ-ಹೀ-ಸೇವಾ-2026 ಸಮಾರೋಪ - Karavali Times ರೈಲ್ವೆ ಮೈಸೂರು ವಿಭಾಗದಲ್ಲಿ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ : ಸ್ವಚ್ಛತಾ-ಹೀ-ಸೇವಾ-2026 ಸಮಾರೋಪ - Karavali Times

728x90

2 October 2026

ರೈಲ್ವೆ ಮೈಸೂರು ವಿಭಾಗದಲ್ಲಿ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ : ಸ್ವಚ್ಛತಾ-ಹೀ-ಸೇವಾ-2026 ಸಮಾರೋಪ

ಮೈಸೂರು, ಅಕ್ಟೋಬರ್ 02, 2026 (ಕರಾವಳಿ ಟೈಮ್ಸ್) : ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವತಿಯಿಂದ ಅಕ್ಟೋಬರ್ 2ರಂದು ಮೈಸೂರು ಗಾಂಧೀ ಭವನದಲ್ಲಿ ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಸ್ವಚ್ಛತಾ ಹಿ ಸೇವಾ-2026 ಅಭಿಯಾನದ ಸಮಾರೋಪ ಕಾರ್ಯಕ್ರಮ ನಡೆಯಿತು.

ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಅವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಗೌರವ ಸಲ್ಲಿಸಿ, ಸ್ವಚ್ಛತೆ ಮತ್ತು ಸಾರ್ವಜನಿಕ ಸೇವೆಯಲ್ಲಿ ಪ್ರತಿಯೊಬ್ಬರ ಸಹಭಾಗಿತ್ವದ ಮಹತ್ವ ಬಗ್ಗೆ ಹೇಳಿದರು.

ಕಾರ್ಯಕ್ರಮದಲ್ಲಿ ಸ್ವಚ್ಛತಾ ಹಿ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ರೈಲ್ವೆ ಸಿಬ್ಬಂದಿ, ಸಫಾಯಿ ಮಿತ್ರರು ಹಾಗೂ ಲಲಿತಾ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2ರವರೆಗೆ “ಸ್ವಚ್ಛತೆಯಲ್ಲಿ ಸಹಭಾಗಿ, ಸ್ವಚ್ಛ ಭಾರತ, ವಿಕಸಿತ ಭಾರತ” ಎಂಬ ಘೋಷವಾಕ್ಯದಡಿ ಸ್ವಚ್ಛತಾ ಹಿ ಸೇವಾ ಅಭಿಯಾನವನ್ನು ಮೈಸೂರು ವಿಭಾಗದಾದ್ಯಂತ ಹಮ್ಮಿಕೊಳ್ಳಲಾಯಿತು. ಅಭಿಯಾನದಡಿ ಒಟ್ಟು 852 ಸ್ವಚ್ಛತಾ ಗುರಿ ಘಟಕಗಳನ್ನು ಗುರುತಿಸಿ ಸ್ವಚ್ಛಗೊಳಿಸಿ ಪೂರ್ಣಗೊಳಿಸಲಾಯಿತು. ವಿವಿಧ ಚಟುವಟಿಕೆಗಳಲ್ಲಿ ಸುಮಾರು 2,500 ಮಂದಿ ಭಾಗವಹಿಸಿದರು.

ತ್ಯಾಜ್ಯ ವಿಂಗಡಣೆ, ಘನ ತ್ಯಾಜ್ಯ ನಿರ್ವಹಣಾ ನಿಯಮಗಳು 2026, ನೀರಿನ ಸಂರಕ್ಷಣೆ ಹಾಗೂ ಏಕ ಬಳಕೆಯ ಪ್ಲಾಸ್ಟಿಕ್ ತ್ಯಜಿಸುವ ಕುರಿತು ವಿವಿಧ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. 292 ಸಫಾಯಿ ಮಿತ್ರರು ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣಾ ಶಿಬಿರಗಳ ಪ್ರಯೋಜನ ದೊರೆಯಿತು.

ಅ 1 ರಂದು ಮೈಸೂರು ರೈಲು ನಿಲ್ದಾಣದಲ್ಲಿ “ಒಂದು ದಿನ, ಒಂದು ಗಂಟೆ, ಒಟ್ಟಾಗಿ” ಎಂಬ ಆಶಯದಡಿ ಸಾಮೂಹಿಕ ಶ್ರಮದಾನ ನಡೆಸಲಾಯಿತು. ಇದರಲ್ಲಿ ಸುಮಾರು 320 ಅಧಿಕಾರಿಗಳು, ಮೇಲ್ವಿಚಾರಕರು ಮತ್ತು ಸಿಬ್ಬಂದಿ ಭಾಗವಹಿಸಿದರು.

ಅ 2ರಂದು ಕಾರ್ಯಕ್ರಮದ ನಂತರ ಮೈಸೂರು ಚಾಮುಂಡಿ ಕ್ಲಬ್ ಅಧಿಕಾರಿಗಳ ಕಾಲೋನಿಯಲ್ಲಿ ಮೈಸೂರು ಡಿ ಆರ್ ಎಂ ಮುದಿತ್ ಮಿತ್ತಲ್, ಶಾಖಾಧಿಕಾರಿಗಳು ಹಾಗೂ ಸಿಬ್ಬಂದಿಯವರು ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಶಾಖಾಧಿಕಾರಿಗಳು, ರೈಲ್ವೆ ಸಿಬ್ಬಂದಿ, ಸ್ಕೌಟ್ಸ್ ಮತ್ತು ಗೈಡ್ಸ್, ಸಫಾಯಿ ಮಿತ್ರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಸ್ವಚ್ಛ ಮತ್ತು ಹಸಿರು ರೈಲ್ವೆ ಪರಿಸರ ನಿರ್ಮಾಣಕ್ಕೆ ಮೈಸೂರು ವಿಭಾಗ ನಿರಂತರವಾಗಿ ಬದ್ಧವಾಗಿದೆ ಎಂದು ವಿಭಾಗೀಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಅವರು ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ರೈಲ್ವೆ ಮೈಸೂರು ವಿಭಾಗದಲ್ಲಿ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ : ಸ್ವಚ್ಛತಾ-ಹೀ-ಸೇವಾ-2026 ಸಮಾರೋಪ Rating: 5 Reviewed By: karavali Times
Scroll to Top