ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರಾವಳಿ ಟೈಮ್ಸ್ ವಿಶೇಷ ಲೇಖನ
- ಡಿ.ಎಸ್.ಐ.ಬಿ ಪಾಣೆಮಂಗಳೂರು
ಕನ್ನಡ ರಾಜ್ಯೋತ್ಸವವೆಂದರೆ ಕೇವಲ ಒಂದು ಹಬ್ಬವಲ್ಲ, ಅದು ಕನ್ನಡಿಗರ ಆತ್ಮಗೌರವದ ಪ್ರತೀಕ. ನಮ್ಮ ನಾಡು, ನುಡಿ, ಸಂಸ್ಕೃತಿ, ಪರಂಪರೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಸ್ಮರಿಸುವ ವಿಶೇಷ ಸಂದರ್ಭ. ನವೆಂಬರ್ 1 ರಂದು ಇಡೀ ನಾಡು ಕೆಂಪು-ಹಳದಿ ಬಣ್ಣಗಳಿಂದ ಕಂಗೊಳಿಸುವಾಗ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲೂ ಅಭಿಮಾನದ ಭಾವನೆ ಮೂಡುತ್ತದೆ. ಆದರೆ ಈ ಸಂಭ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಕನ್ನಡದ ಮೇಲಿನ ಪ್ರೀತಿ ನಮ್ಮ ಮಾತಿನಲ್ಲಿ ಮಾತ್ರವಲ್ಲ, ನಮ್ಮ ನಡೆ, ನುಡಿ, ಶಿಕ್ಷಣ, ವ್ಯವಹಾರ ಮತ್ತು ಜೀವನ ಶೈಲಿಯಲ್ಲಿಯೂ ಪ್ರತಿಬಿಂಬಿಸಬೇಕು.
ಒಂದು ನಾಡಿನ ನಿಜವಾದ ಶ್ರೀಮಂತಿಕೆ ಅದರ ಸಂಪತ್ತಿನಲ್ಲಿ ಮಾತ್ರ ಇರುವುದಿಲ್ಲ; ಆ ನಾಡಿನ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನರ ನಡುವಿನ ಪ್ರೀತಿ-ವಿಶ್ವಾಸದಲ್ಲಿ ಅಡಗಿರುತ್ತದೆ. ಅಂತಹ ಶ್ರೀಮಂತ ಪರಂಪರೆಯನ್ನು ಹೊಂದಿರುವ ನಮ್ಮ ಕರ್ನಾಟಕ ನಾಡು ಹಲವು ಭಾಷೆ, ಧರ್ಮ, ಜಾತಿ ಮತ್ತು ಸಂಸ್ಕೃತಿಗಳ ಜನರನ್ನು ಒಂದೇ ನೆಲದಲ್ಲಿ ಒಗ್ಗೂಡಿಸಿರುವ ಸೌಹಾರ್ದದ ಭೂಮಿಯಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ನಾಡು ನಿಜಕ್ಕೂ ಸರ್ವ ಜನಾಂಗದ ಶಾಂತಿಯ ತೋಟವಾಗಿಯೇ ಉಳಿಯಬೇಕು.
ಕನ್ನಡ ಭಾಷೆಯ ಉಳಿವಿನ ಬಗ್ಗೆ ಇಂದು ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ. ಕನ್ನಡ ಮಾತನಾಡುವವರ ಸಂಖ್ಯೆ ಇದ್ದ ಮಾತ್ರಕ್ಕೆ ಭಾಷೆ ಉಳಿದಂತಾಗುವುದಿಲ್ಲ. ಕನ್ನಡದಲ್ಲಿ ಓದುವವರು, ಬರೆಯುವವರು, ಸಾಹಿತ್ಯ ರಚಿಸುವವರು, ಜ್ಞಾನ ಹಂಚುವವರು ಮತ್ತು ಮುಂದಿನ ಪೀಳಿಗೆಗೆ ಭಾಷೆಯನ್ನು ಕಲಿಸುವವರು ಹೆಚ್ಚಾಗಬೇಕು. ಮನೆಗಳಲ್ಲಿ ಕನ್ನಡ ಮಾತನಾಡುವ ವಾತಾವರಣ ನಿರ್ಮಾಣವಾಗಬೇಕು. ಮಕ್ಕಳಿಗೆ ಕನ್ನಡದ ಕಥೆ, ಕವನ, ಗಾದೆ, ಜನಪದ ಸಾಹಿತ್ಯ ಮತ್ತು ನಮ್ಮ ನಾಡಿನ ಇತಿಹಾಸವನ್ನು ಪರಿಚಯಿಸಬೇಕು. ಬೇರೆ ಭಾಷೆಗಳನ್ನು ಕಲಿಯುವುದಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಇತರ ಭಾಷೆಗಳ ಜ್ಞಾನ ಪಡೆಯುವಾಗ ತಾಯ್ನುಡಿಯ ಮೇಲಿನ ಪ್ರೀತಿ ಮತ್ತು ಗೌರವ ಕಡಿಮೆಯಾಗಬಾರದು.
ಇಂದು ವಿಶೇಷವಾಗಿ ಕನ್ನಡ ಶಾಲೆಗಳ ಉಳಿವು ನಮ್ಮೆಲ್ಲರ ಚಿಂತನೆಯ ವಿಷಯವಾಗಬೇಕು. ಅನೇಕ ಕಡೆ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿ. ಒಂದು ಕನ್ನಡ ಶಾಲೆ ಮುಚ್ಚಿದರೆ ಕೇವಲ ಒಂದು ಕಟ್ಟಡದ ಬಾಗಿಲು ಮುಚ್ಚಿದಂತಲ್ಲ, ಆ ಊರಿನ ಭಾಷೆ, ಸಂಸ್ಕೃತಿ ಮತ್ತು ಭವಿಷ್ಯದ ಒಂದು ಅವಕಾಶವೇ ಕಳೆದುಹೋದಂತಾಗುತ್ತದೆ. ಕನ್ನಡ ಶಾಲೆಗಳನ್ನು ಉಳಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಸ್ಥಳೀಯ ಸಂಘ-ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳು, ಪೆÇೀಷಕರು ಮತ್ತು ಸಾರ್ವಜನಿಕರು ಕೈಜೋಡಿಸಬೇಕು. ಶಾಲೆಗಳಿಗೆ ಉತ್ತಮ ಸೌಲಭ್ಯ, ಗುಣಮಟ್ಟದ ಶಿಕ್ಷಣ, ಗ್ರಂಥಾಲಯ, ತಂತ್ರಜ್ಞಾನ ಮತ್ತು ಸಮರ್ಥ ಶಿಕ್ಷಕರ ವ್ಯವಸ್ಥೆ ಕಲ್ಪಿಸಬೇಕು. ಕನ್ನಡ ಶಾಲೆಯಲ್ಲಿ ಓದಿದ ಮಕ್ಕಳಿಗೂ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶಗಳು ದೊರೆಯುವಂತಾಗಬೇಕು. ಕನ್ನಡ ಶಾಲೆ ಎಂದರೆ ಕಡಿಮೆ ಗುಣಮಟ್ಟದ ಶಿಕ್ಷಣ ಎಂಬ ತಪ್ಪು ಕಲ್ಪನೆಯನ್ನು ದೂರಮಾಡಬೇಕು.
ಕನ್ನಡ ಭಾಷೆಯ ಬೆಳವಣಿಗೆಗೆ ಸಾಹಿತಿಗಳು, ಕವಿಗಳು, ಲೇಖಕರು ಮತ್ತು ಕಲಾವಿದರ ಕೊಡುಗೆ ಅಪಾರವಾಗಿದೆ. ಅವರ ಸಾಹಿತ್ಯವೇ ಒಂದು ಸಮಾಜದ ಆಲೋಚನೆ, ನೋವು, ಕನಸು ಮತ್ತು ಬದುಕಿನ ಪ್ರತಿಬಿಂಬವಾಗಿದೆ. ಆದರೆ ಇಂದಿನ ಸಮಾಜದಲ್ಲಿ ಸಾಹಿತ್ಯ ರಚಿಸುವವರನ್ನು ಮತ್ತು ಕನ್ನಡಕ್ಕಾಗಿ ಶ್ರಮಿಸುವವರನ್ನು ನಾವು ಎಷ್ಟು ಗೌರವಿಸುತ್ತಿದ್ದೇವೆ ಎಂಬುದನ್ನೂ ಪ್ರಶ್ನಿಸಿಕೊಳ್ಳಬೇಕು. ಕೇವಲ ರಾಜ್ಯೋತ್ಸವದ ವೇದಿಕೆಯಲ್ಲಿ ಸನ್ಮಾನ ಮಾಡುವುದಕ್ಕಿಂತ ಅವರ ಕೃತಿಗಳನ್ನು ಓದುವುದು, ಪುಸ್ತಕಗಳನ್ನು ಖರೀದಿಸುವುದು, ಹೊಸ ಬರಹಗಾರರನ್ನು ಪೆÇ್ರೀತ್ಸಾಹಿಸುವುದು ಮತ್ತು ಸಾಹಿತ್ಯ ಕಾರ್ಯಕ್ರಮಗಳಿಗೆ ಬೆಂಬಲ £ೀಡುವುದು £ಜವಾದ ಗೌರವವಾಗಿದೆ. ಊರಿನ ಪ್ರತಿಭಾವಂತ ಕವಿಗಳು, ಲೇಖಕರು ಮತ್ತು ಕಲಾವಿದರನ್ನು ಗುರುತಿಸಿ ಪೆÇ್ರೀತ್ಸಾಹಿಸುವ ಸಂಸ್ಕೃತಿ ಬೆಳೆಸಬೇಕು. ಕನ್ನಡ ಸಾಹಿತ್ಯವು ಗ್ರಂಥಾಲಯಗಳಲ್ಲಷ್ಟೇ ಉಳಿಯದೆ ಜನರ ದೈನಂದಿನ ಬದುಕಿನ ಭಾಗವಾಗಬೇಕು.
ಕರ್ನಾಟಕದ ಸಂಸ್ಕೃತಿ ಎಂದರೆ ಕೇವಲ ಪುಸ್ತಕಗಳಲ್ಲಿರುವ ಇತಿಹಾಸವಲ್ಲ. ಅದು ನಮ್ಮ ಜನಪದ ಕಲೆಗಳಲ್ಲಿ, ಹಬ್ಬ-ಹರಿದಿನಗಳಲ್ಲಿ, ಆಹಾರ ಪದ್ಧತಿಯಲ್ಲಿ, ಆಚರಣೆಗಳಲ್ಲಿ, ಸಂಗೀತದಲ್ಲಿ ಮತ್ತು ಜನರ ಬದುಕಿನಲ್ಲಿ ಜೀವಂತವಾಗಿದೆ. ಯಕ್ಷಗಾನ, ನಾಟಕ, ಜನಪದ ಗೀತೆ, ಕಂಬಳ, ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ಅನೇಕ ಕಲಾ ಪ್ರಕಾರಗಳು ನಮ್ಮ ನಾಡಿನ ಸಾಂಸ್ಕೃತಿಕ ವೈಭವವನ್ನು ಸಾರುತ್ತವೆ. ಇಂತಹ ಕಲೆಗಳನ್ನು ಉಳಿಸುವ ಕಲಾವಿದರಿಗೆ ಸಮಾಜದಲ್ಲಿ ಸೂಕ್ತ ಗೌರವ ಮತ್ತು ಪೆÇ್ರೀತ್ಸಾಹ ದೊರೆಯಬೇಕು. ಆಧುನಿಕತೆಯ ಹೆಸರಿನಲ್ಲಿ ನಮ್ಮ ಸಾಂಪ್ರದಾಯಿಕ ಕಲೆಗಳು ಮರೆಯಾಗದಂತೆ ಮುಂದಿನ ಪೀಳಿಗೆಗೆ ಅವುಗಳನ್ನು ಪರಿಚಯಿಸುವುದು ಅಗತ್ಯವಾಗಿದೆ.
ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ವೈಭವ ನಮ್ಮ ಕರ್ನಾಟಕದ ಹೆಮ್ಮೆಯಾಗಿದೆ. ತುಳುನಾಡಿನ ಮಣ್ಣಿನಲ್ಲಿ ಬೆರೆತಿರುವ ಯಕ್ಷಗಾನ, ಕಂಬಳ, ದಫ್ ಇನ್ನಿತರ ಧಾರ್ಮಿಕ ಮತ್ತು ಜನಪದ ಸಂಪ್ರದಾಯಗಳು ನಮ್ಮ ನಾಡಿನ ವಿಶಿಷ್ಟ ಗುರುತಾಗಿವೆ. ಕನ್ನಡದ ಜೊತೆಗೆ ತುಳು, ಕೊಂಕಣಿ, ಬ್ಯಾರಿ ಮತ್ತು ಇತರ ಭಾಷೆಗಳೂ ಈ ಭಾಗದ ಸಾಂಸ್ಕೃತಿಕ ಬದುಕಿಗೆ ತಮ್ಮದೇ ಆದ ಕೊಡುಗೆ ನೀಡಿವೆ. ವಿವಿಧ ಭಾಷೆ, ಧರ್ಮ ಮತ್ತು ಸಂಪ್ರದಾಯಗಳನ್ನು ಗೌರವಿಸುತ್ತಾ ಒಟ್ಟಾಗಿ ಬದುಕುವ ಇಲ್ಲಿನ ಸಹಬಾಳ್ವೆಯ ಮನೋಭಾವ ಇಡೀ ಸಮಾಜಕ್ಕೆ ಮಾದರಿಯಾಗಬೇಕು. ನಮ್ಮ ಭಾಷೆಯನ್ನು ಪ್ರೀತಿಸುವುದರ ಜೊತೆಗೆ ನಮ್ಮ ಸುತ್ತಲಿನ ಭಾಷೆ ಮತ್ತು ಸಂಸ್ಕೃತಿಗಳನ್ನೂ ಗೌರವಿಸುವ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು.
ಒಂದು ಸಮಾಜದ ಶಕ್ತಿ ಅದರ ಜನರ ಒಗ್ಗಟ್ಟಿನಲ್ಲಿದೆ. ಜಾತಿ, ಧರ್ಮ, ಭಾಷೆ ಮತ್ತು ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಮನುಷ್ಯರನ್ನು ವಿಭಜಿಸುವ ಮನೋಭಾವ ಸಮಾಜದ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ದೇವಾಲಯ, ಮಸೀದಿ, ಚರ್ಚ್ ಮತ್ತು ಇತರ ಧಾರ್ಮಿಕ ಕೇಂದ್ರಗಳು ವಿಭಿನ್ನ ನಂಬಿಕೆಗಳನ್ನು ಪ್ರತಿನಿಧಿಸಿದರೂ ಮಾನವೀಯತೆ ಎಲ್ಲರನ್ನೂ ಒಂದುಗೂಡಿಸುವ ಮೌಲ್ಯವಾಗಬೇಕು. ಪರಸ್ಪರ ಗೌರವ, ಸಹಾಯ, ಪ್ರೀತಿ ಮತ್ತು ವಿಶ್ವಾಸದಿಂದ ಬದುಕಿದಾಗ ಮಾತ್ರ ನಮ್ಮ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಯಲು ಸಾಧ್ಯ. ಭಾಷಾಭಿಮಾನ ಎಂದಿಗೂ ದ್ವೇಷಕ್ಕೆ ಕಾರಣವಾಗಬಾರದು; ಅದು ಜನರನ್ನು ಒಗ್ಗೂಡಿಸುವ ಶಕ್ತಿಯಾಗಬೇಕು.
ಇಂದಿನ ಪೀಳಿಗೆಗೆ ನಾವು ಕೇವಲ ಆಸ್ತಿ, ಹಣ ಮತ್ತು ಶಿಕ್ಷಣವನ್ನು ನೀಡಿದರೆ ಸಾಲದು. ನಮ್ಮ ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಮಾನವೀಯ ಮೌಲ್ಯಗಳನ್ನೂ ನೀಡಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸುವುದರ ಜೊತೆಗೆ ನಾಡಿನ ಇತಿಹಾಸ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಪರಿಚಯ ಮಾಡಿಸಬೇಕು. ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಬೇಕು. ಕನ್ನಡದಲ್ಲಿ ಪುಸ್ತಕಗಳು, ಲೇಖನಗಳು, ವಿಜ್ಞಾನ ಮತ್ತು ತಂತ್ರಜ್ಞಾನದ ಮಾಹಿತಿಯನ್ನು ಸೃಷ್ಟಿಸಬೇಕು. ಕನ್ನಡವನ್ನು ಹಳೆಯ ನೆನಪಾಗಿ ಉಳಿಸದೆ ಹೊಸ ಆವಿಷ್ಕಾರ ಮತ್ತು ಜ್ಞಾನದ ಭಾಷೆಯಾಗಿ ಬೆಳೆಸಬೇಕು.
ಕನ್ನಡದ ಉಳಿವು ಕೇವಲ ಕನ್ನಡಿಗರ ಹಕ್ಕಿನ ಪ್ರಶ್ನೆಯಲ್ಲ, ಅದು ನಮ್ಮ ಮುಂದಿನ ಪೀಳಿಗೆಗೆ ನೀಡಬೇಕಾದ ಸಾಂಸ್ಕೃತಿಕ ಜವಾಬ್ದಾರಿಯಾಗಿದೆ. ಇಂದು ನಾವು ಕನ್ನಡ ಶಾಲೆಗಳನ್ನು ಉಳಿಸಿದರೆ ನಾಳೆ ಕನ್ನಡದಲ್ಲಿ ಕಲಿಯುವ ಮಕ್ಕಳು ಹೆಚ್ಚಾಗುತ್ತಾರೆ. ಇಂದು ಸಾಹಿತಿ, ಕವಿ ಮತ್ತು ಕಲಾವಿದರನ್ನು ಗೌರವಿಸಿದರೆ ನಾಳೆ ಹೊಸ ಪ್ರತಿಭೆಗಳು ಹುಟ್ಟಿಕೊಳ್ಳುತ್ತವೆ. ಇಂದು ನಮ್ಮ ಸಂಸ್ಕೃತಿಯನ್ನು ಪೆÇ್ರೀತ್ಸಾಹಿಸಿದರೆ ನಾಳೆ ನಮ್ಮ ಪರಂಪರೆ ಜೀವಂತವಾಗಿರುತ್ತದೆ. ಇಂದು ಸಮಾಜದಲ್ಲಿ ಸಾಮರಸ್ಯ ಬೆಳೆಸಿದರೆ ನಾಳೆ ನಮ್ಮ ಮಕ್ಕಳು ಶಾಂತಿ ಮತ್ತು ಸಹಬಾಳ್ವೆಯ ನಾಡಿನಲ್ಲಿ ಬದುಕಬಹುದು.
ನಮ್ಮ ಮುಂದಿನ ಪೀಳಿಗೆಗೆ ನಾವು ಬಿಟ್ಟುಹೋಗಬೇಕಾದದ್ದು ಕೇವಲ ಅಭಿವೃದ್ಧಿ ಹೊಂದಿದ ಕಟ್ಟಡಗಳಲ್ಲ; ಜೀವಂತ ಭಾಷೆ, ಶ್ರೀಮಂತ ಸಂಸ್ಕೃತಿ, ಗೌರವಯುತ ಶಿಕ್ಷಣ ಮತ್ತು ಶಾಂತಿಯುತ ಸಮಾಜ. ಕನ್ನಡವನ್ನು ಉಳಿಸುವುದೆಂದರೆ ನಮ್ಮ ಅಸ್ಮಿತೆಯನ್ನು ಉಳಿಸುವುದು. ಕನ್ನಡ ಶಾಲೆಯನ್ನು ಉಳಿಸುವುದೆಂದರೆ ನಮ್ಮ ಭವಿಷ್ಯವನ್ನು ಉಳಿಸುವುದು. ಸಂಸ್ಕೃತಿಯನ್ನು ಬೆಳೆಸುವುದೆಂದರೆ ನಮ್ಮ ಬೇರುಗಳನ್ನು ಗಟ್ಟಿಗೊಳಿಸುವುದು.
ಕನ್ನಡ ನಾಡು ಸದಾ ಸರ್ವ ಜನಾಂಗದ ಶಾಂತಿಯ ತೋಟವಾಗಿರಲಿ. ಕನ್ನಡದ ಕಂಪು ಜಗತ್ತಿನಾದ್ಯಂತ ಪಸರಿಸಲಿ. ನಮ್ಮ ಭಾಷೆ, ನೆಲ, ಜಲ, ಕಲೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಹಸ್ತಾಂತರಿಸುವ ಜವಾಬ್ದಾರಿಯನ್ನು ನಾವೆಲ್ಲರೂ £ಭಾಯಿಸೋಣ.
ಕನ್ನಡ ನಮ್ಮ ಹೆಮ್ಮೆ, ಸಂಸ್ಕೃತಿ ನಮ್ಮ ಶಕ್ತಿ, ಒಗ್ಗಟ್ಟು ನಮ್ಮ ಸಂಪತ್ತು, ಮುಂದಿನ ಪೀಳಿಗೆ ನಮ್ಮ ಜವಾಬ್ದಾರಿ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ! ಜೈ ಕರ್ನಾಟಕ!












0 comments:
Post a Comment