ಅ 18-19 ರಂದು ಇರ್ವತ್ತೂರುಪದವಿನಲ್ಲಿ ಶಾರದಾ ಪೂಜಾ ಮಹೋತ್ಸವದ ದಶಮಾನೋತ್ಸವ : ಡಾ. ಮೋಹನ್ ಆಳ್ವಗೆ ‘ಶ್ರೀ ಶಾರದಾ ತಿಲಕ ಪ್ರಶಸ್ತಿ’ ಪ್ರದಾನ - Karavali Times ಅ 18-19 ರಂದು ಇರ್ವತ್ತೂರುಪದವಿನಲ್ಲಿ ಶಾರದಾ ಪೂಜಾ ಮಹೋತ್ಸವದ ದಶಮಾನೋತ್ಸವ : ಡಾ. ಮೋಹನ್ ಆಳ್ವಗೆ ‘ಶ್ರೀ ಶಾರದಾ ತಿಲಕ ಪ್ರಶಸ್ತಿ’ ಪ್ರದಾನ - Karavali Times

728x90

16 October 2026

ಅ 18-19 ರಂದು ಇರ್ವತ್ತೂರುಪದವಿನಲ್ಲಿ ಶಾರದಾ ಪೂಜಾ ಮಹೋತ್ಸವದ ದಶಮಾನೋತ್ಸವ : ಡಾ. ಮೋಹನ್ ಆಳ್ವಗೆ ‘ಶ್ರೀ ಶಾರದಾ ತಿಲಕ ಪ್ರಶಸ್ತಿ’ ಪ್ರದಾನ

ಬಂಟ್ವಾಳ, ಅಕ್ಟೋಬರ್ 16, 2026 (ಕರಾವಳಿ ಟೈಮ್ಸ್) : ಇರ್ವತ್ತೂರುಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ, ಶ್ರೀ ಶಾರದ ಸೇವಾ ಟ್ರಸ್ಟ್ ಹಾಗೂ ದಶಮಾನೋತ್ಸವ ಸಮಿತಿ ಆಶ್ರಯದಲ್ಲಿ ಅಕ್ಟೋಬರ್ 18 ಮತ್ತು 19 ರಂದು ಮೂಡುಪಡುಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಶ್ರೀ ಶಾರದೋತ್ಸವದ ದಶಮಾನೋತ್ಸವ “ದಶಾರದ ಸಂಭ್ರಮ-2026” ನಡೆಯಲಿದೆ ಎಂದು ಶ್ರೀ ಶಾರದ ಸೇವಾ ಟ್ರಸ್ಟ್ ಅಧ್ಯಕ್ಷ ಡಾ ರಾಮಕೃಷ್ಣ ಎಸ್, ಶ್ರೀ ಶಾರದೋತ್ಸವ ಸೇವಾ ಸಮಿತಿ ಅಧ್ಯಕ್ಷ ಸುಧೀಂದ್ರ ಶೆಟ್ಟಿ ಎರ್ಮೆನಾಡು, ದಶಮಾನೋತ್ಸವ ಸಾಂಸ್ಕ್ರತಿಕ ಸಮಿತಿ ಅಧ್ಯಕ್ಷ ಆಲದಪದವು ಗೋಪಾಲ ಅಂಚನ್ ತಿಳಿಸಿದ್ದಾರೆ.

ಅ. 18 ರಂದು ಬೆಳಿಗ್ಗೆ ಶ್ರೀಶಾರದಾ ದೇವಿಯ ಪ್ರತಿಷ್ಠೆ, ವಿವಿಧ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಭಕ್ತಿ ರಸಮಂಜರಿ, ಅನ್ನಸಂತರ್ಪಣೆ, ತೆಲಿಕೆದ ಗೊಂಚಿಲ್ ಹಾಸ್ಯ ಕಾರ್ಯಕ್ರಮ, ನೃತ್ಯ ವೈಭವ, ಭರತನಾಟ್ಯ, ಸಂಜೆ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅವರಿಗೆ “ಶ್ರೀ ಶಾರದ ತಿಲಕ ಪ್ರಶಸ್ತಿ” ಪ್ರದಾನ, “ದಶಾರದ” ಸ್ಮರಣ ಸಂಚಿಕೆ ಬಿಡುಗಡೆ, ರಾತ್ರಿ ತುಳು ನಾಟಕ ನಡೆಯಲಿದೆ ಎಂದು  ಅವರು ತಿಳಿಸಿದ್ದಾರೆ. 

ಅ. 19 ರಂದು ಬೆಳಿಗ್ಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ತಾಲೂಕು ಮಟ್ಟದ ಆಯ್ದ ತಂಡಗಳಿಂದ ಮಕ್ಕಳ ಕುಣಿತ ಭಜನಾ ಸ್ಪರ್ಧೆ, ನೃತ್ಯ ವೈಭವ, ಮಹಾಪೂಜೆ, ಧಾರ್ಮಿಕ ಸಭೆ, ಯಕ್ಷಗಾನ ತಾಳಮದ್ದಳೆ, ಸಂಜೆ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆಯಲಿದೆ. 

ದಶಮಾನೋತ್ಸವಕ್ಕೆ ಸಿದ್ಧತೆ ನಡೆದಿದ್ದು, ಡಾ. ರಾಮಕೃಷ್ಣ ಎಸ್ ಅಧ್ಯಕ್ಷ, ಟಿ. ಹರೀಂದ್ರ ಪೈ ಕಾರ್ಯಾಧ್ಯಕ್ಷ, ಶೇಖರ್ ಪೂಜಾರಿ ಅಗಲ್ದೋಡಿ ಉಪಾಧ್ಯಕ್ಷ, ಮೋಹನ್ ಶೆಟ್ಟಿ ನರ್ವಲ್ದಡ್ಡ ಸಂಚಾಲಕ,  ದಯಾನಂದ ಎಸ್. ಎರ್ಮೆನಾಡು ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀ ಶಾರದ ಸೇವಾ ಟ್ರಸ್ಟ್, ಸುದೀಂದ್ರ ಶೆಟ್ಟಿ ಎರ್ಮೆನಾಡು ಅಧ್ಯಕ್ಷ, ಚಂದ್ರಹಾಸ ನಾಯ್ಕ ಎರ್ಮೆನಾಡು ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀ ಶಾರದೋತ್ಸವ ಸೇವಾ ಸಮಿತಿ, ಸತೀಶ್ ಪೂಜಾರಿ ಬೆನಕ ಅಧ್ಯಕ್ಷ, ಶಂಕರ ಶೆಟ್ಟಿ ಬೆದ್ರಮಾರು ಸಂಚಾಲಕರಾಗಿರುವ ದಶಮಾನೋತ್ಸವ ಸಮಿತಿ, ಗೋಪಾಲ ಅಂಚನ್ ಅಧ್ಯಕ್ಷರಾಗಿರುವ ದಶಮಾನೋತ್ದವ ಸಾಂಸ್ಕ್ರತಿಕ ಸಮಿತಿ, ಸುಪ್ರೀತ್ ಜೈನ್ ಎಡ್ತೂರುಗುತ್ತು, ಹರೀಶ ಪೂಜಾರಿ ಎರ್ಮೆನಾಡು, ಪ್ರಶಾಂತ ದೇವಾಡಿಗ ಹಲೆಪ್ಪಾಡಿ, ಶೇಖರ ಕರ್ಕೇರಾ ಕಯ್ಯಾಬೆ ನಿರ್ದೇಶಕರಾಗಿರುವ ನಿರ್ದೇಶಕ ಮಂಡಳಿ ದಶಮಾನೋತ್ಸವದ ಯಶಸ್ವಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.                          

ಶ್ರೀ ಶಾರದೋತ್ಸವ ಸೇವಾ ಸಮಿತಿಯು ಈ ದಶಪಯಣದ ಹಾದಿಯಲ್ಲಿ ಸಮಾಜದ ಸರ್ವತೋಮುಖ ಪ್ರಗತಿಗೆ ಪೂರಕವಾಗಿ ನಿತ್ಯ ನಿರಂತರ ರಚನಾತ್ಮಕ, ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಾ ಜನಸಮುದಾಯದ ಪ್ರೀತಿ-ಗೌರವಾದರಗಳಿಗೆ ಪಾತ್ರವಾಗಿದೆ. ಜನಮಾನಸದಲ್ಲಿ ಧಾರ್ಮಿಕ ಜಾಗೃತಿ, ಸಂಸ್ಕಾರ ಮತ್ತು ಸಂಸ್ಕೃತಿಯ ಉದ್ದೀಪನ ಕಾರ್ಯದೊಂದಿಗೆ ಕಲೆ, ಸಾಹಿತ್ಯ, ಕ್ರೀಡೆ, ಆರೋಗ್ಯ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದ ಪ್ರಗತಿಯಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿದೆ.  

ಕೊರೊನಾ ಸಂದರ್ಭದಲ್ಲಿ ಅರ್ಹ ಕುಟುಂಬಗಳಿಗೆ  ರೇಷನ್ ಕಿಟ್ ವಿತರಣೆ, ಕೊರೊನ ವಾರಿಯರ್ಸ್ ಗಳಿಗೆ ಸನ್ಮಾನ, ನಿರಂತರ ಉಚಿತ ಆರೋಗ್ಯ ಶಿಬಿರಗಳ ಆಯೋಜನೆ, ಜೇನು ಸಾಕಾಣೆ ತರಬೇತಿ ಕಾರ್ಯಾಗಾರ,  ಪವರ್ ಮ್ಯಾನ್ ಗಳಿಗೆ ಗೌರವ, ಆಧಾರ್ ಕಾರ್ಡ್ ನೋಂದಣಿ ಶಿಬಿರ, ಅರ್ಹ ಕುಟುಂಗಳಿಗೆ ಮನೆ ನಿರ್ಮಾಣಕ್ಕೆ ಸಹಕಾರ, ಶ್ರೀನಿವಾಸನಗರ ಶಾಲೆಗೆ ಸ್ಟೀಲ್ ಕಪಾಟು ಕೊಡುಗೆ, ಕಾರ್ಮಿಕರ ನೋಂದಣಿ ಶಿಬಿರ, ಆನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಪರಿಸರದ ಜನತೆಗೆ ತುರ್ತು ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ, ಕ್ಯಾನ್ಸರ್ ಜಾಗೃತಿ ಅಭಿಯಾನ ಮತ್ತಿತರ ಕಾರ್ಯಕ್ರಮಗಳನ್ನು ನಿರಂತರ ನಡೆಸಲಾಗುತ್ತಿದೆ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ‘ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ್’ ಯೋಜನೆಯಡಿಯಲ್ಲಿ ಶ್ರೀ ಶಾರದೋತ್ಸವ ಸೇವಾ ಸಮಿತಿಯನ್ನು ‘ನಿಕ್ಷಯ ಮಿತ್ರ’ ಎಂದು ಗುರುತಿಸಲಾಗಿದ್ದು ಈ ಯೋಜನೆಯಂತೆ ಪೂಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ 8 ಟಿ.ಬಿ. ರೋಗಿಗಳಿಗೆ ಸುಮಾರು 60 ಸಾವಿರ ರೂಪಾಯಿ ವೆಚ್ಚದಲ್ಲಿ 6 ತಿಂಗಳುಗಳ ಕಾಲ ಪೌಷ್ಠಿಕ ಆಹಾರವನ್ನು ಒದಗಿಸಲಾಗುತ್ತಿದೆ.

ಶ್ರೀ ಶಾರದಾ ಸೇವಾ ಟ್ರಸ್ಟ್ (ರಿ.) ಇರ್ವತ್ತೂರುಪದವು ಸಂಸ್ಥೆಯು ಮೂಡುಪಡುಕೋಡಿ ಉನ್ನತೀಕರಿಸಿದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿದ್ದು, ಶಾಲಾ ಗೌರವ ಶಿಕ್ಷಕಿಗೆ ಮಾಸಿಕ ಗೌರವ ಧನ ಪಾವತಿಸುವಿಕೆ, ಶಾಲೆಗೆ ಚಿತ್ರಕಲಾ ಮತ್ತು ನೃತ್ಯ ಶಿಕ್ಷಕರ ನೇಮಕ, ಯು.ಕೆ.ಜಿ. ಮತ್ತು ಎಲ್.ಕೆ.ಜಿ. ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡಿಕೆ, ಶಾಲೆಯಲ್ಲಿ ವನಮಹೋತ್ಸವ ಆಚರಣೆ, ಪರೀಕ್ಷೆ ತಯಾರಿ ಕಾರ್ಯಾಗಾರಗಳು, ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರಗಳು, ಶಾಲಾ ಪ್ರವೇಶೋತ್ಸವದ ಅದ್ದೂರಿ ಆಚರಣೆ, ರಾಷ್ಟ್ರೀಯ ಹಬ್ಬಗಳ ಆಚರಣೆ, ಶಾಲೆಗೆ ಇಪ್ಪತೈದು ಸಾವಿರ ರೂಪಾಯಿ ವೆಚ್ಚದಲ್ಲಿ ಕಂಪ್ಯೂಟರ್ ದುರಸ್ತಿ ಹಾಗೂ ಕಂಪ್ಯೂಟರ್ ಶಿಕ್ಷಕರ ನೇಮಕ, ಶಾಲೆಯ ಗೋಡೆಗಳಿಗೆ ಅಕ್ರಾಲಿಕ್ ಚಿತ್ರಗಳ ಶೃಂಗಾರ ಮೊದಲಾದ ಯೋಜನೆಗಳನ್ನು ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಮೂಡುಪಡುಕೋಡಿ ಶಾಲೆಗೆ ಒಳಾಂಗಣ ವೇದಿಕೆ, ಸಭಾಂಗಣಕ್ಕೆ ಟೈಲ್ಸ್ ಅಳವಡಿಕೆ, ಶಾಲಾ ಮುಂಭಾಗಕ್ಕೆ ಇಂಟರ್‍ಲಾಕ್ ಹಾಗೂ ಶೀಟ್ ಅಳವಡಿಕೆ, ತರಗತಿಗಳಿಗೆ ಸ್ಪೀಕರ್ ಅಳವಡಿಸಲು ಸುಮಾರು 15 ಲಕ್ಷ ರೂಪಾಯಿಯ ಯೋಜನೆಯು ಸಂಸ್ಥೆಯ ಮುಂದಿದೆ. ಇದರ ಯಶಸ್ವಿಗಾಗಿ ಸಹೃದಯಿ ದಾನಿಗಳ ನೆರವನ್ನು ನಿರೀಕ್ಷಿಸಲಾಗಿದೆ ಎಂದು ಶ್ರೀ ಶಾರದಾ ಸೇವಾ ಟ್ರಸ್ಟ್ ಅಧ್ಯಕ್ಷ ಡಾ ರಾಮಕೃಷ್ಣ ಎಸ್ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅ 18-19 ರಂದು ಇರ್ವತ್ತೂರುಪದವಿನಲ್ಲಿ ಶಾರದಾ ಪೂಜಾ ಮಹೋತ್ಸವದ ದಶಮಾನೋತ್ಸವ : ಡಾ. ಮೋಹನ್ ಆಳ್ವಗೆ ‘ಶ್ರೀ ಶಾರದಾ ತಿಲಕ ಪ್ರಶಸ್ತಿ’ ಪ್ರದಾನ Rating: 5 Reviewed By: karavali Times
Scroll to Top